ಕರ್ನಾಟಕ

ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಹೆಗಲಿಗೆ ಪ್ಲಾಸ್ಟಿಕ್ ನಿಷೇಧದ ಹೊಣೆ

Pinterest LinkedIn Tumblr

plasticಬೆಂಗಳೂರು, ಮಾ.15-ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧದ ಹೊಣೆಗಾರಿಕೆಯನ್ನು ಎಲ್ಲಾ ತಾಲೂಕಿನ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ರಾಜ್ಯಾದ್ಯಂತ ಪ್ಲಾಸ್ಟಿಕ್ ನಿಷೇಧ ಮಾಡಿ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಈಗಾಗಲೇ ರಾಜ್ಯ ಪತ್ರದಲ್ಲಿ ಪ್ರಕಟವಾಗಿರುವುದರಿಂದ ಅಧಿಕೃತವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಯಲ್ಲಿದೆ. ವಾಣಿಜ್ಯ ತೆರಿಗೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎಲ್ಲಾ ಅಧಿಕಾರಿಗಳು, ತೂಕ, ಮಾಪನ ಮತ್ತು ಅಳತೆ ಇಲಾಖೆಯ ನಿಯಂತ್ರಕರು, ಕಂದಾಯ ಉಪವಿಭಾಗದ ಎಲ್ಲಾ ಸಹಾಯಕ ಆಯುಕ್ತರು, ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ, ಎಲ್ಲಾ ನಗರಸಭೆ ಆಯುಕ್ತರು, ಅರೋಗ್ಯಾಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಕೂಡ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಿಬಿಎಂಪಿ ಆಯುಕ್ತರು, ಜಂಟಿ ಆಯುಕ್ತರು, ಕಂದಾಯ ಅಧಿಕಾರಿಗಳು ಹಾಗೂ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಗೊಳಿಸಬೇಕಾಗಿದೆ. ಮನುಷ್ಯ ಹಾಗೂ ಪ್ರಾಣಿಗಳು ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಈಗಾಗಲೇ ರಾಜ್ಯಾದ್ಯಂತ ಜಾರಿಗೆ ಬಂದಿದೆ. ರಾಜ್ಯಾದ್ಯಂತ ಯಾವುದೇ ದಪ್ಪದ, ಯಾವುದೇ ರೀತಿಯ ಪ್ಲಾಸ್ಟಿಕ್, ಕ್ಯಾರಿಬ್ಯಾಗ್, ಬಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಾದ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಜೊತೆಗೆ ಯಾವುದೇ ವ್ಯಕ್ತಿ, ಅಂಗಡಿ ಮಾಲೀಕ, ಮಾರಾಟಗಾರ, ಸಗಟು ಮಾರಾಟಗಾರರು, ಚಿನ್ನದ ವ್ಯಾಪಾರಿಗಳು, ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಷೇಧಿಸಿದೆ. ಆದರೆ ರಫ್ತು ಉದ್ದೇಶಿತ ಘಟಕಗಳಲ್ಲಿ ರಫ್ತು ಆದೇಶ ಮೇರೆಗೆ ಉತ್ಪಾದಿಸುವ ಪ್ಲಾಸ್ಟಿಕ್, ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್, ಅರಣ್ಯ ಮತ್ತು ತೋಟಗಾರಿಕೆ ನರ್ಸರಿಗಳಲ್ಲಿ ಬಳಸುವ ಪ್ಲಾಸ್ಟಿಕ್ ಚೀಲ ಮತ್ತು ಹಾಳೆಗಳಿಗೆ ನಿಷೇಧದಿಂದ ವಿನಾಯ್ತಿ ದೊರೆತಿದೆ. ಸಾಮಗ್ರಿಗಳ ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್ ಬ್ಯಾಗ್, ವಿಶೇಷ ಆರ್ಥಿಕ ವಲಯದಲ್ಲಿ ಉತ್ಪಾದಿಸಲ್ಪಡುವ ಪ್ಲಾಸ್ಟಿಕ್‌ಗಳಿಗೆ ವಿನಾಯಿತಿ ದೊರೆತಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ಲಾಸ್ಟಿಕ್ ತ್ಯಾಜ್ಯ ನಿಷೇಧಿಸುವ ಬಗ್ಗೆ ಅಧಿಕಾರ ಹೊಂದಿದೆ. ಜೊತೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೂ ಕೂಡ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕ್ರಮಕೈಗೊಳ್ಳಲು ಅಧಿಸೂಚನೆಯಲ್ಲಿ ನಿರ್ದೇಶಿಸಲಾಗಿದೆ.

Write A Comment