ರಾಷ್ಟ್ರೀಯ

ಛತ್ತೀಸ್‌ಗಢದಲ್ಲಿ ಬೆಳ್ಳಂಬೆಳಗ್ಗೆ ನಕ್ಸಲರೊಂದಿಗಿನ ಭಾರೀ ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್ ಯೋಧರಿಬ್ಬರು ಬಲಿ

Pinterest LinkedIn Tumblr

attack

ರಾಯ್ಪುರ: ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದ ನಕ್ಸಲರೊಂದಿಗಿನ ಭಾರೀ ಗುಂಡಿನ ಚಕಮಕಿಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರಿಬ್ಬರು ಹುತಾತ್ಮರಾಗಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾವೋವಾದಿ ನಕ್ಸಲರ ಅಟ್ಟಹಾಸದಿಂದ ಜರ್ಝರಿತಗೊಂಡಿರುವ ಕಾಂಕೇರ ಜಿಲ್ಲೆಯಲ್ಲಿ ಗಡಿ ಭಾಗದ ಛೋಟೆಭೆಟಿಯಾ-ಪಖಂಜೋರ್ ಅರಣ್ಯ ಪ್ರದೇಶದಲ್ಲಿ ಕಾವಲು ಪಹರೆಯಲ್ಲಿದ್ದ ಗಡಿ ಭದ್ರತಾ ಪಡೆ ಯೋಧರು ಹಾಗೂ ನಕ್ಸಲರ ನಡುವೆ ಇಂದು ಮುಂಜಾನೆ ಗುಂಡಿನ ಕಾಳಗ ನಡೆಯಿತು.

ಈ ಹಠಾತ್ ಚಕಮಕಿಯಲ್ಲಿ ಬಿಎಸ್‌ಎಫ್ ಯೋಧರಿಬ್ಬರು ಬಲಿಯಾಗಿ, ನಾಲ್ವರು ಗಾಯಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಬೆಳಗಿನ ಜಾವ 2.30ರ ಸಮಯದಲ್ಲಿ ಉಗ್ರರಿಗಾಗಿ ಶೋಧಕಾರ್ಯ ನಡೆಸುತ್ತಿದ್ದ ಯೋಧರ ಮೇಲೆ ನಕ್ಸಲರು ಗುಂಡು ಹಾರಿಸಿದ್ದಾರೆ. ರಾಜ್ಯ ರಾಜಧಾನಿಯಿಂದ 300ಕಿ.ಮೀ. ದೂರದಲ್ಲಿರುವ ಈ ಪ್ರದೇಶದಲ್ಲಿ ಹಲವು ದಿನಗಳಿಂದಲೂ ಮಾವೋವಾದಿ ಉಗ್ರರ ಉಪಟಳ ಮಿತಿಮೀರಿದ್ದು, ಹಗಲು-ರಾತ್ರಿ ಬಿಎಸ್‌ಎಫ್ ಹಾಗೂ ಪೊಲೀಸ್ ಪಡೆಗಳು ಇಲ್ಲಿ ಅವಿರತವಾಗಿ ಗಸ್ತು ತಿರುಗುತ್ತಿರುತ್ತವೆ. ಇಂದು ಬೆಳಗಿನ ಜಾವ ಈ ಚಕಮಕಿ ನಡೆದಿದೆ. ಸ್ಥಳಕ್ಕೆ ಮತ್ತಷ್ಟು ಭದ್ರತಾ ಪಡೆ ಸಿಬ್ಬಂದಿ ಆಗಮಿಸಿದ್ದು, ಅರಣ್ಯ ಪ್ರದೇಶದಲ್ಲಿ ಅಡಗಿರುವ ನಕ್ಸಲರಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

ಗಡಿಯ ಬೇಚಾ ಗ್ರಾಮದ ಬಳಿ ಯೋಧರು ಬಂದಾಗ ನಕ್ಸಲರು ಇವರತ್ತ ಹಠಾತ್ ಗುಂಡಿನ ದಾಳಿ ನಡೆಸಿದ್ದಾರೆ. ಮೃತರಿಬ್ಬರೂ 2011-12ರಲ್ಲಿ ಸೇನೆಗೆ ಸೇರಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿ ಜಯಂತ್ ವೈಷ್ಣವ್ ತಿಳಿಸಿದ್ದಾರೆ. ಇಂದು ನಕ್ಸಲರು ನೆರೆಯ ಬಸ್ತಾರ್ ಜಿಲ್ಲೆ ಬಂದ್‌ಗೆ ಕರೆಕೊಟ್ಟಿದ್ದರು. ಬುಡಕಟ್ಟು ಜನಾಂಗದವರ ಮೇಲಿನ ನಕಲಿ ಎನ್‌ಕೌಂಟರ್ ವಿರುದ್ಧ ನಕ್ಸಲರು ಬಂದ್ ಕರೆ ನೀಡಿದ್ದಾರೆ.

Write A Comment