ಕರ್ನಾಟಕ

10 ಶ್ರೀಮಂತ ದೇವಾಲಯಗಳಿಗೆ ಹೈಟೆಕ್ ಸ್ಪರ್ಶ

Pinterest LinkedIn Tumblr

STATE-16| ಸುಪ್ರೀತಾ ಹೆಬ್ಬಾರ್

ಬೆಂಗಳೂರು: ಅತಿ ಹೆಚ್ಚು ಆದಾಯ ಗಳಿಸುವ ರಾಜ್ಯದ ಹತ್ತು ದೇವಸ್ಥಾನಗಳು ಸದ್ಯದಲ್ಲೇ ‘ಹೈಟೆಕ್’ ಆಗಲಿವೆ. ಕಳೆದ ವರ್ಷ ಅತಿ ಹೆಚ್ಚು ಆದಾಯ ಗಳಿಸಿದ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿ ಸೇರಿ ಹತ್ತು ದೇವಸ್ಥಾನಗಳಿಗೆ ಆಧುನಿಕತೆಯ ಸ್ಪರ್ಶ ನೀಡಿ ಉನ್ನತೀಕರಣಗೊಳಿಸಲು ರಾಜ್ಯ ಮುಜರಾಯಿ ಇಲಾಖೆ ಮುಂದಾಗಿದೆ.

ಈ ಯೋಜನೆಗೆ ದೇವಾಲಯದ ಹಣವನ್ನೇ ಬಳಸಿಕೊಳ್ಳಲಾಗುತ್ತಿದೆ. ಬಾಕಿಯಿರುವ ಠೇವಣಿ ಹಣ ಬಳಸಿ ‘ಬೃಹತ್ ದೇವಾಲಯಗಳ ಪೂರ್ಣಾಭಿವೃದ್ಧಿ ಯೋಜನೆ’ ರೂಪಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, 7 ದೇಗುಲಗಳ ಅಭಿವೃದ್ಧಿಗೆ ಸರ್ಕಾರ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಮೂರು ದೇಗುಲಗಳ ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿದೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಬೇಡಿಕೆಗನುಸಾರ ಅಭಿವೃದ್ಧಿ: ದೇವಸ್ಥಾನಗಳಲ್ಲಿ ಬಾಕಿ ಉಳಿದ ಹಣವನ್ನು ಗಮನದಲ್ಲಿರಿಸಿಕೊಂಡು ದೇಗುಲದ ಬೇಡಿಕೆಗೆ ಅನುಸಾರವಾಗಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇಗುಲದಲ್ಲಿ ಸೆಲ್ಟರ್ ಹಾಗೂ ಆಧುನಿಕ ನೆಲಹಾಸು ಹಾಕುವ ಪ್ರಸ್ತಾವನೆಯಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರದಿಂದ ದೇಗುಲದವರೆಗೆ ಡಬ್ಬಲ್ ರಸ್ತೆ ನಿರ್ವಿುಸುವ ಪ್ರಕ್ರಿಯೆ ಆರಂಭಗೊಂಡಿದೆ.

ಎಲ್ಲಾ ದೇಗುಲಗಳಲ್ಲಿ ಸಾವಿರಾರು ಮಂದಿ ಕುಳಿತುಕೊಳ್ಳಬಹುದಾದ ಬೃಹತ್ ಭೋಜನಾ ಶಾಲೆಗಳನ್ನು ನಿರ್ವಿುಸಲಾಗುತ್ತಿದೆ. ಕನಕಪುರದ ಕಬ್ಬಾಳಮ್ಮ ದೇವಸ್ಥಾನದಲ್ಲಿ ಆರ್ನಮೆಂಟಲ್ ಗ್ರಿಲ್ ಕಾಂಪೌಂಡ್ ನಿರ್ವಿುಸಲಾಗುತ್ತಿದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ವಾಣಿಜ್ಯ ಸಮುಚ್ಚಯ, ಸರತಿ ಸಾಲಿಗೆ ಪ್ರತ್ಯೇಕ ಬ್ಲಾಕ್, ವಾಹನ ನಿಲುಗಡೆಗೆ ಬಹು ಅಂತಸ್ತಿನ ಕಟ್ಟಡ, ಕೋಲಾರ ಚಿಕ್ಕತಿರುಪತಿಯ ಮುಂಭಾಗದಲ್ಲಿ 108 ಅಡಿ ರಾಜಗೋಪುರ ನಿರ್ವಿುಸುವ ಗುರಿ ಹೊಂದಲಾಗಿದೆ.

ಒಂದು ಕೋಟಿ ರೂ.ಗಳಿಗೂ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ದೇಗುಲಗಳ ಅಭಿವೃದ್ಧಿಗೆ ಸರ್ಕಾರ 400 ಕೋಟಿ ರೂ. ಅನುದಾನ ನೀಡಿದೆ ಎಂದು ಇಲಾಖೆಯ ಪ್ರಧಾನ ಕಚೇರಿಯ ಸಹಾಯಕ ಅಧಿಕಾರಿ ಎಂ.ನಾಗರಾಜ್ ಮಾಹಿತಿ ನೀಡಿದರು.

ಕುಕ್ಕೆ ಸುಬ್ರಹ್ಮಣ್ಯ ನಂ.1

2014-15ನೇ ಸಾಲಿನಲ್ಲೂ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 77.60 ಕೋಟಿ ರೂ. ಆದಾಯದೊಂದಿಗೆ ಅತಿ ಹೆಚ್ಚು ಆದಾಯ ಗಳಿಸುವ ದೇಗುಲ ಎಂಬ ಗರಿ ಉಳಿಸಿಕೊಂಡಿದೆ. ನಂತರ ಕ್ರಮವಾಗಿ ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕಾ(31.21 ಕೋಟಿ ರೂ.), ಮೈಸೂರಿನ ಚಾಮುಂಡೇಶ್ವರಿ (18.31 ಕೋಟಿ ರೂ.), ಕಟೀಲಿನ ದುರ್ಗಾಪರಮೇಶ್ವರಿ (18.23 ಕೋಟಿ ರೂ), ನಂಜನಗೂಡಿನ ಶ್ರೀಕಂಠೇಶ್ವರ(15.94 ಕೋಟಿ ರೂ.), ಸವದತ್ತಿಯ ರೇಣುಕಾ ಯಲ್ಲಮ್ಮ (15.94 ಕೋಟಿ ರೂ.), ಉಡುಪಿ ಜಿಲ್ಲೆ ಮಂದಾರ್ತಿಯ ದುರ್ಗಾಪರಮೇಶ್ವರಿ (7.59 ಕೋಟಿ ರೂ.), ಕೊಪ್ಪಳ ಜಿಲ್ಲೆ ಹುಲಿಗಿಯ ಹುಲಿಗೆಮ್ಮ(6.49 ಕೋಟಿ ರೂ.), ತುಮಕೂರು ಕುಣಿಗಲ್ಲಿನ ಸಿದ್ದಲಿಂಗೇಶ್ವರ ದೇವಸ್ಥಾನ(6.14 ಕೋಟಿ ರೂ.), ಬೆಂಗಳೂರಿನ ಬನಶಂಕರಿ ದೇವಸ್ಥಾನ(6.04 ಕೋಟಿ ರೂ.) ಆದಾಯ ದಾಖಲಿಸಿವೆ.

Write A Comment