ಕರ್ನಾಟಕ

ಪ್ರೇಯಸಿ ಮನೆಗೆ ಬೆಂಕಿ ಇಟ್ಟ ಪ್ರಿಯತಮ : ಯುವತಿ, ತಂದೆ-ತಾಯಿ ಸೇರಿ ನಾಲ್ವರಿಗೆ ಗಂಭೀರ ಗಾಯ

Pinterest LinkedIn Tumblr

deepak

ಬೆಂಗಳೂರು: ತನ್ನನ್ನು ದೂರ ಮಾಡುತ್ತಿ ದ್ದಾಳೆ ಎಂಬ ಭ್ರಮೆಗೆ ಬಿದ್ದ ಪ್ರೇಮಿಯೊಬ್ಬ ಪ್ರೇಯಸಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಯುವತಿ ಹಾಗೂ ಆಕೆ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶ್ರೀರಾಮಪುರದಲ್ಲಿ ನಡೆದಿದೆ. ಮೇಘನಾ(21), ಈಕೆ ತಂದೆ ನಟರಾಜ್, ತಾಯಿ ಅನುಪಮಾ, ತಂಗಿ ಸಂಜನಾ ಗಾಯಗೊಂಡ ನತದೃಷ್ಟರು. ಬಟ್ಟೆ ಅಂಗಡಿ ಇಟ್ಟುಕೊಂಡಿರುವ ನಟರಾಜ್ ಅವರು ಶ್ರೀರಾಮಪುರದ ಸಾಯಿಬಾಬಾ ನಗರ 2ನೇ ಕ್ರಾಸ್‌ನಲ್ಲಿ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜತೆ ವಾಸವಿದ್ದಾರೆ.

ಈ ಹಿಂದೆ ಸಾಯಿಬಾಬಾ ನಗರದಲ್ಲಿ ವಾಸವಿದ್ದಾಗ ಇವರ ಪಕ್ಕದ ಮನೆಯಲ್ಲೇ ವಾಸವಿದ್ದ ದೀಪಕ್ ಹಾಗೂ ಮೇಘನಾ ನಡುವೆ ಪ್ರೇಮ ಬೆಳೆದಿತ್ತು. ಈ ಮಧ್ಯೆ ನಟರಾಜ್ ಅವರು ಕೆಂಗೇರಿಗೆ ತಮ್ಮ ವಾಸ ಬದಲಿಸಿದ್ದು, ಆ ಸಮಯದಲ್ಲಿ ಒಂದೂವರೆ ವರ್ಷ ಇವರ ನಡುವಿನ ಸಂಪರ್ಕ ಕಡಿತವಾಗಿತ್ತು ಎನ್ನಲಾಗಿದೆ. ನಟರಾಜ್ ಅವರು ಮತ್ತೆ ಸಾಯಿಬಾಬಾ ನಗರಕ್ಕೆ ಮನೆ ಬದಲಿಸಿದ್ದು, ಆಗಿನಿಂದ ಮತ್ತೆ ಇಬ್ಬರ ನಡುವೆ ಪ್ರೇಮ ಮುಂದುವರೆದಿದೆ. ಮೇಘನಾ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ, ದೀಪಕ್ ಬಿಕಾಂ ಅರ್ಧಕ್ಕೆ ಬಿಟ್ಟಿದ್ದು, ಔಷಧ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಒಮ್ಮೆ ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋಗಿ ಮದುವೆಯಾಗಲು ಯತ್ನಿಸಿದ್ದು, ಆಗ ಎರಡೂ ಮನೆಯವರಿಗೆ ವಿಷಯ ಗೊತ್ತಾಗಿದೆ. ಇಬ್ಬರ ಕುಟುಂಬದವರು ಒಂದೆಡೆ ಸೇರಿ ಓದು ಮುಗಿದ ನಂತರ ಮದವೆ ಮಾಡುವುದಾಗಿ ಪ್ರೇಮಿಗಳ ಮನವೊಲಿಸಿದ್ದರು.ಈ ಮಧ್ಯೆ ದೀಪಕ್ ಸಿಎ ಮಾಡುವುದಾಗಿ ಪೋಷಕರಲ್ಲಿ ತಿಳಿಸಿದ್ದ. ಹಾಗಾಗಿ ಆತನ ಪೋಷಕರು ಓದು ಮುಗಿಸು ಎಂದು ಬುದ್ದಿ ಹೇಳಿದ್ದರು. ಪ್ರಸ್ತುತ ಬಂಡಿರೆಡ್ಡಿಪಾಳ್ಯದಲ್ಲಿ ವಾಸವಿರುವ ದೀಪಕ್ ಆಗಾಗ ಮೇಘನಾಳ ಮನೆಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಗೆ ಬಂದು ಹೋಗುತ್ತಿದ್ದ ದೀಪಕ್ ಪ್ರೇಯಸಿಗೆ ಮದುವೆ ಆಗುವ ಎಂದು ಪೀಡಿಸುತ್ತಿದ್ದರಿಂದ ಆಕೆ ಮೊದಲು ಓದು ಮುಗಿಸುವ ಎಂದು ಹೇಳಿ ಕಳುಹಿಸುತ್ತಿದ್ದಳು ಎನ್ನಲಾಗಿದೆ.

Write A Comment