ಕೊಪ್ಪಳ: ಎಲ್ಲಾ ಸ್ವಾಮೀಜಿಗಳಿಗೆ ಲೈಂಗಿಕ ಶಿಕ್ಷಣದ ಅಗತ್ಯವಿದ್ದು, ಅವರು ಈ ಬಗ್ಗೆ ಪರಿಜ್ಞಾನವನ್ನು ಹೊಂದಬೇಕು. ಇಲ್ಲವಾದಲ್ಲಿ ಎಲ್ಲರೂ ನಿತ್ಯಾನಂದ ಸ್ವಾಮೀಗಳಾಂತಾಗುತ್ತಾರೆ ಎಂದು ಖ್ಯಾತ ಮನೋರೋಗ ತಜ್ಞ ಡಾ.ಅಶೋಕ್ ಪೈ ಹೇಳಿದ್ದಾರೆ.
ನಗರದಲ್ಲಿ ನಡೆದ ಮನೋಚೈತನ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಅಶೋಕ್ ಪೈ “ಪ್ರೌಢ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ನಾನು ಹಿಂದೆಯೇ ಶಿಫಾರಸ್ಸು ಮಾಡಿದ್ದು, ಪುಸ್ತಕ ಮತ್ತು ಲೈಂಗಿಕ ಶಿಕ್ಷಣದ ಸಾಹಿತ್ಯವೂ ತಯಾರು ಮಾಡಿದ್ದೇನೆ. ಆದರೆ, ಇದಕ್ಕೆ ಸರ್ಕಾರದಲ್ಲಿರುವ ಕೆಲ ಮಂತ್ರಿಗಳು ಹಾಗೂ ರಾಜ್ಯದ ಮೂವರು ಮಠಾಧೀಶರು ವಿರೋಧಿಸಿದ್ದಾರೆ. ದೈಹಿಕವಾಗಿ ಆಗುವ ಬೆಳವಣಿಗೆಗಳ ಕುರಿತು ಮಕ್ಕಳಿಗೆ ಸಹಜವಾಗಿ ಜ್ಞಾನ ಬೇಕಾಗಿದೆ” ಎಂದು ಹೇಳಿದರು.
ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ.ಅಶೋಕ್ ಪೈ ಅವರು, “ಲೈಂಗಿಕ ಜ್ಞಾನ ಮಕ್ಕಳಿಗೆ ಪ್ರೌಢಶಾಲಾ ಹಂತದಲ್ಲಿ ನೀಡಿದರೆ ಲೈಂಗಿಕ ಅಪರಾಧವನ್ನು ಕಡಿಮೆ ಮಾಡಬಹುದು. ಅಲ್ಲದೇ ಸ್ವಾಮೀಜಿಗಳಿಗೂ ಲೈಂಗಿಕ ಶಿಕ್ಷಣದ ಅಗತ್ಯವಿದ್ದು, ಲೈಂಗಿಕ ಶಿಕ್ಷಣ ನೀಡದಿದ್ದರೆ ಎಲ್ಲಾ ಸ್ವಾಮೀಜಿಗಳು ನಿತ್ಯಾನಂದರಾಗುತ್ತಾರೆ. ಹಾಗೇಯೇ ದೇಶದಲ್ಲಿ ಲೈಂಗಿಕ ಚಟುವಟಿಕೆಯನ್ನು ಕಾನೂನು ಬದ್ಧವಾಗಿ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.