ರಾಷ್ಟ್ರೀಯ

ದಿಲ್ಲಿಯಲ್ಲಿ ಸದ್ದು ಮಾಡಿದ ಹುಬ್ಲಾಟ್ ವಾಚ್

Pinterest LinkedIn Tumblr

vachನವದೆಹಲಿ, ಮಾ.4- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಿಡದ ಭೂತದಂತೆ ಕಾಡುತ್ತಿರುವ ದುಬಾರಿ ವಾಚ್ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ಇಡಿ)ದಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಬಿಜೆಪಿ ಸಂಸದರು ಇಂದು ಪ್ರತಿಭಟನೆ ನಡೆಸಿದರು.

ಸಂಸತ್ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ ಬಿಜೆಪಿ ಸಂಸದರು, ವಾಚ್ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಇಲ್ಲವೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಷಿ, ಸಚಿವರಾದ ಅನಂತ್‌ಕುಮಾರ್, ಡಿ.ವಿ.ಸದಾನಂದಗೌಡ, ಜಿ.ಎಂ. ಸಿದ್ದೇಶ್ವರ್, ಸಂಸದರಾದ ಪಿ.ಸಿ.ಮೋಹನ್, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್, ಅನಂತ್‌ಕುಮಾರ್ ಹೆಗ್ಡೆ, ಶಿವಕುಮಾರ್ ಉದಾಸಿ, ಶ್ರೀರಾಮುಲು, ಕರಡಿ ಸಂಗಣ್ಣ, ರಮೇಶ್ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ್ ಸೇರಿದಂತೆ ಮತ್ತಿತರರು ತನಿಖೆ ನಡೆಸುವಂತೆ ಆಗ್ರಹಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ,

ಇದು ಅತ್ಯಂತ ಗಂಭೀರವಾದ ಪ್ರಕರಣ. ಸುಮಾರು 70 ಲಕ್ಷ ರೂ. ಮೌಲ್ಯದ ವಾಚ್ ಎಲ್ಲಿಂದ ಬಂತು, ಅದನ್ನು ಯಾರು ಕೊಟ್ಟರು, ಯಾವ ಉದ್ದೇಶಕ್ಕಾಗಿ ಉಡುಗೊರೆ ನೀಡಿದ್ದರು ಎಂಬುದರ ಬಗ್ಗೆ ಅನೇಕ ಗೊಂದಲಗಳಿವೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸೂಕ್ತ ತನಿಖೆಯೇ ಸರಿಯಾದ ದಾರಿ ಎಂದರು. ಕೇವಲ ವಾಚ್‌ಅನ್ನು ಸರ್ಕಾರಕ್ಕೆ ಹಿಂದಿರುಗಿಸಿದ ಮಾತ್ರಕ್ಕೆ ಈ ಪ್ರಕರಣ ಇತ್ಯರ್ಥವಾಗುವುದಿಲ್ಲ. ಮುಖ್ಯಮಂತ್ರಿಗೆ 70 ಲಕ್ಷದ ವಾಚ್‌ಅನ್ನು ಉಡುಗೊರೆಯಾಗಿ ಸುಖಾಸುಮ್ಮನೆ ಯಾರೊಬ್ಬರೂ ನೀಡುವುದಿಲ್ಲ. ಈ ವಾಚ್ ಖರೀದಿ ಮಾಡಿದ್ದರೆ ಅದಕ್ಕೆ ದಾಖಲೆಗಳಿವೆಯೇ, ಸೀಮಾಸುಂಕ ಕಟ್ಟಲಾಗಿದೆಯೇ ಎಂಬ ಮಾಹಿತಿ ಈವರೆಗೂ ಇಲ್ಲ. ಇದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.

ಸಿದ್ದರಾಮಯ್ಯನವರು ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರಕ್ಕೆ ಹಿಂದಿರುಗಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ತಮ್ಮ ಸ್ನೇಹಿತ ಡಾ.ಗಿರೀಶ್‌ಚಂದ್ರ ವರ್ಮ ಉಡುಗೊರೆಯಾಗಿ ನೀಡಿದ್ದರು ಎಂಬುದು ಆಧಾರ ರಹಿತವಾಗಿದೆ. ಈ ವಾಚ್ ಡಾ.ಸುಧಾಕರ್‌ಶೆಟ್ಟಿಗೆ ಸೇರಿದ್ದು ಎಂಬ ಗುಮಾನಿಯಿದೆ. ಕದ್ದ ವಾಚ್‌ಅನ್ನು ಮುಖ್ಯಮಂತ್ರಿಗೆ ಉಡುಗೊರೆಯಾಗಿ ನೀಡಲಾಗಿದೆ. ತನಿಖೆಯಿಂದ ಮಾತ್ರ ಸತ್ಯ ಹೊರಬರುತ್ತದೆ ಎಂದು ಹೇಳಿದರು. ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಯಾವುದೇ ಮುಖ್ಯಮಂತ್ರಿ ತಮ್ಮ ಸ್ನೇಹಿತರಿಂದ ಇಷ್ಟು ದೊಡ್ಡ ಮೊತ್ತದ ಉಡುಗೊರೆಯನ್ನು ಪಡೆದಿರಲಿಲ್ಲ. ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯನವರು ಈಗ ಮಜಾವಾದಿಯಾಗಿದ್ದಾರೆ ಎಂದು ಟೀಕಿಸಿದರು.

ಸರ್ಕಾರಕ್ಕೆ ಹಿಂದಿರುಗಿಸಿದ್ದೇನೆ ಎಂದು ಹೇಳುವ ಸಿದ್ದರಾಮಯ್ಯನವರು ಪ್ರಕರಣ ಹೊರಬರದಿದ್ದರೆ ಇದನ್ನು ಸರ್ಕಾರದ ಆಸ್ತಿ ಎಂದು ಘೋಷಣೆ ಮಾಡುತ್ತಿರಲಿಲ್ಲ. ಸುಧಾಕರ್‌ಶೆಟ್ಟಿ ಮೇಲೆ ಒತ್ತಡ ಹಾಕಿ ಬಹಿರಂಗಪಡಿಸದಂತೆ ಕೆಲ ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ಈಗಾಗಲೇ ವಾಚ್ ಕಳುವಾಗಿರುವ ಬಗ್ಗೆ ಸುಧಾಕರ್‌ಶೆಟ್ಟಿಯೇ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಮುಖ್ಯಮಂತ್ರಿಯ ಆಪ್ತರೊಬ್ಬರು ಈ ವಾಚ್‌ಅನ್ನು ಕದ್ದು ಉಡುಗೊರೆಯನ್ನಾಗಿ ನೀಡಿದ್ದಾರೆ. ಈಗ ಪ್ರಕರಣ ಮುಚ್ಚಿಹಾಕಲು ಸಿದ್ದರಾಮಯ್ಯ ಕಟ್ಟುಕಥೆ ಕಟ್ಟುತ್ತಿದ್ದಾರೆ ಎಂದು ಆಪಾದಿಸಿದರು. ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶ ಹೊರಬರುತ್ತದೆ. ಪ್ರಕರಣವನ್ನು ಮರೆಮಾಚಲು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಕಟ್ಟುಕಥೆ ಕಟ್ಟುತ್ತಿದ್ದಾರೆ. ರಾಜ್ಯದ ಜನತೆ ಇದನ್ನು ನಂಬುವುದಿಲ್ಲ. ಈಗಲಾದರೂ ಸರ್ಕಾರ ತನಿಖೆಗೆ ಆದೇಶ ನೀಡಬೇಕೆಂದು ಆಗ್ರಹಿಸಿದರು.

Write A Comment