ಕರ್ನಾಟಕ

ರಾಜ್ಯದಲ್ಲಿ 6 ಸಾವಿರ ಆನೆ, 400 ಹುಲಿ

Pinterest LinkedIn Tumblr

ramanatha_rai_minister forest
ಬೆಂಗಳೂರು, ಮಾ. ೯ – ರಾಜ್ಯದಲ್ಲಿ ೬,೦೦೦ಕ್ಕೂ ಹೆಚ್ಚು ಆನೆಗಳು ಹಾಗೂ ೪೦೦ಕ್ಕೂ ಹೆಚ್ಚು ಹುಲಿಗಳಿದ್ದು, ದೇಶದಲ್ಲೇ ಪ್ರಥಮ ಸ್ಥಾನ ಪಡೆದಿರುವುದು ಹೆಗ್ಗಳಿಕೆಯ ವಿಷಯ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಇಂದಿಲ್ಲಿ ಹೇಳಿದರು.
ಇತ್ತೀಚೆಗೆ ನಡೆದ ಹುಲಿಗಳ ಗಣತಿಯಲ್ಲಿ ೪೦೦ಕ್ಕೂ ಹೆಚ್ಚು ಹುಲಿಗಳಿವೆ. ಈ ಮೂಲಕ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಅದೇ ರೀತಿ ಆನೆಗಳ ಪೈಕಿಯಲ್ಲೂ ದೇಶ ಮುಂದಿದೆ. ವನ್ಯಜೀವಿಗಳಿದ್ದರೆ ನಾಡು ಹಾಗೂ ಕಾಡು ಆರೋಗ್ಯವಂತವಾಗಿರಲು ಸಾಧ್ಯ ಎಂದು ಹೇಳಿದರು.
ಹುಲಿಗಳ ನಿಗಾ ಕುರಿತಂತೆ ಹೊರ ತರಲಾಗಿರುವ ವೈಜ್ಞಾನಿಕ ನಿಯತಕಾಲಿಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮನುಷ್ಯ ಮತ್ತು ಪ್ರಾಣಿ ಸಂಘರ್ಷವನ್ನು ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಜತೆಗೆ ಸಾರ್ವಜನಿಕರ ಸಹಭಾಗಿತ್ವವೂ ಬೇಕಾಗಿದೆ.
ವನ್ಯ ಜೀವಿಯ ಸಂರಕ್ಷಣೆಯ ಜತೆಗೆ ಮಾನವ ಸಂಘರ್ಷವನ್ನು ಕಡಿಮೆ ಮಾಡಬೇಕಾಗಿದೆ ಎಂದು ಹೇಳಿದರು. ದಟ್ಟ ಅರಣ್ಯವನ್ನು ದಟ್ಟ ಅರಣ್ಯವನ್ನಾಗಿ ಉಳಿಸಿಕೊಂಡರೆ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವುದಿಲ್ಲ. ಈ ನಿಟ್ಟಿನಲ್ಲಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಪಾತ್ರ ಬಹುದೊಡ್ಡದಿದೆ ಎಂದು ಹೇಳಿದರು.
ವನ್ಯಜೀವಿಗಳ ಸಂರಕ್ಷಣೆ ಮತ್ತು ಪರಿಣಾಮಕಾರಿ ಫಲಿತಾಂಶ ಪಡೆಯುವ ಕೆಲಸ ಹೆಚ್ಚು ಹೆಚ್ಚು ಆಗಬೇಕಾಗಿದೆ. ರಾಜ್ಯದ ಅಭಯಾರಣ್ಯಗಳಲ್ಲಿ ಹುಲಿಗಳ ಮೇಲೆ ನಿಗಾ ಇಡಲು ಸಿಎಸ್‌ಎಸ್‌ಕಾರ್ಪ್ ೮೦೦ ಹುಲಿ ನಿಗಾ ಕ್ಯಾಮೆರಾಗಳನ್ನು ನೀಡಿವೆ. ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಆನೆ ದಾಳಿ ನಿಯಂತ್ರಿಸಲು ಕಂದಕಗಳ ನಿರ್ಮಾಣ, ರೈಲ್ವೆ ಪಟ್ಟಿ ಅಳವಡಿಸುವ ಕೆಲಸ ನಡೆದಿದೆ. ಅರಣ್ಯ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಅರಣ್ಯ ಸಂಪತ್ತು ಉಳಿದರೆ ಹವಾಮಾನ ವೈಪರೀತ್ಯದಿಂದ ಪಾರಾಗಬಹುದು. ಕಾಡು ಉಳಿದರೆ ನಾಡು, ನಾಡು ಉಳಿದರೆ ಮನುಷ್ಯ ಎನ್ನುವ ಸತ್ಯವನ್ನು ಅರಿಯಬೇಕಾಗಿದೆ ಎಂದು ಹೇಳಿದರು.
ಸಿಎಸ್‌ಎಸ್ ಕಾರ್ಪ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟೈಗರ್ ರಮೇಶ್ ಮಾತನಾಡಿ, ಹುಲಿಗಳ ಮೇಲೆ ನಿಗಾ ಇಡಲು ದಾಂಡೇಲಿ, ಅಣಸಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ೧೦೦ ಕ್ಯಾಮೆರಾ, ಬಂಡೀಪುರಕ್ಕೆ ೩೦೦ ಹಾಗೂ ನಾಗರಹೊಳೆಗೆ ೪೦೦ ಕ್ಯಾಮೆರಾ ಸೇರಿದಂತೆ ೮೦೦ ಕ್ಯಾಮೆರಾಗಳನ್ನು ೨ ಕೋಟಿ ವೆಚ್ಚದಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಮೇಲೆ ನಿಗಾ ಇಡುವ ಕ್ಯಾಮೆರಾಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿನಯ್ ಲೂತ್ರಾ, ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ರವಿ ರಾಲ್ಫ್ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಿಎಸ್‌ಎಸ್ ಕಾರ್ಪ್‌ನ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment