ಕರ್ನಾಟಕ

ಆತ್ಮಹತ್ಯೆ ಮಾಡಿಕೊಂಡವರಲ್ಲಿ ನಿಜ ರೈತರು ಎಷ್ಟು? ಸದನದಲ್ಲಿ ಬಸವರಾಜ್ ಹೊರಟ್ಟಿಗೆ ಸಂಶಯ

Pinterest LinkedIn Tumblr

basavaಬೆಂಗಳೂರು, ಮಾ. ೪ – ರಾಜ್ಯದಲ್ಲಿ 1,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಎಷ್ಟು ಜನ ರೈತರು ನಿಜವಾಗಿಯೂ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ಪತ್ತೆಹಚ್ಚಿ ಸರ್ಕಾರದ ಹಣ ಲೂಟಿ ಮಾಡಲು ಅವಕಾಶ ಮಾ‌ಡಿಕೊಡಬೇಡಿ. ಇದಕ್ಕೆ ರೈತ ಸಂಘ ವಿರೋಧ ವ್ಯಕ್ತಪಡಿಸಿ ನನ್ನ ವಿರುದ್ಧ ಧಿಕ್ಕಾರ ಕೂಗಿದರೂ ಅದನ್ನು ನಾನು ಲೆಕ್ಕಿಸುವುದಿಲ್ಲ ಎಂದು ಜೆಡಿಎಸ್‌ ಪಕ್ಷದ ನಾಯಕ ಬಸವರಾಜ್ ಹೊರಟ್ಟಿ ವಿಧಾನ ಪರಿಷತ್‌ನಲ್ಲಿಂದು ಹೇಳಿದ್ದಾರೆ.

ನಿಜವಾದ ರೈತ ಸ್ವಾಭಿಮಾನದಿಂದ ಬದುಕುತ್ತಾನೆ, ಸಾಲ ಮಾಡಿದರೂ ಅದನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾನೆ, ಜೀನ್ಸ್ ಪ್ಯಾಂಟ್ ಹಾಕಿಕೊಂಡು ರೈತನೆಂದು ಹೇಳಿಕೊಳ್ಳುವವರಿಗೆ ಕುಂಟೆ, ಕೂರಿಗೆ ಎಂದರೇನು ಗೊತ್ತಿಲ್ಲ. ಕಬ್ಬು ಬೆಳೆಗಾರರಲ್ಲಿ ಶೇ. 90ರಷ್ಟು ಮಂದಿ ಬಡವರಲ್ಲ ಎಂದರು.

ಉಳ್ಳವರಿಗೆ ಬೇಡ ಸೌಲಭ್ಯ

ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭಿಸಿದ ಬಸವರಾಜ ಹೊರಟ್ಟಿ, ಶೇ. 40ರಷ್ಟು ರೈತರು ನೀರಾವರಿ ಅವಳಂಬಿಸಿದ್ದಾರೆ, ಇನ್ನುಳಿದ ಶೇ. 60ರಷ್ಟು ಮಂದಿ ಮಳೆಯನ್ನು ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ. ಇಂತಹವರಿಗೆ ಸೌಲಭ್ಯ ನೀಡಬೇಕೆ ಹೊರತು ಉಳ್ಳವರಿಗಲ್ಲ ಎಂದು ಹೇಳಿದರು.

ರೈತರ ಹೆಸರು ಹೇಳಿಕೊಂಡು ಸರ್ಕಾರದ ಹಣವನ್ನು ಲೂಟಿ ಮಾಡುವವರನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸಬಾರದು, ನಿಜವಾದ ರೈತರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಕೆಲಸ ಮಾಡಬೇಕಾಗಿದೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ನಿಜವಾದ ರೈತರು ಎಷ್ಟು, ಅದಕ್ಕೆ ಕಾರಣಗಳೇನು ಎನ್ನುವುದನ್ನು ಪತ್ತೆ ಹಚ್ಚುವ ಅಗತ್ಯವಿದೆ. ರೈತರ ಆತ್ಮಹತ್ಯೆಯಲ್ಲೂ ಅಲ್ಲೊಂದು ಇಲ್ಲೊಂದು ಎನ್ನುವಂತೆ ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ಇವೆ ಎಂದು ಹೇಳಿದರು.

ಮಾಲೀಕರು ಐಷಾರಾಮಿ

ರೈತರಿಗೆ ಬೆಂಬಲ ಬೆಲೆ ನೀಡಲಾಗಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಹೊಸ ಹೊಸ ಕಾರ್ಖಾನೆಗಳನ್ನು ತೆರೆಯುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿದ್ದರೆ, ಹೊಸ ಕಾರ್ಖಾನೆಗಳನ್ನು ಏಕೆ ತೆರೆಯಬೇಕು ಎಂದು ಪ್ರಶ್ನಿಸಿದ ಅವರು, ಕಾರ್ಖಾನೆಗಳ ಮಾಲೀಕರು ಐಷಾರಾಮಿ ಜೀವನ ನಡೆಸಬೇಕು ಆದರೆ ಬೆಳೆಗಾರರು ಕಷ್ಟ ಅನುಭವಿಸಬೇಕೆ ಎಂದು ಪ್ರಶ್ನಿಸಿದರು.

ಬಹುತೇಕ ರಾಜಕಾರಣಿಗಳು ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದಾರೆ. ಅವರು ಕಬ್ಬು ಬೆಳೆಗಾರರಿಗೆ ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ಮೊದಲು ಹೇಳಬೇಕು. ರಾಜಕಾರಣಿ, ಮಾಲೀಕರು ಮೊದಲು ಸರಿಯಾಗಿ ಆಮೇಲೆ ಮಂದಿಗೆ ಬುದ್ಧಿ ಹೇಳಬೇಕು ಎಂದು ಹೇಳಿದರು.

ನಿಜವಾದ ರೈತರು ಎಷ್ಟು

ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತನ ನೆರವಿಗೆ ಧಾವಿಸಬೇಕು ಎಂದು ಹೇಳಿದ ಅವರು, ಆತ್ಮಹತ್ಯೆ ಮಾಡಿಕೊಂಡವರಲ್ಲಿ ನಿಜವಾದ ರೈತರು ಎಷ್ಟು ಮಂದಿ ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕಾಗಿದೆ ಎಂದರು.

ಅನ್ನಭಾಗ್ಯ ಯೋಜನೆ ಒಳ್ಳೆಯದೆ ಆದರೆ, ಈ ಯೋಜನೆಯ ಅಕ್ಕಿ, ಗೋಧಿ, ರಾಗಿ, ಜೋಳ ಬಡವರಿಗೆ ತಲುಪುವ ಬದಲು ಗೋಡಾನುಗಳ ಪಾಲಾಗುತ್ತಿವೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಇದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.

ಎತ್ತಿನಹೊಳೆ ಯೋಜನೆಯ ಬಗ್ಗೆ ಗೊಂದಲಗಳಿದ್ದು, ಅದನ್ನು ಪರಿಹರಿಸುವ ಕೆಲಸ ಮಾಡಬೇಕಾಗಿದೆ. ಅಂತರ್ಜಲ ಬಳಕೆಗೆ ಸರ್ಕಾರ ನಿಯಂತ್ರಣ ಹೇರಬೇಕಾಗಿದೆ ಎಂದು ಹೇಳಿದರು.

Write A Comment