ರಾಷ್ಟ್ರೀಯ

ಜಾರವಾ ಆದಿವಾಸಿ ಕೈಗೆ ಬೀಳುತ್ತಾ ಕೋಳ?

Pinterest LinkedIn Tumblr

04jarawa-road-660x473ಮತ್ತೆ ಅಂಡಮಾನ್‌-ನಿಕೋಬಾರ್‌ ದ್ವೀಪ ಸಮೂಹದಲ್ಲಿನ ಜಾರವಾ ಆದಿವಾಸಿ ಸಮುದಾಯ ಸುದ್ದಿಯಲ್ಲಿದೆ. ವಿಧವೆ ಜಾರವಾ ಮಹಿಳೆಗೆ ಜನಿಸಿದ 5 ತಿಂಗಳ ಹಸುಳೆಯನ್ನು ಕೊಂದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇದೀಗ ಜಾರವಾ ಸಮುದಾಯದ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೇ? ಅಥವಾ ಆದಿವಾಸಿಗಳು ಅವರದ್ದೇ ಆದ ವಿಚಿತ್ರ ಸಂಪ್ರದಾಯ ಪಾಲಿಸುತ್ತಿದ್ದಾರೆಂದು ಅವರನ್ನು ಹಾಗೇ ಬಿಟ್ಟುಬಿಡಬೇಕೇ ಎಂಬ ಸಂದಿಗ್ಧದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರವಾ ಸಮುದಾಯದ ಸಂಪ್ರದಾಯವೇನು? ಈ ಪ್ರಕರಣವೇನು ಎಂಬಿತ್ಯಾದಿಗಳ ಕುರಿತ ಮಾಹಿತಿಗಳು ಇಲ್ಲಿವೆ.

ವಿಧವೆ/ಅವಿವಾಹಿತೆಗೆ ಮಗು ಜನಿಸಿದರೆ ಹತ್ಯೆ!
ಜಾರವಾ ಆದಿವಾಸಿ ಸಮುದಾಯದಲ್ಲಿ ಒಂದು ವಿಚಿತ್ರ ಸಂಪ್ರದಾಯವಿದೆ. ತಮ್ಮ ಗುಂಪಿನಲ್ಲಿ ಅವರು ತಮ್ಮವನ್ನು ಹೊರತು ಬೇರಾರನ್ನೂ ಬಿಟ್ಟುಕೊಡುವುದಿಲ್ಲ. ಒಂದು ರೀತಿಯನ್ನು ಅವರು ತಮ್ಮ ಅನುವಂಶಿಕತೆಯನ್ನು ಪಾಲಿಸುತ್ತಾರೆ. ಅದಕ್ಕಾಗಿ ಅವರು ವಿಧವೆ/ಅವಿವಾಹಿತ ಜಾರವಾ ಮಹಿಳೆಗೆ ಅಕಸ್ಮಾತ್‌ ಮಗು ಜನಿಸಿದರೆ ಅದನ್ನು ಹತ್ಯೆಗೈಯದೆ ಬಿಡುವುದಿಲ್ಲ! ಇತ್ತೀಚೆಗೆ ನಡೆದದ್ದೂ ಇದೇ.
ಕಳೆದ ನವೆಂಬರ್‌ನಲ್ಲಿ ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಅವಿವಾಹಿತ ಯುವತಿಯೋರ್ವಳಿಗೆ ಜನಿಸಿದ ಮಗುವೊಂದು ಸ್ವಲ್ಪ ಬಣ್ಣ ಬೇರೆಯಿದ್ದು ಇದು ಹೊರಗಿನವರಿಂದಾಗಿ ಜನಿಸಿದ ಮಗು ಇರಬಹುದೆಂಬ ಕಾರಣಕ್ಕೆ ಈ ಹತ್ಯೆ ಮಾಡಲಾಗಿದೆ.

