ಕರ್ನಾಟಕ

ಸಿಎಂ ಬಜೆಟ್ ಮಂಡನೆ ವೇಳೆ ಪವರ್ ಕಟ್: ಜನತೆಯ ಕ್ಷಮೆಯಾಚಿಸಿದ ಡಿಕೆಶಿ

Pinterest LinkedIn Tumblr

dks-18ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲೇ ವಿದ್ಯುತ್ ಕೈಕೊಟ್ಟಿದ್ದರಿಂದ ರಾಜ್ಯ ಸರ್ಕಾರಕ್ಕೆ ಮುಜಗರವಾಗಿದ್ದು ನಿಜ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಶನಿವಾರ ಒಪ್ಪಿಕೊಂಡಿದ್ದಾರೆ.
ನಿನ್ನೆ ವಿಧಾನಸಭೆಯಲ್ಲಿ ಎರಡು ಬಾರಿ ವಿದ್ಯುತ್ ಕಡಿತಗೊಂಡ ಘಟನೆಯ ಬಗ್ಗೆ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೂ ಸೂಚಿಸಿದ್ದೇನೆ. ಆದರೆ ಇದುವರೆಗೂ ಅಧಿಕಾರಿಗಳ ಲಿಖಿತ ವರದಿ ನನ್ನ ಕೈ ಸೇರಿಲ್ಲ. ಫೋನ್ ಮೂಲಕ ಮಾಹಿತಿ ನೀಡಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯ ಕೊಠಡಿಯಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದು, ಈ ವೇಳೆ ಸ್ಪಾರ್ಕ್ ಆದ ಹಿನ್ನೆಲೆಯಲ್ಲಿ ಸಿಬ್ಬಂದಿ ಪವರ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಆದರೂ ಅಧಿಕಾರಿಗಳಿಗೆ ತಮ್ಮದೇ ಆದ ಜವಾಬ್ದಾರಿ ಇದೆ. ಪ್ರಕರಣ ಸಂಬಂಧ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಘಟನೆಗೆ ಕಾರಣರಾದವರ ತಲೆದಂಡ ಆಗಲೆಬೇಕು ಎಂದು ಸಚಿವರು ಹೇಳಿದ್ದಾರೆ. ಅಲ್ಲದೆ ಪವರ್ ಕಟ್ ಆಗಿದ್ದು ನಮ್ಮ ಇಲಾಖೆಗೂ ಶೇಮ್ ಆಗಿದೆ. ಹಾಗಾಗಿ ನಾನು ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
ಬಜೆಟ್ ಮಂಡನೆ ವೇಳೆ ಎರಡು ಬಾರಿ ವಿದ್ಯುತ್ ಕೈಕೊಟ್ಟಿದ್ದರಿಂದ ಸಿದ್ದರಾಮಯ್ಯ ಅವರು ಅಧಿಕಾರಿಯೊಬ್ಬರ ಮೊಬೈಲ್ ಫ್ಲ್ಯಾಶ್ ಲೈಟ್ ನಲ್ಲಿ ಭಾಷಣ ಓದಲು ಯತ್ನಿಸಿದ್ದರು. ಬಳಿಕ ವಿದ್ಯುತ್ ಬಂದಾಗ ಭಾಷಣ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಕತ್ತಲ ಭಾಗ್ಯ ಎಂದು ವ್ಯಂಗ್ಯವಾಡಿದ್ದರು.

Write A Comment