ಕರ್ನಾಟಕ

ಕೋಟಿ ಕೋಟಿ ಸಾಲ ಮಾಡಿರೋರು ದುಡುಕುವುದಿಲ್ಲ: ತಾರಾ

Pinterest LinkedIn Tumblr

TARAಬೆಂಗಳೂರು, ಮಾ.5-ಐದು ಸಾವಿರ ಕೋಟಿ ರೂ.ಸಾಲ ಮಾಡುವಂತಹ ಮದ್ಯದ ದೊರೆಗಳು ಹಾಗೂ ಅವರಿಗೆ ಸಾಲ ನೀಡುವಂತಹ ಅಧಿಕಾರಿಗಳು ದುಡುಕುವುದಿಲ್ಲ. ಆದರೆ, ಕೇವಲ 5 ಸಾವಿರ ರೂ. ಸಾಲ ಮಾಡುವ ರೈತ ಬಡ್ಡಿ-ಚಕ್ರಬಡ್ಡಿ, ಸುಸ್ತಿಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಪರಿಷತ್ ಸದಸ್ಯೆ ತಾರಾ ಭಾವೋದ್ವೇಗಕ್ಕೆ ಒಳಗಾಗಿ ಹೇಳಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಸಾವಿರ ಕೋಟಿ ರೂ. ಸಾಲ ಮಾಡಿದ ಮದ್ಯದ ದೊರೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಆದರೆ, ನಮ್ಮ ಬಡ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ದುಃಖಕರ ವಿಷಯ ಎಂದರು. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವುದಾಗಿ ಸರ್ಕಾರ ಹೇಳಿದೆ. ಅದು ಕಾರ್ಯರೂಪಕ್ಕೆ ಬಂದಿಲ್ಲ. ವಿಧವೆಯರಿಗೆ ಸರಿಯಾದ ಪಿಂಚಣಿ ಬರುತ್ತಿಲ್ಲ ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು.

ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಲಕ್ಷಾಂತರ ಪೋಡಿ ವಿಲೇವಾರಿ ಆಗದೆ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು. ವಿಶ್ವ ವಿದ್ಯಾಲಯಗಳ ಹಾಸ್ಟೆಲ್‌ಗಳ ದುಸ್ಥಿತಿ ಹೇಳ ತೀರದಾಗಿದೆ. ಜಾತಿ ಸಮೀಕ್ಷೆ ವಿವರ ಸರಿಯಾಗಿಲ್ಲ. ಕಳೆದ 15 ವರ್ಷಗಳಿಂದ ಸುಮಾರು 10 ಲಕ್ಷ ಜನ ಕೃಷಿಯಿಂದ ವಿಮುಖರಾಗಿದ್ದಾರೆಂದು ತಾರಾ ಹೇಳಿದರು. ಡಿ.ಎಸ್.ವೀರಯ್ಯ ಮಾತನಾಡಿ, ಪರಿಶಿಷ್ಟ ಜಾತಿ-ಪಂಗಡದ ಉಪಧನ ಯೋಜನೆಯ ಹಣ ಸಕಾಲದಲ್ಲಿ ವೆಚ್ಚವಾಗಿಲ್ಲ. ಕಳೆದ ವರ್ಷದ 3.70 ಕೋಟಿ ಖರ್ಚಾಗಿಲ್ಲ. ವಿಶೇಷ ಘಟಕದ ಯೋಜನೆಯ ಹಣವನ್ನು ಬೇರೆ ಕಾಮಗಾರಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ತಾತ್ಕಾಲಿಕ ಯೋಜನೆಯನ್ನು ರೂಪಿಸುವುದಕ್ಕಿಂತ ಖಾಯಂ ಪುನಶ್ಚೇತನ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು. ಆಡಳಿತ ಪಕ್ಷದ ಸದಸ್ಯ ಧರ್ಮಸೇನ ಮಾತನಾಡಿ, ಸರ್ಕಾರದ ಯೋಜನೆಗಳ ಬಗ್ಗೆ ಪ್ರಶಂಸಿಸಿದರು. ಸಾಮಾಜಿಕ ನ್ಯಾಯಕ್ಕೆ ಒತ್ತು, ನೀರಾವರಿ ಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಜಯಮಾಲಾ ಮಾತನಾಡಿ, ಮೂರು ಲಕ್ಷ ಪೋಡಿಗಳನ್ನು ಮಾಡಲಾಗಿದೆ. ಸೋಲಾರ್ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿ ಸಬೇಕೆಂದು ಅವರು ಹೇಳಿದರು.

Write A Comment