ಕರ್ನಾಟಕ

ಭ್ರಷ್ಟಾಚಾರ ಪ್ರಕರಣ : ನ್ಯಾ. ವಿ.ಭಾಸ್ಕರರಾವ್ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡುವುದು ಬಹುತೇಕ ಖಚಿತ ..!

Pinterest LinkedIn Tumblr

bhaskar

ಬೆಂಗಳೂರು: ಸಂಸ್ಥೆಯಲ್ಲಿ ನಡೆದ ಹಣ ವಸೂಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ್ದ ಮಾಜಿ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ವಿ.ಭಾಸ್ಕರರಾವ್ ವಿರುದ್ಧ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡುವುದು ಬಹುತೇಕ ಖಚಿತವಾಗಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಸ್ಕರರಾವ್ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ಅನುಮತಿ ನೀಡಿದ್ದಾರೆ. ಇನ್ನು ಭಾಸ್ಕರರಾವ್ ನಿವೃತ್ತ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿರುವುದರಿಂದ ಅವರ ವಿರುದ್ಧ ವಿಚಾರಣೆ ನಡೆಸಲು ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರ ಅನುಮತಿ ಕಡ್ಡಾಯ.

ಎಸ್‌ಐಟಿ ಮುಖ್ಯಸ್ಥ ಕಮಲ್‌ಪಂತ್ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಪತ್ರ ಬರೆದು ಭಾಸ್ಕರರಾವ್ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ರಾಜ್ಯಪಾಲರು ಅನುಮತಿ ನೀಡಿದರೆ ಕರ್ನಾಟಕ ಇತಿಹಾಸದಲ್ಲೇ ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣೆಗೊಳಪಟ್ಟ ಮೊಟ್ಟಮೊದಲ ಲೋಕಾಯುಕ್ತ ನ್ಯಾಯಮೂರ್ತಿ ಎಂಬ ಕಳಂಕ ಭಾಸ್ಕರರಾವ್ ಅಂಟಿಕೊಳ್ಳುತ್ತದೆ. ರಾಜ್ಯಸರ್ಕಾರವೇ ಪ್ರಕರಣದ ವಿಚಾರಣೆ ನಡೆಸುವಂತೆ ಸೂಚನೆ ಕೊಟ್ಟಿರುವುದರಿಂದ ರಾಜ್ಯಪಾಲರು ವಿಚಾರಣೆಗೆ ನಿರಾಕರಿಸುವ ಸಾಧ್ಯತೆಗಳು ತೀರಾ ವಿರಳ.

ಐಎಎಸ್ ಅಧಿಕಾರಿಗಳಾದ ಎಂ.ಲಕ್ಷ್ಮೀನಾರಾಯಣ, ಎನ್.ಪ್ರಕಾಶ್ (ನಿವೃತ್ತ) ಅವರುಗಳು ಸಹ ಈಗಾಗಲೇ ಸಾಕ್ಷ್ಯ ಹೇಳಿದ್ದಾರೆ. ಅವರು ನೀಡಿರುವ ಹೇಳಿಕೆಗಳು ಕೆಲವು ಸಾಂದರ್ಭಿಕ ಸಾಕ್ಷಿಗಳನ್ನು ಆಧರಿಸಿ ಭಾಸ್ಕರರಾವ್ ಅವರನ್ನು ವಿಚಾರಣೆಗೊಳಪಡಿಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಎಸ್‌ಐಟಿ ಮನವಿ ಮಾಡಿದೆ. ಭಾಸ್ಕರರಾವ್ ಪುತ್ರ ಅಶ್ವಿನ್‌ರಾವ್ ಹಾಗೂ ಈಗಾಗಲೇ ನ್ಯಾಯಾಂಗ ವಶದಲ್ಲಿರುವ ಆರೋಪಿಗಳು ತಮಗೆ ಹಣ ನೀಡುವಂತೆ ಬೇಡಿಕೆ ಇಟ್ಟಿರುವುದನ್ನು ಅಧಿಕಾರಿಗಳೇ ಎಸ್‌ಐಟಿ ಬಳಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾಸ್ಕರರಾವ್ ಅವರನ್ನು ಆರೋಪಿಯನ್ನಾಗಿಸಬೇಕೆಂಬುದು ತನಿಖಾಧಿಕಾರಿಗಳ ಆಗ್ರಹ.

ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ಭಾಸ್ಕರರಾವ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ವೇಳೆಯೇ ಈ ಕರ್ಮಕಾಂಡ ನಡೆದಿದೆ. ಸೆಕ್ಷನ್ 8, 1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಐಪಿಸಿ ಸೆಕ್ಷನ್ 202, 217ರ ಪ್ರಕಾರ ವಿಚಾರಣೆಗೆ ಅನುಮತಿ ನೀಡಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಸಾರ್ವಜನಿಕ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡಿರುವುದು ಮತ್ತು ಇದರಲ್ಲಿ ತಮ್ಮ ಕುಟುಂಬದವರೇ ಶಾಮೀಲಾಗಿರುವುದರಿಂದ ಭಾಸ್ಕರರಾವ್ ವಿರುದ್ಧ ರಾಜ್ಯಪಾಲರು ಅನುಮತಿ ನೀಡದೆ ಬೇರೆ ದಾರಿಯೇ ಇಲ್ಲವೆನ್ನುತ್ತಾರೆ ಕಾನೂನು ತಜ್ಞರು.

ಇನ್ನೊಂದೆಡೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಪಿಎಆರ್)ರಾಜಭವನಕ್ಕೆ ಪತ್ರ ಬರೆದಿದ್ದು, ಮುಖ್ಯಮಂತ್ರಿ ತೆಗೆದುಕೊಂಡಿರುವ ನಿರ್ಧಾರವನ್ನು ತಿಳಿಸಿದೆ.ಹೀಗಾಗಿ ವಾಲಾ, ಭಾಸ್ಕರರಾವ್ ವಿರುದ್ಧ ವಿಚಾರಣೆ ಅನುಮತಿ ನೀಡುವುದು ಬಹುತೇಕ ಖಚಿತವಾಗಿದೆ. ಬಂಧನ ಸಾಧ್ಯತೆ: ರಾಜ್ಯಪಾಲರು ಅನುಮತಿ ನೀಡುತ್ತಿದ್ದಂತೆ ಅಗತ್ಯ ಕಂಡುಬಂದರೆ ಎಸ್‌ಐಟಿ ಅಧಿಕಾರಿಗಳು ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಳ್ಳಬಹುದು. ಸಾಕ್ಷ್ಯಾಧಾರಗಳ ನಾಶ, ಅಧಿಕಾರ ದುರುಪಯೋಗ, ಸಾರ್ವಜನಿಕರ ನಂಬಿಕೆ ಹುಸಿಗೊಳಿಸಿದ್ದು ಮತ್ತಿತರ ಆಪಾದನೆಗಳ ಮೇಲೆ ಎಸ್‌ಐಟಿ ಬಂಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕೂಡ ಬೆಂಬಲ ಸೂಚಿಸಿದೆ. ಸಾಧ್ಯವಾದರೆ ಭಾಸ್ಕರರಾವ್ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಉಭಯ ಪಕ್ಷಗಳು ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸುವ ಸಾಧ್ಯತೆಯೂ ಇದೆ. ಈ ಪ್ರಕರಣ ಹೊರ ಬರುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ವಿಧಾನಸಭೆಯ ಉಭಯ ಸದನಗಳಲ್ಲಿ ಭಾಸ್ಕರರಾವ್ ಅವರನ್ನು ಕಿತ್ತುಹಾಕುವಂತೆ ಕೋಲಾಹಲ ಸೃಷ್ಟಿಸಿದ್ದವು. ಇದೀಗ ಚೆಂಡು ರಾಜ್ಯಪಾಲರ ಕೈಯಲ್ಲಿರುವುದರಿಂದ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಭಾಸ್ಕರರಾವ್ ಭವಿಷ್ಯ ನಿಂತಿದೆ.

Write A Comment