ಬೆಂಗಳೂರು: ರಾಜ್ಯದಲ್ಲಿ 43 ಹೊಸ ತಾಲೂಕು ರಚನೆ ಕುರಿತ 2013-14ನೇ ಸಾಲಿನ ಬಜೆಟ್ನಲ್ಲಿನ ಘೋಷಣೆಗೆ ಮರುಜೀವ ಸಿಕ್ಕಿದ್ದು, ಮುಖ್ಯಮಂತ್ರಿಗಳು ಅಸ್ತುಎಂದರೆ 43 ಪಟ್ಟಣ ಪ್ರದೇಶಗಳಿಗೆ ತಾಲೂಕು ಭಾಗ್ಯ ಸಿಗಲಿದೆ.
ಕಂದಾಯ ಇಲಾಖೆಯು ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ತಾಲೂಕುಗಳ ರಚನೆಯನ್ನು ಬಜೆಟ್ನಲ್ಲಿ ಕಾರ್ಯಗತಗೊಳಿಸಬೇಕು ಎಂದು ಬಜೆಟ್ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಮುಖ್ಯಮಂತ್ರಿ ಈ ಪ್ರಸ್ತಾವನೆಯನ್ನು ಒಪ್ಪುವರೆ ಎಂಬುದನ್ನು ಕಾದು ನೋಡಬೇಕಿದೆ.
ಒಂದು ಹೊಸ ತಾಲೂಕಿನ ಪೂರ್ಣ ಪ್ರಮಾಣದ ರಚನೆಗೆ ಕನಿಷ್ಠ 30 ಕೋಟಿ ರೂ. ವೆಚ್ಚ ತಗಲಬಹುದು. ಅದರಂತೆ 43 ತಾಲೂಕುಗಳಿಗೆ ಸುಮಾರು 1,290 ಕೋಟಿ ರೂ. ಹಣ ಬೇಕಾಗುತ್ತದೆ. ಇಷ್ಟೊಂದು ದೊಡ್ಡ ಮೊತ್ತ ಒಂದೇ ಬಜೆಟ್ನಲ್ಲಿ ಮೀಸಲಿಡಲು ಕಷ್ಟ ಎಂದಾದರೆ ಪ್ರತಿ ಹೊಸ ತಾಲೂಕಿಗೆ ಬೇಕಾಗುವ ಒಟ್ಟು ವೆಚ್ಚದಲ್ಲಿ ಶೇ. 50 ರಷ್ಟು ಈ ವರ್ಷ, ಅದೇ ರೀತಿ ಇನ್ನುಳಿದ ಶೇ.50ರಷ್ಟು ಹಣವನ್ನು ಮುಂದಿನ ವರ್ಷದ ಬಜೆಟ್ನಲ್ಲಿ ಮೀಸಲಿಡುವ ಪರಿಹಾರ ಸೂಚಿಸಿ ಕಂದಾಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
2103-14ನೇ ಸಾಲಿನ ಫೆಬ್ರವರಿಯಲ್ಲಿ ಆಗ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಮಂಡಿಸಿದ್ದ ಬಜೆಟ್ನಲ್ಲಿ ರಾಜ್ಯದಲ್ಲಿ 43 ಹೊಸ ತಾಲೂಕುಗಳ ರಚನೆ ಬಗ್ಗೆ ಘೋಷಣೆ ಮಾಡಿ ಪ್ರತಿ ಹೊಸ ತಾಲೂಕು ರಚನೆಗೆ 2 ಕೋಟಿ ರೂ.ಗಳಂತೆ 86 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿದ ಬಳಿಕ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅದೇ ವರ್ಷ ಜುಲೈನಲ್ಲಿ ಮಂಡಿಸಿದ ಬಜೆಟ್ನಲ್ಲಿ ಹೊಸ ತಾಲೂಕುಗಳ ರಚನೆ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಈ ಬಗ್ಗೆ ಬಿಜೆಪಿ ಹಾಗೂ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದಾಗ ಹೊಸ ತಾಲೂಕುಗಳ ರಚನೆ ಪ್ರಸ್ತಾಪ ನಮ್ಮ ಸರ್ಕಾರ ಕೈಬಿಟ್ಟಿಲ್ಲ ಎಂದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಸಮಜಾಯಿಷಿ ನೀಡಿದ್ದರು.
