ರಾಷ್ಟ್ರೀಯ

ದೇಶದ್ರೋಹಿ ಕಾನೂನಿನ ವ್ಯಾಖ್ಯಾನ ‘ವಿಸ್ತೃತ’ವಾಗಿದೆ: ಸರ್ಕಾರ

Pinterest LinkedIn Tumblr

Rajnathನವದೆಹಲಿ (ಪಿಟಿಐ): ದೇಶದ್ರೋಹಿ ಕಾನೂನಿನ ವ್ಯಾಖ್ಯಾನ ‘ಬಹಳ ವಿಸ್ತೃತ’ವಾಗಿದೆ ಎಂದು ಒಪ್ಪಿಕೊಂಡ ಸರ್ಕಾರ, ಈ ಕಾಯ್ದೆಯ ರದ್ದತಿಗೆ ರಾಜ್ಯಸಭಾ ಸದಸ್ಯರು ಒತ್ತಾಯಿಸಿದ ಬಳಿಕ ಕಾನೂನು ಆಯೋಗವು ಈ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಬುಧವಾರ ಹೇಳಿದೆ.
ಜೆಎನ್‌ಯು ವಿವಾದದಿಂದಾಗಿ ಈ ಕಾನೂನು ಚರ್ಚೆಯ ಕೇಂದ್ರವಾಗಿ ಮಾರ್ಪಟ್ಟಿದೆ.
ಈ ಕಾನೂನಿನ ಕುರಿತು ಕಾನೂನು ಆಯೋಗ ವರದಿ ಸಲ್ಲಿಸಿದ ಬಳಿಕ‌ ಸರ್ವಪಕ್ಷ ಸಭೆಯಲ್ಲಿ ಚರ್ಚೆಗೆ ಒಳಪಡಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಒಪ್ಪಿದರು.
‘ಸರ್ಕಾರದ ವಿರುದ್ದ ಮಾತನಾಡುವವರನ್ನು ದೇಶದ್ರೋಹದ ಕಾನೂನಿನಡಿ ಬಂಧಿಸಬಹುದು. ಕಾಯ್ದೆಯ ವ್ಯಾಖ್ಯಾನ ತುಂಬಾ ವಿಸ್ತೃತವಾಗಿದ್ದು, ತಿದ್ದುಪಡಿಗಳಿಗೆ ಒತ್ತಾಯ ಕೇಳಿ ಬರುತ್ತಿದೆ. ಸಾಕಷ್ಟು ಪ್ರಕರಣಗಳಿದ್ದು, ಕಳವಳ ವ್ಯಕ್ತವಾಗುತ್ತಿದೆ. ಈ ಕುರಿತು ಸಮಗ್ರ ಪರಿಶೀಲನೆ ನಡೆಸುವಂತೆ ನಾನು ಕಾನೂನು ಆಯೋಗವನ್ನು ಕೋರುವೆ’ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಇದಕ್ಕೆ ದನಿಗೂಡಿಸಿದ ರಾಜನಾಥ್ ಸಿಂಗ್, ‘ಈ ಕಾನೂನಿನ ಕುರಿತು ಕಾನೂನು ಆಯೋಗವು ಪರಿಶೀಲನೆ ನಡೆಸುತ್ತಿದ್ದೆ. ಆದಷ್ಟು ಶೀಘ್ರವೇ ವರದಿ ಸಲ್ಲಿಸುವಂತೆ ನಮ್ಮ ಸರ್ಕಾರ ಹೇಳಿದೆ’ ಎಂದರು.
ಬಳಿಕ ಮತ್ತೆ ಪ್ರತಿಕ್ರಿಯಿಸಿದ ರಿಜಿಜು, ಕಾನೂನು ಆಯೋಗವು ತನ್ನ 42ನೇ ವರದಿಯಲ್ಲಿ ದೇಶದ್ರೋಹ ಕಾನೂನು ‘ದೋಷಪೂರಿತ’ ಎಂದಿತ್ತು. ಆದರೆ, ಅದರ ರದ್ದತಿಗೆ ಒಲವು ತೋರಿರಲಿಲ್ಲ ಎಂದರು.
ಆರೋಪ ತಳ್ಳಿಹಾಕಿದ ಸರ್ಕಾರ: ಇನ್ನು, ಆಡಳಿತಾರೂಢ ಎನ್‌ಡಿಎ ಸರ್ಕಾರವು ಈ ಕಾನೂನನ್ನು ಮಿತಿಮೀರಿ ಬಳಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ರಿಜಿಜು ತಳ್ಳಿ ಹಾಕಿದರು.
‘ದೆಹಲಿಯಲ್ಲಿ ಮಾತ್ರವೇ ಅಲ್ಲದೇ, ತೆಲಂಗಾಣದಲ್ಲೂ ಈ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಾಗಿವೆ’ ಎಂದರು
ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ ಅಂಕಿ–ಅಂಶಗಳನ್ನು ಉಲ್ಲೇಖಿಸಿದ ಅವರು, ‘2014ರಲ್ಲಿ ದೇಶದಾದ್ಯಂತ ದೇಶದ್ರೋಹ ಆರೋಪಗಳಡಿ ಒಟ್ಟು 47 ಪ್ರಕರಣ ದಾಖಲಾಗಿದ್ದವು. ಆ ಪೈಕಿ ಬಿಹಾರದಲ್ಲಿ ಅತಿಹೆಚ್ಚು ಅಂದರೆ 16 ಪ್ರಕರಣಗಳು ದಾಖಲಾಗಿದ್ದವು. ಒಟ್ಟು 28 ಜನರನ್ನು ಬಂಧಿಸಲಾಗಿತ್ತು.
‘ಈ ಕಾನೂನಿನಡಿ ಎರಡನೇ ಅತಿಹೆಚ್ಚು ಪ್ರಕರಣಗಳು ಜಾರ್ಖಂಡ್‌ನಲ್ಲಿ ದಾಖಲಾಗಿದ್ದವು. ಬಳಿಕದ ಸ್ಥಾನದಲ್ಲಿ ಕೇರಳ ಹಾಗೂ ಓಡಿಶಾಗಳಿವೆ’ ಎಂದರು.

Write A Comment