ನಿಜಕ್ಕೂ ನಡೆದಿದ್ದೇನು?
ಸ್ಥಳೀಯ ಮಾಹಿತಿಗಳ ಪ್ರಕಾರ ಈ ಘಟನೆ ನವೆಂಬರ್‌ನಲ್ಲಿ ನಡೆದಿದೆ. ಅವಿವಾಹಿತ ಜಾರವಾ ಮಹಿಳೆಗೆ ಜನಿಸಿದ ಶಿಶುವನ್ನು ಅದು ನಿದ್ದೆಯಿಂದ ಏಳುವ ಮೊದಲೇ ಸಮುದಾಯದ ವ್ಯಕ್ತಿಯೊಬ್ಬ ಅದನ್ನು ಗುಡಿಸಲಿನಿಂದ ಎತ್ತಿಕೊಂಡು ಹೋಗಿದ್ದಾನೆ. ಎತ್ತಿಕೊಂಡು ಹೋಗುತ್ತಿರುವುದನ್ನು ಇಬ್ಬರು ಆದಿವಾಸಿಗಳಲ್ಲದ ಮಹಿಳೆಯರು ನೋಡಿದ್ದಾರೆ. ಬಳಿಕ ಮಗುವಿನ ದೇಹ ಜಾರವಾ ಸಂರಕ್ಷಿತಾರಣ್ಯದ ಸ್ಥಳದಲ್ಲಿ ಹೂಳಿದ ರೀತಿ ಪತ್ತೆಯಾಗಿದೆ. ಮಗು ಎತ್ತಿಕೊಂಡು ಹೋದ ವ್ಯಕ್ತಿ ಆ ಮೊದಲು ಆದಿವಾಸಿಯೇತರ ವ್ಯಕ್ತಿಯೊಂದಿಗೆ ಮದ್ಯ ಸೇವಿಸುತ್ತಿದ್ದ ಎಂದೂ ಅವರು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಇಬ್ಬರು ಆದಿವಾಸಿಯೇತರ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಜಾರವಾ ಮಹಿಳೆಯನ್ನು ಅತ್ಯಾಚಾರಗೈದು ಮಗುವಿನ ಜನನಕ್ಕೆ ಕಾರಣವಾಗಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೇ ಜಾರವಾ ಪುರುಷನೋರ್ವನಿಗೆ ಮಗು ಹತ್ಯೆಗೈಯಲು ಕುಮ್ಮಕ್ಕು ನೀಡಿದ್ದಾರೆ ಎನ್ನಲಾಗಿದೆ.

ಜಾರವಾ ಬಗ್ಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು?
ಜಾರವಾ ಆದಿವಾಸಿಗಳನ್ನು ಆದಿವಾಸಿಯೇತರರು, ಪ್ರವಾಸಿಗಳು ಕೀಳಾಗಿ ಕಾಣುವ ಮತ್ತು ಅವರಿಗೆ ಆಮಿಷ ಒಡ್ಡಿ, ಮದ್ಯ ಮಾದಕ ವಸ್ತು ನೀಡಿ ಅತ್ಯಾಚಾರಗೈಯುವ ಬಗ್ಗೆ ಹಲವು ವಿವಾದಗಳಾಗಿವೆ. ಈ ಹಿನ್ನೆಲೆಯಲ್ಲಿ ಜಾರವಾ ಸಮುದಾಯದ ರಕ್ಷಿತಾರಣ್ಯದೊಳಗೆ ಪ್ರವಾಸಿಗರನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ 2002ರಲ್ಲಿ ಆದೇಶ ಹೊರಡಿಸಿತ್ತು. ಅಲ್ಲದೇ ಜಾರವಾ ಜೊತೆಗೆ ವಿಡಿಯೋ ಫೋಟೊ ತೆಗೆಯುವುದು, ಹಿಂಸಿಸುವುದು, ರಕ್ಷಿತಾರಣ್ಯ ಪ್ರವೇಶ ದಂಡನಾರ್ಹ ಅಪರಾಧ. ಜೊತಗೆ ಜಾರವಾ ಆದಿವಾಸಿ, ಸಂಸ್ಕೃತಿ ರಕ್ಷಣೆಗೆ ಸರ್ಕಾರ ಬದ್ಧವಾಗಿರಬೇಕೆಂದು ಅದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಅವರ ವಿಚಿತ್ರ ಸಂಪ್ರದಾಯ ಪಾಲನೆ ಎಂದು ಮಗು ಹತ್ಯೆಯನ್ನು ಬಿಟ್ಟುಬಿಡಬೇಕೋ ಅಥವಾ ನಿಯಮ ಪ್ರಕಾರ, ಹತ್ಯೆ ಸಂಬಂಧ ಆಧುನಿಕ ಲೋಕದಿಂದ ದೂರದಲ್ಲಿರುವ, ದೇಶದ ಕಾನೂನು ನಿಯಮಾವಳಿ ಬಗ್ಗೆ ಏನೊಂದೂ ತಿಳಿಯದ ಆದಿವಾಸಿಗಳನ್ನು ಕಾನೂನು ಕಟಕಟೆಗೆ ಎಳೆದು ತರಬೇಕೋ ಎಂಬ ಬಗ್ಗೆ ಪೊಲೀಸರು ದ್ವಂದ್ವದಲ್ಲಿದ್ದಾರೆ.

