ಕರ್ನಾಟಕ

515 ಕೋಟಿ ರೂಪಾಯಿ ಮಲ್ಯಗೋ, ಬ್ಯಾಂಕ್‌ಗೋ ?

Pinterest LinkedIn Tumblr

vijay-mallya-new-reuters-Lಬೆಂಗಳೂರು: ಯುನೈಟೆಡ್‌ ಸ್ಪಿರಿಟ್ಸ್‌ ಕಂಪನಿಯ ಮುಖ್ಯಸ್ಥ ಹುದ್ದೆಯಿಂದ ನಿರ್ಗಮಿಸಿದ್ದಕ್ಕಾಗಿ ಬ್ರಿಟನ್‌ನ ಡೈಜಿಯೋ ಕಂಪನಿಯಿಂದ “ಮದ್ಯದ ದೊರೆ’ ಹಾಗೂ ಯುಬಿ ಕಂಪನಿ ಮಾಲೀಕ ವಿಜಯ್‌ ಮಲ್ಯಗೆ ಸಿಗುತ್ತಿರುವ 515 ಕೋಟಿ ರೂ. ಹಣದ ಮೊದಲ ಹಕ್ಕು ತಮ್ಮದಾಗಬೇಕು ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ನೇತೃತ್ವದ ಬ್ಯಾಂಕುಗಳ ಒಕ್ಕೂಟ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧಿಕರಣ (ಡಿಆರ್‌ಟಿ) ಸೋಮವಾರ ಪ್ರಕಟಿಸಲಿದೆ.

ಎಸ್‌ಬಿಐ ಸೇರಿದಂತೆ 17 ಬ್ಯಾಂಕುಗಳಿಗೆ 7 ಸಾವಿರ ಕೋಟಿ ರೂ. ಸಾಲ ಮರುಪಾವತಿಸುವಲ್ಲಿ ಮಲ್ಯ ವಿಫ‌ಲರಾಗಿದ್ದಾರೆ. ಹೀಗಾಗಿ ಅವರಿಂದ ಸಾಧ್ಯವಿರುವಷ್ಟು ಹಣ ವಸೂಲಿ ಮಾಡಲು ಮುಂದಾಗಿರುವ 17 ಬ್ಯಾಂಕುಗಳ ಒಕ್ಕೂಟ ಎಸ್‌ಬಿಐ ನೇತೃತ್ವದಲ್ಲಿ ಡಿಆರ್‌ಟಿಗೆ ಅರ್ಜಿ ಸಲ್ಲಿಸಿತ್ತು. ಮಾ.4ರಂದು ಬ್ಯಾಂಕ್‌ ಹಾಗೂ ಮಲ್ಯ ಪರ ವಕೀಲರ ವಾದ ಆಲಿಸಿದ್ದ ಡಿಆರ್‌ಟಿ, ತೀರ್ಪು ಕಾದಿರಿಸಿತ್ತು. ಅದರ ತೀರ್ಪು ಸೋಮವಾರ ಪ್ರಕಟವಾಗಲಿದೆ ಎಂದು ಬ್ಯಾಂಕುಗಳ ಪರ ವಕೀಲ ಜಾರ್ಜ್‌ ಜೋಸೆಫ್ ತಿಳಿಸಿದ್ದಾರೆ.

