ಕರ್ನಾಟಕ

ರೈತರೇನು ಬಾಂಬ್ ಹಾಕಲು ಬಂದಿದ್ದರೇ..? ಎಚ್‌ಡಿಕೆ ಆಕ್ರೋಶ

Pinterest LinkedIn Tumblr

kuಬೆಂಗಳೂರು, ಮಾ.4-ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರಿಂದ ದೈಹಿಕ ಹಲ್ಲೆ ನಡೆದಿದೆ. ಅವರೇನು ಬಾಂಬ್ ಹಾಕಲು ಬಂದಿರಲಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರೈತರ ಮೇಲಿನ ಲಾಠಿ ಪ್ರಹಾರದ ಬಗ್ಗೆ ನಿಯಮ 69ರಡಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ಮೇಲಿನ ಲಾಠಿ ಪ್ರಹಾರಕ್ಕೆ ಯಾರು ಹೊಣೆ, ಸರ್ಕಾರದ ನಡವಳಿಕೆಯಿಂದಲೇ ಲಾಠಿ ಪ್ರಹಾರ ನಡೆಸುವಂತಹ ಸ್ಥಿತಿ ಉಂಟಾಯಿತು ಎಂದು ಟೀಕಿಸಿದರು. ನಿನ್ನೆ ನಡೆದ ಪ್ರತಿಭಟನೆ, ಲಾಠಿ ಪ್ರಹಾರದಿಂದಾಗಿ ಶಾಲಾ ಮಕ್ಕಳು ಗಂಟೆಗಟ್ಟಲೇ ರಸ್ತೆ ಮಧ್ಯೆ ನಿಲ್ಲುವಂತಾಯ್ತು. ರೈತರ ಮನವೊಲಿಸಿ ಭರವಸೆ ಮೂಡಿಸುವ ಕೆಲಸ ಸರ್ಕಾರದಿಂದ ಆಗಬೇಕೆಂದು ಒತ್ತಾಯಿಸಿದರು.

ಆಕ್ರೋಶದಿಂದ ರೈತರು ಜನಪ್ರತಿ ನಿಧಿಗಳನ್ನು ನಿಂದಿಸುತ್ತಿದ್ದಾರೆ. ಕಾಲಹರಣ ಮಾಡುವುದು ಬೇಡ, ಮೇಕೆದಾಟು, ಎತ್ತಿನಹೊಳೆ, ಆಲಮಟ್ಟಿ, ಲಿಂಗನಮಕ್ಕಿ ಸೇರಿದಂತೆ ಎಲ್ಲಿಂದಾದರೂ ನೀರು ತನ್ನಿ ರೈತರಿಗೆ ನೀರು ಕೊಡಿ ಎಂದರು. ಮೊಯ್ಲಿ ಸಚಿವರಾಗಿದ್ದಾಗಲೂ ಅನುಮತಿ ಸಿಕ್ಕಿಲ್ಲ: ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ವೀರಪ್ಪ ಮೊಯ್ಲಿ ಅವರು ಎತ್ತಿನ ಹೊಳೆ ಯೋಜನೆಗೆ ಇಲಾಖೆಯಿಂದ ಅನುಮತಿ ಕೊಡಿಸಬಹುದಿತ್ತು. ಆದರೆ ಈವರೆಗೂ ಅನುಮತಿ ಸಿಕ್ಕಿಲ್ಲ. ಇನ್ನೂ ಆ ಅರ್ಜಿ ಇಲಾಖೆ ಮುಂದೆ ಹಾಗೇಯೇ ಇದೆ ಎಂದು ಟೀಕಿಸಿದರು. ಒಂದೂವರೆ ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಮೊಯ್ಲಿ ಹೇಳಿದ್ದರು. ಆದರೆ ಇಂದಿಗೂ ಯೋಜನೆ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. 2015ರ ಮೇ 15ರಂದು ನಡೆದ ಸಭೆಯಲ್ಲಿ 3 ವರ್ಷದಲ್ಲಿ ನೀರು ಕೊಡುವ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದರು.

ಆದರೆ ನಾಲ್ಕೇ ದಿನಕ್ಕೆ ಮೈಸೂರಿನಲ್ಲಿ ಮಾತನಾಡುತ್ತಾ, ಇದಕ್ಕೆ ಕಾಲಮಿತಿ ಹಾಕಿಲ್ಲ ಎಂದು ಮಾತು ಬದಲಿಸಿದರು. ಇದರಿಂದ ಕೋಲಾರ, ಚಿಕ್ಕಬಳ್ಳಾಪುರ ಭಾಗದ ರೈತರಲ್ಲಿ ಶಾಶ್ವತ ನೀರು ಒದಗಿಸುವ ವಿಚಾರದಲ್ಲಿ ಅನುಮಾನ ವ್ಯಕ್ತವಾಗಿದೆ ಎಂದರು. ಭಾರತೀಯ ವಿಜ್ಞಾನ ಸಂಸ್ಥೆಯ ಪಿ.ವಿ.ರಾಮಚಂದ್ರ ಎಂಬುವರು ಸಿಎಂಗೆ ಪತ್ರ ಬರೆದು ಯೋಜನೆಗೆ ಸಂಬಂಧಿಸಿದ ಸಭೆಗೆ ಆಗಮಿಸಿ ಸಲಹೆ ನೀಡಲು ಹೇಳಿದ್ದಾರೆ. ಅವರನ್ನು ಸಭೆಗೆ ಕರೆದು ಮಾಹಿತಿ ಪಡೆಯಲು ಯಾವ ತೊಂದರೆಯಿದೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ರಾಮಚಂದ್ರ ಅವರ ಬಗ್ಗೆ ಸ್ಪಷ್ಟನೆ ಕೇಳಿದಾಗ ಮಧ್ಯಪ್ರವೇಶಿಸಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಭಾರತೀಯ ವಿಜ್ಞಾನ ಸಂಸ್ಥೆ ಎತ್ತಿನ ಹೊಳೆ ಯೋಜನೆಗೆ ವರದಿ ನೀಡಿದ್ದು , ರಾಮಚಂದ್ರ ಅವರ ವರದಿ ವೈಯಕ್ತಿಕವಾಗಿದ್ದು, ಅದಕ್ಕೂ ಸಂಸ್ಥೆ ನೀಡಿದ ವರದಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಮಾಹಿತಿ ನೀಡಿದರು.

ಜೆಡಿಎಸ್ ಶಾಸಕ ಕೋನರೆಡ್ಡಿ ಮಾತನಾಡಿ, ರೈತರ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕುವ ಕೆಲಸ ಮಾಡಬಾರದು. ಕಳಸಾಬಂಡೂರಿಗಾಗಿ ಹೋರಾಟ ನಡೆಸಿದ ರೈತರ ಮೇಲೆ 36 ಕೇಸ್ ಹಾಕಿದ್ದು, ಅದನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು. ಬಿಜೆಪಿ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಎರಡು ಸಾವಿರ ಕೋಟಿ ರೂ ಬಾಕಿ ಕೊಡಿಸಬೇಕು, ರೈತರ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು, ಬ್ರಿಟಿಷರ ಆಳ್ವಿಕೆಗಿಂತಲೂ ಕೆಟ್ಟದಾಗಿ ರೈತರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಇದಕ್ಕೆ ಸರ್ಕಾರ ರೈತರ ಕ್ಷಮೆ ಕೇಳಿ ಅವರ ಮೇಲೆ ಹಾಕಿರುವ ಕೇಸ್‌ಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

Write A Comment