ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಬಲವನ್ನು ಕುಗ್ಗಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ಕೈಗೊಳ್ಳಲು ಹೊಸದಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ರಚನೆ ಮಾಡಿ ಹೊರಡಿಸಿರುವ ಆದೇಶವು ಕೆಲವು ನ್ಯೂನತೆಗಳಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಕಾರ್ಯರೂಪಕ್ಕೆ ಬರುವುದು ಬಹುತೇಕ ಅನುಮಾನ ಎಂಬ ಮಾತುಗಳು ಕೇಳಿ ಬಂದಿವೆ.
ಸರಕಾರಿ ಸಿಬಂದಿ ಅಥವಾ ಅಧಿಕಾರಿ ವಿರುದ್ಧ ತನಿಖೆ ನಡೆಸುವ ಮುನ್ನ ಭ್ರಷ್ಟಾಚಾರ ನಿಗ್ರಹ ದಳವು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ತನಿಖೆ ನಡೆಸಲು ಬರುವುದಿಲ್ಲ ಎಂದು ಹೇಳಿದೆ. ಆದರೆ, ಸಿಆರ್‌ಪಿಸಿ ಮತ್ತು ಪಿಸಿ (ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988) ಕಾಯ್ದೆಗೆ ಇದು ವಿರುದ್ಧವಾಗಿದೆ. ಪೊಲೀಸರು ತನಿಖೆ ನಡೆಸಲು ಅವಕಾಶ ಇದ್ದು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ವೇಳೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕಾಗಿದೆ ಎಂದು ಲೋಕಾಯುಕ್ತ ಸಂಸ್ಥೆಯ ಮೂಲಗಳು ಹೇಳಿವೆ.
ಸಿಆರ್‌ಪಿಸಿ ಮತ್ತು ಪಿಸಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಾದರೆ ಕೇಂದ್ರ ಸರಕಾರ ನಿರ್ಧಾರ ಕೈಗೊಳ್ಳಬೇಕು. ಆದರೆ, ರಾಜ್ಯ ಸರಕಾರವು ಪಿಸಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಮುಂದಾಗಿದ್ದು, ಈ ಕ್ರಮವು ಸರಿಯಲ್ಲ. ಕಾನೂನಿನಡಿಯಲ್ಲಿ ಸೂಕ್ಷ್ಮವಾಗಿ ಗಮನಿಸುವುದಾದರೆ ಭ್ರಷ್ಟಾಚಾರ ನಿಗ್ರಹ ದಳದ ರಚನೆಯಲ್ಲಿ ಕಾನೂನು ಪ್ರಕ್ರಿಯೆ ಉಲ್ಲಂಘನೆಯಾಗಿದೆ. ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿ ಹೊರಡಿಸಿರುವ ಆದೇಶಗಳಲ್ಲಿ ಕೆಲವು ನ್ಯೂನತೆಗಳಿವೆ. ಒಂದು ವೇಳೆ ಯಾರಾದರೂ ಸರಕಾರದ ಆದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನ್ಯಾಯಾಲಯದ ಮೆಟ್ಟಿಲೇರಿದರೆ ಸರಕಾರಕ್ಕೆ ಮುಖಭಂಗವಾಗುವ ಸಾಧ್ಯತೆಯೇ ಹೆಚ್ಚಿದೆ ಎಂದು ತಿಳಿಸಿವೆ.
-ಉದಯವಾಣಿ