515 ಕೋಟಿ ರೂ. ಹಣ ಮಲ್ಯ ಅವರಿಗೆ ಸಂದಾಯವಾಗಲಿದೆ. ಅದರ ಮೊದಲ ಹಕ್ಕು ತಮ್ಮದಾಗಬೇಕು ಎಂಬುದು ಮಾತ್ರವಲ್ಲದೇ ಇತರೆ ಮೂರು ಅರ್ಜಿಗಳನ್ನು ಡಿಆರ್‌ಟಿಗೆ ಎಸ್‌ಬಿಐ ನೇತೃತ್ವದ ಒಕ್ಕೂಟ ಸಲ್ಲಿಸಿದೆ. ಮಲ್ಯ ಅವರನ್ನು ಬಂಧಿಸಬೇಕು, ಅವರ ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ದೇಶ- ವಿದೇಶಗಳಲ್ಲಿರುವ ಆಸ್ತಿಯ ಸಂಪೂರ್ಣ ಮಾಹಿತಿ ಬಹಿರಂಗಗೊಳಿಸುವಂತೆ ಸೂಚಿಸಬೇಕು ಎಂಬ ಅರ್ಜಿಗಳನ್ನು ಹಾಕಿದೆ. ಆದರೆ, 515 ಕೋಟಿ ರೂ.ಗೆ ಸಂಬಂಧಿಸಿದ ಅರ್ಜಿಯನ್ನು ಡಿಆರ್‌ಟಿ ನ್ಯಾಯಾಧೀಶ ಬೆನಕನಹಳ್ಳಿ ಅವರು ಆದ್ಯತೆ ಮೇರೆಗೆ ವಿಚಾರಣೆಗೆ ಎತ್ತಿಕೊಂಡಿದ್ದಾರೆ. ಉಳಿದ ಅರ್ಜಿಗಳನ್ನು ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

ಬ್ರಿಟನ್‌ನ ಬಹುರಾಷ್ಟ್ರೀಯ ಕಂಪನಿ ಡೈಜಿಯೋಗೆ ಯುನೈಟೆಡ್‌ ಸ್ಪಿರಿಟ್ಸ್‌ ಮಾರಾಟ ಮಾಡಿದ್ದರೂ ಮಲ್ಯ ಅವರು ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದರು. ಕೊನೆಗೆ ಅವರು ಅಧ್ಯಕ್ಷ ಹುದ್ದೆ ತ್ಯಜಿಸಲು ಒಪ್ಪಿದ ಹಿನ್ನೆಲೆಯಲ್ಲಿ ತಕ್ಷಣಕ್ಕೆ 260 ಕೋಟಿ, ಮುಂದಿನ ಐದು ವರ್ಷಗಳಲ್ಲಿ ಕಂತುಗಳ ಮೂಲಕ ಒಟ್ಟಾರೆ 515 ಕೋಟಿ ರೂ. ನೀಡುವುದಾಗಿ ಡೈಜಿಯೋ ತಿಳಿಸಿದೆ. ಈ ಹಣದ ಹಕ್ಕು ತಮ್ಮದಾಗಬೇಕು ಎಂಬುದು ಎಸ್‌ಬಿಐ ವಾದ.

ಡಿಆರ್‌ಟಿ ಮುಂದೆ ಮಲ್ಯ ಪರ ಪ್ರಖ್ಯಾತ ನ್ಯಾಯವಾದಿ ಉದಯ್‌ ಹೊಳ್ಳ ವಾದ ಮಂಡಿಸಿದ್ದಾರೆ. ಅಂಬಾನಿಗಳ ರಿಲಯನ್ಸ್‌ ಕಂಪನಿಗೆ ಹೋಲಿಸಿದರೆ ಮಲ್ಯ ಅವರು ಸಣ್ಣ ಮೊತ್ತದ ಸಾಲ ಕಟ್ಟಲು ವಿಫ‌ಲರಾಗಿದ್ದಾರೆ. ಕೆಲವೊಂದು ಕಂಪನಿಗಳು 40 ಸಾವಿರ ಕೋಟಿ ರೂ.ವರೆಗೂ ಸಾಲ ಬಾಕಿ ಉಳಿಸಿಕೊಂಡಿವೆ. ಅಂಥವರಿಗೆ ಏನೂ ಆಗಿಲ್ಲ. ದೊಡ್ಡ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸುವ ಬದಲು ಸಣ್ಣವರ ಮೇಲೆ ಬ್ಯಾಂಕುಗಳ ಕ್ರಮ ಕೈಗೊಳ್ಳುತ್ತಿವೆ ಎಂದು ದೂರಿದ್ದಾರೆ.
-ಉದಯವಾಣಿ

Write A Comment