ಕರ್ನಾಟಕ

ರೈತರ ಮೇಲೆ ಲಾಠಿ ಪ್ರಹಾರ, ಕೇಸು ಇಲ್ಲ ಗೃಹ ಮಂತ್ರಿ ಹೇಳಿಕೆ

Pinterest LinkedIn Tumblr

paraಬೆಂಗಳೂರು, ಮಾ. ೪ – ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಒತ್ತಾಯಿಸಿ ಬೆಂಗಳೂರಿನಲ್ಲಿ ನಿನ್ನೆ ಪ್ರತಿಭಟನೆ ನಡೆಸಿದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರ ಮೇಲೆ ಲಾಠಿಚಾರ್ಜ್ ಮಾಡಿಲ್ಲ ಅವರ ವಿರುದ್ಧ ಯಾವುದೇ ಕೇಸುಗಳನ್ನು ಹಾಕಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದರು.

ಪ್ರತಿಭಟನಾನಿರತ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿಸಲು ಯತ್ನಿಸಿದಾಗ ಅವರನ್ನು ಚದುರಿಸಲಾಗಿದೆಯೇ ವಿನಃ ಅವರ ಮೇಲೆ ಲಾಠಿಚಾರ್ಜ್ ಮಾಡಿಲ್ಲ. ಅಶ್ರುವಾಯು ಸಿಡಿಸಿಲ್ಲ ಒಂದು ವೇಳೆ ಇಂತಹ ಕ್ರಮ ಕೈಗೊಂಡಿದ್ದರೆ ಭಾರಿ ಅನಾಹುತ ಆಗುತ್ತಿತ್ತು. ರೈತರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಅವರು ಹೇಳಿದರು.

ಶಾಶ್ವತ ನೀರಾವರಿ ಸೌಲಭ್ಯಕ್ಕಾಗಿ ಒತ್ತಾಯಿಸಿ ನಿನ್ನೆ ಪ್ರತಿಭಟನೆ ನಡೆಸಿದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಪ್ರತಿಭಟನೆ ಸಂದರ್ಭದಲ್ಲಾದ ಘಟನೆಗಳ ಕುರಿತು ಪ್ರತಿಪಕ್ಷಗಳ ಸದಸ್ಯರು ಮಾಡಿದ ಪ್ರಸ್ತಾಪಕ್ಕೆ ಉತ್ತರ ನೀಡಿದ ಗೃಹ ಸಚಿವರು, ರೈತರ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಅತ್ಯಂತ ಸಂಯಮದಿಂದ ನಡೆದುಕೊಂಡಿದ್ದಾರೆ. ರೈತರ ಹೋರಾಟ ಹತ್ತಿಕ್ಕುವ ಯಾವುದೇ ಪ್ರಯತ್ನ ಮಾಡಿಲ್ಲ. ಪೊಲೀಸರ ಸೂಚನೆಗಳನ್ನು ಮೀರಿ ರೈತರು ವಿಧಾನಸೌಧ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ತೊಂದರೆಯಾಗಿದೆ. ಶಾಲಾ ಮಕ್ಕಳು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹೋಗುವ ಸಾರ್ವಜನಿಕರಿಗೆ ತೊಂದರೆಯಾದರೂ ಕೂಡ ಪೊಲೀಸರು ಅವರನ್ನು ಚದುರಿಸುವ ಪ್ರಯತ್ನ ಮಾಡಿದ್ದಾರೆಯೇ ವಿನಃ ಲಾಠಿಚಾರ್ಜ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಸರ್ಕಾರ ರೈತರ ಜತೆಗಿದೆ. ರೈತರ ಕಷ್ಟಕ್ಕೆ ಸ್ಪಂದಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಒದಗಿಸುವ ಪ್ರಯತ್ನ ಮಾಡಿದ್ದಾರೆ ಎಂದ ಅವರು, ರೈತರನ್ನು ಪೊಲೀಸರು ಚದುರಿಸುವ ಸಂದರ್ಭದಲ್ಲಿ ಸಣ್ಣಪುಟ್ಟ ತೊಂದರೆಗಳಾಗಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ನಾನೂ ಕೂಡ ಬಯಲು ಪ್ರದೇಶ ತುಮಕೂರಿನಿಂದ ಬಂದವನು. 1200 – 1300 ಅಡಿ ಆಳಕ್ಕೆ ಕೊಳವೆಬಾವಿ ಕೊರೆದರೂ ನೀರು ದೊರಕುತ್ತಿಲ್ಲ. ಕ್ಲೋರೈಡ್ ಅಂಶ ಹೆಚ್ಚಾಗಿರುವುದು ಕಂಡುಬಂದಿದೆ.

ರೈತರ ಬವನೆ ಏನೆಂಬುದು ನನಗೂ ಗೊತ್ತಿದೆ. ಆದರೆ, ರೈತರು ಹೋರಾಟ ಮಾಡುವ ರೀತಿ-ನೀತಿಗಳು ಪಾಲಿಸಬೇಕಾಗುತ್ತದೆ ಎಂದು ಡಾ. ಪರಮೇಶ್ವರ್ ಹೇಳಿದರು.

ಮುಖಂಡರ ಬಿಡುಗಡೆ

ನಿನ್ನೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದ ರೈತ ಮುಖಂಡರಾದ ಆಂಜನೇಯ ರೆಡ್ಡಿ ಮುಂತಾದವರನ್ನು ಬಿ‌ಡ‌‌ಗಡೆ ಮಾಡಲಾಗಿದೆ. ಅವರ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸಿಲ್ಲ. ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ಟ್ರಾಕ್ಟರ್ ಸೇರಿ ಇತರೆ ವಾಹನಗಳ ಮೇಲೆ ಹಾಕಿದ್ದ ಮೊಕದ್ದಮೆಗಳನ್ನು ಹಿಂಪ‌ಡೆಯಲಾಗುವುದು ಎಂದು ಅವರು ಹೇಳಿದರು.

ರೈತರ ಪರ ಸರ್ಕಾರ ನಮ್ಮದಾಗಿರುವುದರಿಂದ ನಿನ್ನೆ ಹೋರಾಟಕ್ಕೆ ನಾವು ಯಾವುದೇ ರೀತಿಯ ಅಡ್ಡಿ ಮಾಡಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರ ಹಕ್ಕುಗಳ ಪ್ರತಿಪಾದನೆಗೆ ಅವಕಾಶ ಮಾಡಿಕೊಡಲಾಗಿತ್ತು. ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಅನುಸರಿಸಿಯೇ ಅವರ ಹೋರಾಟಕ್ಕೆ ಒಂದು ಹಂತದವರೆಗೆ ಅವಕಾಶ ಮಾಡಿಕೊಡಲಾಗಿತ್ತು.

ರೈತರು ಒಂದು ಹಂತದಲ್ಲಿ ತಮ್ಮ ಸಂಯಮ ಕಳೆದುಕೊಂಡು ಪೊಲೀಸರ ಸೂಚನೆಗಳನ್ನು ಧಿಕ್ಕರಿಸಿ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಅವರು ಹೇಳಿದರು.

ಗಾಯಗೊಂಡವರಿಗೆಲ್ಲಾ ಸೂಕ್ತ ಚಿಕಿತ್ಸೆ ಕೊ‌ಡಿಸಿ ಕಳುಹಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು.

Write A Comment