ರಾಷ್ಟ್ರೀಯ

ಒವೈಸಿ ಕಾರಿನ ಮೇಲೆ ಕಲ್ಲು ತೂರಾಟ: ಅದಿಲಾಬಾದ್ ನಲ್ಲಿ ಉದ್ವಿಗ್ನ ವಾತಾವರಣ

Pinterest LinkedIn Tumblr

asaduddin-owaisiಅದಿಲಾಬಾದ್: ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಅವರ ವಾಹನದ ಮೇಲೆ ವಿಎಚ್ ಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರಿಂದ ತೆಲಂಗಾಣ ರಾಜ್ಯದ ಅದಿಲಾಬಾದ್ ಜಿಲ್ಲೆಯ ಬೈನ್ಸಾ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಘಟನೆಯಲ್ಲಿ ಕೆಲವು ಪೊಲೀಸರಿಗೆ ಗಾಯವಾದ ವರದಿಯಾಗಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ.
ಸದ್ಯ ವಿವಾದದಲ್ಲಿರುವ ಸಂಸದ ಅಸದುದ್ದೀನ್ ಒವೈಸಿ ತಮ್ಮ ಬೆಂಬಲಿಗರೊಬ್ಬರ ಚಿನ್ನದ ಮಳಿಗೆಯನ್ನು ಉದ್ಘಾಟಿಸಲು ಬೈನ್ಸಾ ಪಟ್ಟಣಕ್ಕೆ ಆಗಮಿಸುತ್ತಿದ್ದರು. ಅವರು ಭಾರತ್ ಮಾತಾ ಕಿ ಜೈ ಎಂದು ಹೇಳಲು ನಿರಾಕರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಎಚ್ ಪಿ ಕಾರ್ಯಕರ್ತರು ಅದೇ ಸಂದರ್ಭದಲ್ಲಿ ರ್ಯಾಲಿ ನಡೆಸುತ್ತಿದ್ದರು.
100ಕ್ಕೂ ಹೆಚ್ಚು ವಿಎಚ್ ಪಿ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಚೇರಿಯೆದುರು ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ಸೇರಿದ್ದರು. ಅವರಿಗೆ ಅಸದುದ್ದೀನ್ ಬರುವ ಮಾಹಿತಿ ಸಿಕ್ಕಿತ್ತು. ಹಾಗಾಗಿ ಅವರ ವಾಹನವನ್ನು ತಡೆಯಲು ಯತ್ನಿಸಿದ್ದರು.
ಆದರೆ ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿ ತಹಸೀಲ್ದಾರರ ಕಚೇರಿ ಆವರಣದಲ್ಲಿ ಕೂಡಿಹಾಕಿದ್ದರು. ಆದರೂ ಕೆಲ ಪ್ರತಿಭಟನಾಕಾರರು ಹೊರಬಂದು ಅಸದುದ್ದೀನ್ ಒವೈಸಿ ವಾಹನಕ್ಕೆ ಕಲ್ಲು ತೂರಾಟ ನಡೆಸಿದರು.
ಆಗ ಒವೈಸಿ ಬೆಂಬಲಿಗರು ಪ್ರತೀಕಾರ ತೀರಿಸಲು ಮುಂದಾದರು. ಘಟನೆಯಲ್ಲಿ ಕೆಲ ಪೊಲೀಸರಿಗೆ ಗಾಯಗಳಾಗಿವೆ. ಸ್ಥಳೀಯ ಡಿಎಸ್ಪಿ ಈಗ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ಮಹಾ ನಿರ್ದೇಶಕ ತರುಣ್ ಜೋಶಿ ಸಹ ಸ್ಥಳಕ್ಕೆ ತೆರಳಿದ್ದಾರೆ.

Write A Comment