ಇದೇ ವೇಳೆ 2014-15ನೇ ಸಾಲಿನ ಬಜೆಟ್ನಲ್ಲೂ ಹೊಸ ತಾಲೂಕುಗಳ ರಚನೆ ಪ್ರಸ್ತಾಪ ಇರಲಿಲ್ಲ. ಆಗಲೂ ವಿರೋಧ ಕೇಳಿ ಬಂದಾಗ ಹೊಸ ತಾಲೂಕುಗಳ ರಚನೆಗೆ ಸರ್ಕಾರ ಬದ್ಧ ಎಂದು ಹೇಳುತ್ತಲೇ ಬಂದ ಮುಖ್ಯಮಂತ್ರಿಯವರು ಮತ್ತು ಕಂದಾಯ ಸಚಿವರು ಕ್ರಮೇಣ, ಪ್ರಸ್ತಾವಿತ 43 ಹೊಸ ತಾಲೂಕುಗಳ ಪೈಕಿ ಹೊಸ ತಾಲೂಕು ರಚನೆಗೆ ರಚಿಸಲಾಗಿದ್ದ ಮೂರು ಸಮಿತಿಗಳೂ ಶಿಫಾರಸು ಮಾಡದ ಕೆಲವೊಂದು ಪ್ರದೇಶಗಳು ಸೇರಿಕೊಂಡಿವೆ, ಅವುಗಳ ಬಗ್ಗೆ ಮರುಪರಿಶೀಲನೆ ನಡೆಸಬೇಕಾಗಿದೆ. ಜೊತೆಗೆ ಆರ್ಥಿಕ ಇತಿ-ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ ಎಂದು ಸಮಜಾಯಿಷಿ ನೀಡಿದ್ದರು.
ಇದರೊಂದಿಗೆ ತಾಲೂಕು ರಚನೆ ನೆನೆಗುದಿಗೆ ಬಿದ್ದಿತ್ತು. ಈ ನಡುವೆ ಚಾಲ್ತಿ (2015-16) ಬಜೆಟ್ ಮಂಡನೆಗೂ ಮೊದಲು ಕಂದಾಯ ಇಲಾಖೆ ಹೊಸ ತಾಲೂಕುಗಳ ರಚನೆ ಬಗ್ಗೆ ಮರು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಬಜೆಟ್ನಲ್ಲಿ ಘೋಷಣೆ ಮಾಡಿರಲಿಲ್ಲ. ಆಗಲೂ ವಿರೋಧ ಕಂಡು ಬಂದಾಗಹೊಸ ತಾಲೂಕುಗಳ ರಚನೆ ಪ್ರಸ್ತಾಪ ಕೈಬಿಟ್ಟಿಲ್ಲಅಂತಲೇ ಸರ್ಕಾರ ಹೇಳಿತ್ತು. ಇದೀಗ ಹೊಸ ಬಜೆಟ್ಗೆ ಕಂದಾಯ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗಳಲ್ಲಿ ಹೊಸ ತಾಲೂಕು ರಚನೆ ಪ್ರಸ್ತಾಪವೂ ಸೇರಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಈ ಬಾರಿಯ ಬಜೆಟ್ನಲ್ಲಿ ತಾಲೂಕು ಭಾಗ್ಯ ಸಿಗುವ ಸಾಧ್ಯತೆಯಿದೆ.
ಹೊಸ ಹೋಬಳಿ ರಚನೆಗೂ ಪ್ರಸ್ತಾಪ:
ಇದಲ್ಲದೇ ಆಡಳಿತಾತ್ಮಕ ಅನುಕೂಲಕ್ಕಾಗಿ 43 ಹೊಸ ತಾಲೂಕುಗಳಿಗೆ ಪೂರಕವಾಗಿ 124 ಹೋಬಳಿಗಳು ಮತ್ತು 11 ಉಪ ವಿಭಾಗಗಳನ್ನು ಹೊಸದಾಗಿ ರಚಿಸುವಂತೆಯೂ ಕಂದಾಯ ಇಲಾಖೆ ಬಜೆಟ್ ಪ್ರಸ್ತಾವನೆ ಸಲ್ಲಿಸಿದೆ.