ವಂಶ ಶುದ್ಧತೆ: ಮಗುವಿಗೆ ಎಲ್ಲರ ಎದೆಹಾಲು!
ವಂಶ ಶುದ್ಧತೆ ಕಾಪಾಡಲು ಜಾರವಾ ಸಮುದಾಯದಲ್ಲಿ ಇನ್ನೊಂದು ವಿಶಿಷ್ಟ ಆಚರಣೆಯಿದೆ. ಅದೇನೆಂದರೆ ಜನಿಸಿದ ಮಗುವಿಗೆ ಅವರು ಸಮುದಾಯದ ಎಲ್ಲ ತಾಯಂದಿರ ಎದೆಹಾಲು ಕುಡಿಸುತ್ತಾರೆ. ಇದರಿಂದ ಮಗು ನಮ್ಮದೇ ಸಮುದಾಯಕ್ಕೆ ಸೇರಿದ್ದು ವಂಶ ಶುದ್ಧವಾಗುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ ಎಂದು ಇಲ್ಲಿನ ಸರ್ಕಾರಿ ವೈದ್ಯ, ಜಾರವಾ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ ಡಾ.ರತನ್‌ ಚಂದ್ರಶೇಖರ್‌ ಕರ್‌ ಹೇಳುತ್ತಾರೆ.

ಜಾರವಾ ಆದಿವಾಸಿಗಳು ಅಂದರೆ ಯಾರು?
ಸದ್ಯ ವಿಶ್ವದಲ್ಲಿ ಬೆರಳೆಣಿಕೆಯ ಆದಿವಾಸಿ ಸಮುದಾಯಗಳಲ್ಲಿ ಒಂದು. ಅಂಡಮಾನ್‌ ದ್ವೀಪದ ಸ್ಮಿತ್‌ ದ್ವೀಪದಿಂದ, ದಕ್ಷಿಣ ಅಂಡಮಾನ್‌ ಪ್ರದೇಶದ ಸುಮಾರು 400 ಕಿ.ಮೀ. ವ್ಯಾಪ್ತಿಯಲ್ಲಿ ಈ ಆದಿವಾಸಿ ಸಮುದಾಯವಿದೆ. ಹೊರಜಗತ್ತಿನಿಂದ ಸಂಪೂರ್ಣ ಹೊರತಾಗಿ ಈ ಸಮುದಾಯ ಜೀವಿಸುತ್ತಿದೆ. ಸಮುದಾಯದಲ್ಲಿ ಸುಮಾರು 420 ಮಂದಿ ಇದ್ದಾರೆ ಎನ್ನಲಾಗಿದೆ. ಸುಮಾರು 50 ಸಾವಿರ ವರ್ಷ ಹಿಂದೆ ಜಾರವಾ ಆದಿವಾಸಿಗಳು ಆಫ್ರಿಕಾದಿಂದ ವಲಸೆ ಬಂದವರು ಎಂಬುದು ವಿಜ್ಞಾನಿಗಳ ಅಂಬೋಣ. 1998ರವರೆಗೆ ಹೊರಜಗತ್ತಿನಿಂದ ಸಂಪೂರ್ಣ ಹೊರಗಿದ್ದ ಈ ಸಮುದಾಯ ಹೊರಗಿನವರನ್ನು ಕಂಡರೆ ವಿಷದ ಬಾಣಗಳನ್ನು ಬಿಡುತ್ತಿದ್ದರು. ಪ್ರಾಣಿಗಳನ್ನು ಬೇಟೆಯಾಡಿ, ಕಾಡುತ್ಪತ್ತಿಗಳನ್ನೇ ತಿಂದು ಜೀವಿಸುವ ಸಮುದಾಯ ಇದಾಗಿದೆ.

ಕೈಗೆ ಬೀಳುತ್ತಾ ಕೋಳ?: ಕಳೆದ ಸುಮಾರು 200 ವರ್ಷಗಳಿಂದ ಜಾರವಾ ಆದಿವಾಸಿಗಳು ಯಾವುದೇ ದಂಡನಾರ್ಹ ಅಪರಾಧಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿಲ್ಲ. ಆದರೆ ಇದೇ ಮೊದಲ ಬಾರಿಗೆ ಮಗುವನ್ನು ಕೊಂದ ಪ್ರಕರಣ ಆದಿವಾಸಿ ಸಮುದಾಯವನ್ನು ಸುತ್ತಿಕೊಂಡಿದೆ.
-ಉದಯವಾಣಿ

Write A Comment