ಕರ್ನಾಟಕ

ಕನ್ನಡಿ ಗ ಆದ ನನಗೆ ಅನ್ಯಾಯ :ಕ್ಯಾಪ್ಟನ್ ಮಲ್ಲಿಕಾರ್ಜುನ್

Pinterest LinkedIn Tumblr

MALLIಬೆಂಗಳೂರು, ಮಾ.5- ರಾಜ್ಯಸರ್ಕಾರದ ಯೋಜನಾ ಸೇವಾ ಇಲಾಖೆ ಕರೆದಿದ್ದ ಮುಖ್ಯ ವಿಮಾನ ಬೋಧಕರ ಹುದ್ದೆಗೆ ಅರ್ಹನಾಗಿರುವ ನನ್ನನ್ನೇ ಪರಿಗಣಿಸಬೇಕು ಎಂದು ಕ್ಯಾಪ್ಟನ್ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಠಿಣ ಪರಿಶ್ರಮದಿಂದ ಬಿಎಸ್‌ಸಿ ಕಾನೂನು ಪದವಿ ಪಡೆದು ಉನ್ನತ ವ್ಯಾಸಂಗ ಮಾಡಿ 80ರ ದಶಕದಲ್ಲಿ ವಿಮಾನ ಚಾಲನಾ ತರಬೇತಿಯನ್ನು ಪೂರ್ಣಗೊಳಿಸಿದ್ದೇನೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಲೈಸೆನ್ಸ್ ಪಡೆದು ಲಘು ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಹಾರಾಟದಲ್ಲಿ ಸಾಕಷ್ಟು ಪರಿಣತಿ ಪಡೆದು ದೇಶದ ಹಲವೆಡೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ನಗರದ ಜಕ್ಕೂರಿನಲ್ಲೂ ಹಲವು ವರ್ಷ ಸೇವೆ ಸಲ್ಲಿಸಿದ್ದೇನೆ. ಈ ನಡುವೆ ಜಕ್ಕೂರಿನಲ್ಲಿರುವ ಸರ್ಕಾರಿ ಒಡೆತನದ ವಿಮಾನ ತರಬೇತಿ ಶಾಲೆ ಯಲ್ಲಿ ಮುಖ್ಯ ವಿಮಾನ ಹಾರಾಟ ತರಬೇತು ದಾರರ ಹುದ್ದೆ ಖಾಲಿ ಇತ್ತು. ಇದರ ನಡುವೆ ಕಳೆದ 2012ರ ಜುಲೈ 3ರಂದು ನಮ್ಮ ರಾಜ್ಯ ಸರ್ಕಾರ ಯೋಜನಾ ಸೇವಾ ಇಲಾಖೆಯಿಂದ ಮುಖ್ಯ ವಿಮಾನ ಬೋಧಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಜತೆಗೆ ಕರ್ನಾಟಕ ರಾಜ್ಯದವರಿಗೇ ಈ ಹುದ್ದೆ ಮೀಸಲೆಂದು ತಿಳಿಸಿತ್ತು. ಎಲ್ಲ ನಿಯಮಗಳಂತೆ ನಾನು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಜತೆಗೆ ಕರ್ನಾಟಕ ರಾಜ್ಯದಿಂದ ಈ ಹುದ್ದೆಗೆ ಆಕಾಂಕ್ಷಿಯಾಗಿದ್ದುದು ನಾನೊಬ್ಬನೆ. ಆದರೆ, ನನಗೆ ಅಧಿಕಾರಿಗಳು ದಾರಿ ತಪ್ಪಿಸಿದರು.

ಸಂದರ್ಶನದ ನಂತರ ಸ್ಥಳೀಯರ್ಯಾಗರೂ ಅರ್ಜಿ ಸಲ್ಲಿಸಿಲ್ಲ ಎಂಬ ಮಾಹಿತಿ ನೀಡಿ ಅನ್ಯ ರಾಜ್ಯದ ವ್ಯಕ್ತಿಯೊಬ್ಬರನ್ನು ಈ ಸ್ಥಾನಕ್ಕೆ ತರಲು ಪ್ರಯತ್ನಿಸಿದರು. ಅದು ಸಾಧ್ಯವಾಗದ ಕಾರಣ ವಾಯುಪಡೆ ಅಧಿಕಾರಿಯೊಬ್ಬರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ಆದರೆ, ನನಗೆ ಈ ಸ್ಥಾನವನ್ನು ವಂಚಿಸಿದ್ದು ಏಕೆ ಎಂಬುದು ಈಗಲೂ ಅರ್ಥವಾಗಿಲ್ಲ ಎಂದು ಕ್ಯಾಪ್ಟನ್ ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದರು. ಕನ್ನಡಿಗರಿಗೆ ಇಷ್ಟೊಂದು ಅಪಮಾನ ಆಗುತ್ತಿರುವುದು ನನಗೆ ನೋವು ತಂದಿದೆ ಎಂದು ಹೇಳಿದ ಅವರು, ವಿಮಾನ ಬೋಧಕ ಹುದ್ದೆಗೆ ನಾನು ಎಲ್ಲ ಅರ್ಹತೆಯನ್ನೂ ಪಡೆದಿದ್ದೇನೆ. ಈಗಾಗಲೇ ಈ ಹುದ್ದೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ. ಅವರು ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಇದರಿಂದ ಏನೂ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡರು.

ಈ ಹುದ್ದೆ ಪಡೆಯುವ ಎಲ್ಲ ಅರ್ಹತೆ ಇರುವುದರಿಂದ ವಿಮಾನ ಬೋಧಕ ಹುದ್ದೆ ನನಗೇ ಸಿಗಬೇಕು ಎಂದು ಅವರು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಪ್ರಸಾದ್, ರೈತ ಸಂಘ (ನಂಜುಂಡಸ್ವಾಮಿ ಬಣ)ದ ಅಧ್ಯಕ್ಷ ಲಕ್ಷ್ಮಿನಾರಾಯಣಗೌಡ ಮತ್ತಿತರರು ಕ್ಯಾಪ್ಟನ್ ಮಲ್ಲಿಕಾರ್ಜುನ್ ಪರ ಮಾತನಾಡಿ ಕನ್ನಡಿಗರಾದ ಇವರಿಗೇ ವಿಮಾನ ಬೋಧಕ ಹುದ್ದೆ ಕೊಡಿಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

Write A Comment