ಕರ್ನಾಟಕ

ದಲಿತ ಉದ್ಯಮಿಗಳಿಗೆ ಬ್ಯಾಂಕ್ ಸಾಲದ ಭರವಸೆ

Pinterest LinkedIn Tumblr

noteಬೆಂಗಳೂರು, ಮಾ. ೯ – ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ದಲಿತ ಕೈಗಾರಿಕೋದ್ಯಮಿಗಳಿಗೆ ಸಾಲ ನೀಡುವಾಗ ಕೆಲವೊಂದು ತೊಂದರೆಗಳಾಗುತ್ತಿದ್ದು, ಬ್ಯಾಂಕ್‌ನವರು ಸಾಲ ನೀಡುವಾಗ ಅನವಶ್ಯಕ ದಾಖಲೆಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ದಲಿತ ಉದ್ಯಮಿಗಳಿಗೆ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಎಸ್.ಸಿ./ಎಸ್.ಟಿ. ಉದ್ದಿಮೆದಾರರು ಮತ್ತು ಕೈಗಾರಿಕೋದ್ಯಮಿಗಳ ಸಂಘ ಬೆಂಗಳೂರಿನಲ್ಲಿಂದು ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪಂಗಡದ ಉದ್ದಿಮೆದಾರರು ಎದುರಿಸುತ್ತಿರುವ ಸವಾಲುಗಳು ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ದಲಿತ ಉದ್ಯಮಿಗಳಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ದಲಿತರು ಮುಂದೆ ಬರಬೇಕು. ಬೆಂಗಳೂರು ನಗರವೊಂದನ್ನೇ ಕೇಂದ್ರೀಕರಿಸದೇ ನಗರದ ಹೊರ ಭಾಗದಲ್ಲೂ ಉದ್ದಿಮೆ ಸ್ಥಾಪಿಸಲು ಮುಂದೆ ಬರಬೇಕು. ಎಲ್ಲವನ್ನೂ ಸಂಘರ್ಷದಿಂದಲೇ ಪಡೆಯಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಸಂಘರ್ಷ ಮಾಡಿದ್ದಾರೆ. ಈಗ ನಾವು ಅದರ ಫಲ ಉಣ್ಣುತ್ತಿದ್ದೇವೆ. ಈ ಸಂದರ್ಭದಲ್ಲಿ ಸಂಘರ್ಷ ಬೇಡ. ಅಧಿಕಾರಿಗಳೂ ಕೂಡ ವಿಳಂಬ ಧೋರಣೆ ಅನುಸರಿಸದೇ ಸರ್ಕಾರದ ಸೌಲಭ್ಯಗಳನ್ನು ದಲಿತರಿಗೆ ಒದಗಿಸಿಕೊಡಬೇಕು. ದಲಿತರೂ ಹಾಗೂ ಅಧಿಕಾರಿಗಳು ವಿವೇಕ ಹಾಗೂ ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು.
ಸರ್ಕಾರ ಪರಿಶಿಷ್ಟ ಜಾತಿ/ಪಂಗಡ ಉಪಯೋಜನೆ ಕಾಯ್ದೆ ಜಾರಿಗೊಳಿಸಿದ್ದು, ದೇಶದಲ್ಲೇ ಪರಿಣಾಮಕಾರಿ ಕಾಯ್ದೆ ಕರ್ನಾಟಕದ ಕಾಯ್ದೆಯಾಗಿದೆ.
ಅಂಬೇಡ್ಕರ್ ಅವರ ೧೨೫ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ೧.೫ ಲಕ್ಷ ಮನೆಗಳನ್ನು ನಿರ್ಮಿಸಲು ಸಂಕಲ್ಪ ಮಾಡಲಾಗಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದೇಶದಲ್ಲಿ ಓದುವ ದಲಿತ ವಿದ್ಯಾರ್ಥಿಗಳಿಗೆ ೪೦ ಲಕ್ಷ ರೂ.ವರೆಗೆ ಸಾಲ, ಹೋಬಳಿಗೊಂದು ವಸತಿ ಶಾಲೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
೫೦ ಲಕ್ಷ ರೂ. ವರೆಗಿನ ಟೆಂಡರ್‌ನಲ್ಲಿ ಮೀಸಲಾತಿ ಒದಗಿಸುವ ಸಂಬಂಧ ಶೀಘ್ರವೇ ಕಾಯ್ದೆ ತರಲಾಗುವುದು. ದಲಿತರಿಗೆ ಉದ್ಯಮಿಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಕಾರ್ಯಾಧ್ಯಕ್ಷ ಟಿ.ಬಿ. ಶ್ರೀನಿವಾಸನ್ ಮಾತನಾಡಿ, ಕೆಎಸ್‌ಎಸ್‌ಐಡಿಪಿಯಲ್ಲಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶವನ್ನು ದಲಿತರಿಗೆ ಶೇ. ೨೨ ರಷ್ಟು ಮೀಸಲಿಡಬೇಕು, ಬಂಡವಾಳ ಹೂಡಿಕೆಗೆ ಸಹಾಯ ಮಾಡಬೇಕು, ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ, ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಕೆ.ಎಸ್.ಎಸ್.ಸಿ. ಡಿ.ವಿ. ಪ್ರಸಾದ್, ನಿಲಯ ಮಿತಾಶ್, ಡಾ. ಎ. ವೆಂಕಟಯ್ಯ ಮತ್ತಿತರರು ಭಾಗವಹಿಸಿದರು.

Write A Comment