ಪ್ರಸ್ತಾವಿತ 43 ಹೊಸ ತಾಲೂಕುಗಳು
ಬಾಗಲಕೋಟೆ ಜಿಲ್ಲೆ: ಗುಳೇದಗುಡ್ಡ, ರಬಕವಿ-ಬನಹಟ್ಟಿ, ಇಳಕಲ್
ಬೆಳಗಾವಿ ಜಿಲ್ಲೆ: ನಿಪ್ಪಾಣಿ, ಮೂಡಲಗಿ, ಕಾಗವಾಡ
ಚಾಮರಾಜನಗರ ಜಿಲ್ಲೆ: ಹನೂರು
ದಾವಣಗೆರೆ ಜಿಲ್ಲೆ: ನ್ಯಾಮತಿ
ಬೀದರ್ ಜಿಲ್ಲೆ: ಚಿಟಗುಪ್ಪ, ಹುಲಸೂರು, ಕಮಲನಗರ
ಬಳ್ಳಾರಿ ಜಿಲ್ಲೆ: ಕುರಗೋಡು, ಕೊಟ್ಟೂರು, ಕಂಪ್ಲಿ
ಧಾರವಾಡ ಜಿಲ್ಲೆ: ಅಣ್ಣಿಗೇರಿ, ಅಳ್ನಾವರ, ಹುಬ್ಬಳ್ಳಿ ನಗರ
ಗದಗ ಜಿಲ್ಲೆ: ಗಜೇಂದ್ರಗಡ, ಲಕ್ಷ್ಮೇಶ್ವರ
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ: ಕಾಳಗಿ, ಹುಣಸಗಿ, ಕಮಲಾಪುರ, ಯಡ್ರಾಮಿ, ಶಹಬಾದ್, ವಡಗೇರಾ, ಗುರುಮಠಕಲ್
ಕೊಪ್ಪಳ ಜಿಲ್ಲೆ: ಕುಕನೂರು, ಕನಕಗಿರಿ, ಕಾರಟಗಿ.
ರಾಯಚೂರು ಜಿಲ್ಲೆ: ಮಸ್ಕಿ, ಸಿರವಾರ.
ಉಡುಪಿ ಜಿಲ್ಲೆ: ಬ್ರಹ್ಮಾವರ, ಬೈಂದೂರು.
ದಕ್ಷಿಣ ಕನ್ನಡ ಜಿಲ್ಲೆ: ಮೂಡಬಿದರೆ, ಕಡಬ
ಬೆಂಗಳೂರು ನಗರ ಜಿಲ್ಲೆ: ಯಲಹಂಕ
ವಿಜಯಪುರ ಜಿಲ್ಲೆ: ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ, ಕೊಲ್ಹಾರ.
ಬಜೆಟ್ ಇಂದು ಮುದ್ರಣಕ್ಕೆ
ಬೆಂಗಳೂರು: ಶುಕ್ರವಾರ ಮಂಡಿಸಲಿರುವ 2016-17ನೇ ಸಾಲಿನ ಬಜೆಟ್ಗೆ ಅಂತಿಮ ಸ್ಪರ್ಶ ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರತರಾಗಿದ್ದಾರೆ.
ಬಜೆಟ್ ಅಂಕಿ- ಅಂಶಗಳು, ಇಲಾಖಾವಾರು ಅನುದಾನ ಬಿಡುಗಡೆ ಕುರಿತ ಕಾರ್ಯವನ್ನು ಬುಧವಾರ ಪುರ್ಣಗೊಳಿಸಿರುವ ಮುಖ್ಯಮಂತ್ರಿಗಳು ಗುರುವಾರ ಬಜೆಟ್ ಭಾಷಣ ಅಂತಿಮಗೊಳಿಸಲಿದ್ದಾರೆ. ಗುರುವಾರ ರಾತ್ರಿ ಅದಕ್ಕೆ ಅಂತಿಮ ಸ್ಪರ್ಶ ನೀಡಿ ಮುದ್ರಣಕ್ಕೆ ಕಳುಹಿಸಿಕೊಡಲಾಗುತ್ತದೆ.
ಮುಖ್ಯಮಂತ್ರಿಯಾದ ಬಳಿಕ ಮಂಡಿಸಿದ ಮೂರು ಬಜೆಟ್ಗಳಲ್ಲಿ ತಮ್ಮ ಅಹಿಂದ ಮತ್ತು ಸಾಮಾಜಿಕ ನ್ಯಾಯದ ಪರ ನಿಲುವು ತಳೆದಿದ್ದ ಸಿದ್ದರಾಮಯ್ಯ, ಈ ಬಾರಿ ಈ ವರ್ಗಕ್ಕೆ ವಿಶೇಷ ಒತ್ತು ನೀಡಿದರೂ ಎಲ್ಲಾ ಸಮುದಾಯಗಳನ್ನು ಒಳಗೊಂಡಂತೆ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಜತೆಗೆ ಜನಪ್ರಿಯ ಕಾರ್ಯಕ್ರಮಗಳನ್ನು ನೀಡುವ ಪ್ರಕ್ರಿಯೆ ಮುಂದುವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
-ರಫೀಕ್ ಅಹ್ಮದ್
-ಉದಯವಾಣಿ