ಅಂತರಾಷ್ಟ್ರೀಯ

ಪಾಕ್‌: ಮುಷರಫ್‌ ಪ್ರವಾಸ ಮೇಲಿನ ನಿರ್ಬಂಧ ತೆರವು

Pinterest LinkedIn Tumblr

Musharrafಇಸ್ಲಾಮಾಬಾದ್ (ಪಿಟಿಐ): ಮಾಜಿ ಸೇನಾಡಳಿತಗಾರ ಪರ್ವೇಜ್ ಮುಷರಫ್ ಅವರ ವಿದೇಶಿ ಪ್ರವಾಸದ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ಸರ್ಕಾರಕ್ಕೆ ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.
ದೇಶದ್ರೋಹ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಮುಷರಫ್, ಸುಪ್ರೀಂ ಕೋರ್ಟ್ ಆದೇಶದಿಂದ ನಿರಾಳರಾಗಿದ್ದಾರೆ.
ಮುಷರಫ್‌ ವಿದೇಶಿ ಪ್ರವಾಸ ಮಾಡಬಹುದು ಎಂದು ಸಿಂಧ್ ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಅನ್ವರ್ ಜಹೀರ್ ಜಮಾಲಿ ಅವರ ನೇತೃತ್ವದ ಐವರು ಸದಸ್ಯರ ಪೀಠ, ಸಿಂಧ್ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿಹಿಡಿಯಿತು.
ಆದರೆ, ಒಕ್ಕೂಟ ಸರ್ಕಾರ(ಪಾಕ್ ಸರ್ಕಾರ) ತಡೆಯೊಡ್ಡುವ ತನಕ 72 ವರ್ಷದ ಮುಷರಫ್‌ ಅವರ ವಿದೇಶ ಪ್ರವಾಸದ ಮೇಲೆ ಯಾವುದೇ ನಿರ್ಬಂಧ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ನಡುವೆ, ಪಾಕ್ ಸರ್ಕಾರವು ಮುಷರಫ್ ಅವರ ವಿದೇಶಿ ಪ್ರವಾಸ ಮಾಡದಂತೆ ಅಕ್ರಮವಾಗಿ ತಡೆದಿತ್ತು ಎಂದು ಮುಷರಫ್ ಪರ ವಕೀಲ ಫರೋಹ್ ನಸೀಮ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
‘ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ, ಮುಷರಫ್ ಅವರ ವಿದೇಶಿ ಪ್ರವಾಸದ ಮೇಲೆ ಯಾವುದೇ ನಿರ್ಬಂಧವಿಲ್ಲ’ ಎಂದರು.
ಆದರೆ, ಯಾವುದೇ ವ್ಯಕ್ತಿಯ ಹೆಸರನ್ನು ವಿದೇಶಿ ಪ್ರವಾಸ ನಿಯಂತ್ರಣ ಪಟ್ಟಿಯಲ್ಲಿ ಸೇರಿಸುವ ಮೂಲಕ ಅವರು ಪ್ರಯಾಣಿಸದಂತೆ ತಡೆಯುವ ಅಧಿಕಾರ ಸರ್ಕಾರಕ್ಕೆ ಇದೆ ಎಂದೂ ಅವರು ತಿಳಿಸಿದರು.
2007ರಲ್ಲಿ ಪಾಕಿಸ್ತಾನದ ಸಂಸತ್ತನ್ನು ಅಮಾನತು ಮಾಡಿದ್ದಕ್ಕಾಗಿ ಮುಷರಫ್ ವಿರುದ್ಧ 2013ರಲ್ಲಿ ಪಾಕ್‌ ಸರ್ಕಾರ ದೇಶದ್ರೋಹ ಪ್ರಕರಣ ದಾಖಲಿಸಿತ್ತು.
ಬಳಿಕ 2014ರ ಏಪ್ರಿಲ್‌ನಲ್ಲಿ ಮುಷರಫ್ ಅವರ ವಿದೇಶಿ ಪ್ರಯಾಣದ ಮೇಲೆ ಪಾಕ್‌ ಸರ್ಕಾರ ನಿರ್ಬಂಧ ಹೇರಿತ್ತು. ಆದರೆ, 2014ರ ಜೂನ್‌ನಲ್ಲಿ ಕರಾಚಿಯಲ್ಲಿರುವ ಸಿಂಧ್ ಹೈಕೋರ್ಟ್‌ ಈ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಸರ್ಕಾರವು ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

Write A Comment