ಕರ್ನಾಟಕ

ಗಾಯಾಳುಗಳ ನೆರವಿಗೆ ಕೋರ್ಟ್

Pinterest LinkedIn Tumblr

courtಇತ್ತೀಚೆಗೆ ಬೆಂಗಳೂರಿನ ರಸ್ತೆಯೊಂದರಲ್ಲಿ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ಯುವಕನೊಬ್ಬನನ್ನು ಒಂದು ತಾಸು ಕಳೆದರೂ ದಾರಿಹೋಕರು ಆಸ್ಪತ್ರೆಗೆ ಸೇರಿಸದೆ, ಆತನ ನೆರವಿಗೂ ಧಾವಿಸದೆ, ವಿಡಿಯೋ ಮಾಡಿಕೊಂಡು ನಿಂತಿದ್ದುದು ಸುದ್ದಿಯಾಗಿತ್ತು. ಜನರಲ್ಲಿ ಮಾನವೀಯತೆ ಕಡಿಮೆಯಾಗುತ್ತಿದೆಯೇ ಎಂದು ಪ್ರಶ್ನಿಸುವುದಕ್ಕಿಂತ ಇಲ್ಲಿ ಎದ್ದು ಕಾಣುವುದು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಅಥವಾ ಪೊಲೀಸರಿಗೆ ಈ ಸುದ್ದಿ ಮುಟ್ಟಿಸಿ ನೆರವಿಗೆ ಧಾವಿಸಿದವನಿಗೆ ಆನಂತರ ಸುತ್ತಿಕೊಳ್ಳುವ ಕಾನೂನು ಹಾಗೂ ಪೊಲೀಸ್‌ ವಿಚಾರಣೆಯ ತಲೆನೋವು.
ಈ ಕಾರಣಕ್ಕೇ ದೇಶಾದ್ಯಂತ ಪ್ರತಿದಿನ ರಸ್ತೆ ಅಪಘಾತಕ್ಕೊಳಗಾದವರಲ್ಲಿ ಎಷ್ಟೋ ಜನ ಸೂಕ್ತ ಕಾಲಕ್ಕೆ ನೆರವು ಸಿಗದೆ ಸಾವಿಗೀಡಾಗುತ್ತಿದ್ದಾರೆ ಎಂದು ಸಾರಿಗೆ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ.
“ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ, ನಿಮಗೆ ಯಾವುದೇ ತೊಂದರೆ ಕೊಡುವುದಿಲ್ಲ’ ಎಂದು ಪೊಲೀಸರು ಮನವಿ ಮಾಡಿಕೊಂಡರೂ ಅದಕ್ಕೆ ಜನರು ಕಿವಿಗೊಡುತ್ತಿಲ್ಲ. ಏಕೆಂದರೆ ನಂತರ ಪೊಲೀಸರು ಇವರನ್ನೇ ಕೋರ್ಟ್‌ನಲ್ಲಿ ಸಾಕ್ಷ್ಯ ಹೇಳಲು ಕರೆಯುತ್ತಾರೆ.

ಹೀಗೆ ಅಪಘಾತದ ಸಮಯದಲ್ಲಿ ನೆರವಿಗೆ ಧಾವಿಸುವವರನ್ನು ಕಾನೂನಿನ ತಲೆನೋವಿನಿಂದ ರಕ್ಷಿಸಲು ಇತ್ತೀಚೆಗೆ ಸುಪ್ರೀಂಕೋರ್ಟ್‌ ಹೊರಡಿಸಿರುವ ಆದೇಶ ಸೂಕ್ತವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ರಚಿಸಿರುವ ನಿಯಮಾವಳಿಗಳನ್ನು ಎಲ್ಲಾ ರಾಜ್ಯ ಸರ್ಕಾರಗಳೂ 30 ದಿನದೊಳಗೆ ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿರುವುದು ಕೂಡ ಸೂಕ್ತವಾಗಿದೆ. ಏಕೆಂದರೆ ಈ ಹಿಂದೆ ಕೇಂದ್ರ ಸರ್ಕಾರ ಈ ಬಗ್ಗೆ ಕೈಗೊಂಡ ಯಾವ ಕ್ರಮಗಳನ್ನೂ ರಾಜ್ಯ ಸರ್ಕಾರಗಳು ಸರಿಯಾಗಿ ಜಾರಿಗೆ ತಂದಿರಲಿಲ್ಲ. ಈಗ ಸುಪ್ರೀಂಕೋಟೇì ಆದೇಶ ಹೊರಡಿಸಿರುವುದರಿಂದ ಇದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಾನೂನಿನಂತೆ ಕಡ್ಡಾಯವಾಗುತ್ತದೆ.

ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವವರಿಗೆ ಕಾನೂನು ಹಾಗೂ ಪೊಲೀಸ್‌ ವಿಚಾರಣೆಯ ತಲೆನೋವು ಇರಬಾರದು ಎಂದು ಸ್ವಯಂಸೇವಾ ಸಂಸ್ಥೆಯೊಂದು ಕೆಲ ವರ್ಷಗಳ ಹಿಂದೆ ಸುಪ್ರೀಂಕೋರ್ಟಿಗೆ ಹೋಗಿತ್ತು. ಅದಕ್ಕೆ 2012ರಲ್ಲೇ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಈ ಬಗ್ಗೆ ಕಾಯ್ದೆಗೆ ತಿದ್ದುಪಡಿ ತನ್ನಿ ಅಥವಾ ಹೊಸ ನಿಯಮಾವಳಿ ರೂಪಿಸಿ ಎಂದು ಹೇಳಿತ್ತು. ನಂತರ ಆ ಕಾರ್ಯ ನೆನೆಗುದಿಗೆ ಬಿದ್ದಿತ್ತು.

ಕಳೆದ ವರ್ಷ ಎಚ್ಚೆತ್ತುಕೊಂಡ ಕೇಂದ್ರ ಸಾರಿಗೆ ಇಲಾಖೆ ಈ ಬಗ್ಗೆ ನಿಯಮಾವಳಿ ರೂಪಿಸಿತ್ತು. ಅದನ್ನು ರಾಜ್ಯ ಸರ್ಕಾರಗಳಿಗೂ ಕಳುಹಿಸಿತ್ತು. ಆದರೆ, ರಾಜ್ಯಗಳಲ್ಲಿ ಪೊಲೀಸರು ಹಾಗೂ ಆಸ್ಪತ್ರೆಗಳ ಕಾರ್ಯವಿಧಾನ ಮಾತ್ರ ಬದಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಸುಪ್ರೀಂಕೋರ್ಟಿಗೇ ಹೋದ ಕೇಂದ್ರ ಸರ್ಕಾರ, ಈ ಬಗ್ಗೆ ಆದೇಶ ಹೊರಡಿಸುವಂತೆ ಕೇಳಿಕೊಂಡಿತ್ತು. ಅದರಂತೆ ಈಗ ಹೊರಬಿದ್ದಿರುವ ಆದೇಶ ಕೊನೆಗೂ ಅಪಘಾತದ ಗಾಯಾಳುಗಳ ನೆರವಿಗೆ ಬರುವಂತಿದೆ. ಹಾಗೆಯೇ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಅಥವಾ ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವವರ ನೆರವಿಗೂ ಬರುವಂತಿದೆ.

ಸುಪ್ರೀಂಕೋರ್ಟ್‌ನ ಆದೇಶದ ಪ್ರಕಾರ, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದವರ ಹೆಸರನ್ನು ಕೂಡ ಆಸ್ಪತ್ರೆಯವರು ಬಲವಂತವಾಗಿ ಕೇಳುವಂತಿಲ್ಲ. ಹಾಗೆಯೇ ಪೊಲೀಸರು ಕೂಡ ಇವರನ್ನು ಸಾಕ್ಷ್ಯ ಹೇಳಲು ಬರುವಂತೆ ಬಲವಂತವಾಗಿ ಕರೆಯುವಂತಿಲ್ಲ. ನೆರವಿಗೆ ಧಾವಿಸಿದವರು ಇಷ್ಟಪಟ್ಟರೆ ಅಪಘಾತ ನಡೆದ ದಿನವೇ ಆ ಘಟನೆಯಿಂದ ಸಂಪೂರ್ಣ ಮುಕ್ತರಾಗಬಹುದು.

ಗಾಯಾಳುಗಳು ಹಾಗೂ ನೆರವಿಗೆ ಧಾವಿಸುವವರ ದೃಷ್ಟಿಯಿಂದ ಇದು ಒಳ್ಳೆಯದೇ ಆಗಿದ್ದರೂ ಅಪಘಾತದ ಪ್ರಕರಣಗಳ ತನಿಖೆ ನಡೆಸುವ ಪೊಲೀಸರ ತಲೆನೋವನ್ನು ಇದು ಜಾಸ್ತಿ ಮಾಡಲಿದೆ. ಸಾಕ್ಷ್ಯ ಹೇಳಲು ಅವರಿಗೆ ಯಾರೂ ಸಿಗದೇ ಹೋಗಬಹುದು. ಆದರೂ ಎಲ್ಲಕ್ಕಿಂತ ಜೀವ ಮುಖ್ಯ ಎಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಈ ಮಾರ್ಗದರ್ಶಿ ಸೂತ್ರವನ್ನು ಕೂಡಲೇ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕಿದೆ.
-ಉದಯವಾಣಿ

Write A Comment