ಕರ್ನಾಟಕ

ರೈತರ ಪ್ರತಿಭಟನೆ : ಸರಕಾರ ಎಚ್ಚೆತ್ತುಕೊಳ್ಳಲು ಸಕಾಲ

Pinterest LinkedIn Tumblr

Farmers-06ರಾಜಸ್ಥಾನದಂತಹ ಒಣ ರಾಜ್ಯದಲ್ಲಿ ಇರುವುದಕ್ಕಿಂತ ಹೆಚ್ಚು ನೀರಿನ ಸಮಸ್ಯೆ ನಮ್ಮ ರಾಜ್ಯದಲ್ಲಿದೆ ಅಂದರೆ ಅದಕ್ಕೆ ಮಳೆ ಅಥವಾ ನಿಸರ್ಗವನ್ನು ದೂರಬೇಕೋ ಅಥವಾ ನೀರಿನ ನಿರ್ವಹಣೆಯಲ್ಲಿ ಎಡವಿರುವ ನಮ್ಮ ವ್ಯವಸ್ಥೆಯನ್ನು ದೂರಬೇಕೋ?

ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಶಾಶ್ವತ ನೀರು ಪೂರೈಕೆ ಯೋಜನೆಗಾಗಿ ನಿನ್ನೆ ಬೆಂಗಳೂರಿಗೆ ಬಂದು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. 150 ದಿನದಿಂದ ಚಿಕ್ಕಬಳ್ಳಾಪುರದಲ್ಲಿ ರೈತರು ಇದೇ ಉದ್ದೇಶಕ್ಕೆ ಧರಣಿ ನಡೆಸುತ್ತಿದ್ದಾರೆ. ಅತ್ತ ಉತ್ತರ ಕರ್ನಾಟಕದ ನರಗುಂದದಲ್ಲಿ ನೀರಿಗಾಗಿ ರೈತರು ಸುಮಾರು 250 ದಿನದಿಂದ ಧರಣಿ ನಡೆಸುತ್ತಿದ್ದಾರೆ. ಅವುಗಳಿಗೆ ಸರ್ಕಾರ ಸ್ಪಂದಿಸದೇ ಇದ್ದರೆ ರೈತರು ರಾಜಧಾನಿಗೆ ನುಗ್ಗಿ ತಮ್ಮ ಆಕ್ರೋಶ ವ್ಯಕ್ತಪಡಿಸುವುದನ್ನು ತಡೆಯುವುದು ಕಷ್ಟ.

ರಾಜ್ಯದಲ್ಲಿ ಎರಡು ವರ್ಷದಿಂದ ಕೆಲ ಭಾಗಗಳಲ್ಲಿ ಬರಗಾಲ ಇರುವುದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂಬುದು ನಿಜವೇ. ಆದರೆ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ಸುತ್ತಮುತ್ತಲಿನ ಬಯಲುಸೀಮೆಯ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಬರಗಾಲದಿಂದಾಗಿ ಈ ವರ್ಷ ಅದು ಉಲ್ಬಣಗೊಂಡಿದೆ ಅಷ್ಟೆ. ಈ ವರ್ಷ ಚೆನ್ನಾಗಿ ಮಳೆ ಸುರಿದರೆ ಇದು ಕೊಂಚ ಕಡಿಮೆಯಾದೀತು, ಆದರೆ ಮತ್ತೆ ಕಾಲ ಬಂದಾಗ ಭುಗಿಲೇಳುವುದು ನಿಶ್ಚಿತ.

ಸಮಸ್ಯೆ ಇರುವುದು ಎಲ್ಲಿ ಅಂದರೆ, ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಪಕ್ಕದ ಬಯಲುಸೀಮೆಯ ಜಿಲ್ಲೆಗಳಿಗೆ ಕೇವಲ ದೊಡ್ಡ ದೊಡ್ಡ ನೀರಾವರಿ ಯೋಜನೆಗಳ ರುಚಿ ತೋರಿಸುತ್ತ, ಅವುಗಳಿಗಿರುವ ಕಾನೂನಾತ್ಮಕ ಅಡ್ಡಿಗಳ ನೆಪ ಹೇಳುತ್ತ ಸರ್ಕಾರ ದಿನ ದೂಡುತ್ತಿರುವುದರಲ್ಲಿ. ಉತ್ತರ ಕರ್ನಾಟಕಕ್ಕೆ ಮಹದಾಯಿ ಯೋಜನೆಯ ಜಪ, ಬಯಲುಸೀಮೆಗೆ ಎತ್ತಿನಹೊಳೆಯ ಜಪ. ಇವೆರಡೂ ಯೋಜನೆಗಳಿಗೆ ನೂರಾರು ವಿಘ್ನಗಳು. ಎತ್ತಿನಹೊಳೆ ಯೋಜನೆಯಿಂದ ಬಯಲುಸೀಮೆಗೆ ಬೇಕಾದಷ್ಟು ನೀರು ಸಿಗುವ ಬಗ್ಗೆಯೇ ಖಾತ್ರಿಯಿಲ್ಲ, ಆದರೂ ಸರ್ಕಾರ ಅದನ್ನೇ ನೆಚ್ಚಿಕೊಂಡಿದೆ. ಮಹದಾಯಿಯದೂ ಹೆಚ್ಚುಕಮ್ಮಿ ಇದೇ ಕತೆ.

ದೊಡ್ಡ ನೀರಾವರಿ ಯೋಜನೆಗಳು ಜಾರಿಗೆ ಬಂದರೆ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬ ಲೆಕ್ಕಾಚಾರದಲ್ಲಿ ತಪ್ಪೇನೂ ಇಲ್ಲ. ಆದರೆ, ಅವು ಕೈಗೂಡುವುದೇ ಅನುಮಾನವಿರುವಾಗ ಸರ್ಕಾರ ಇತರ ಮಾರ್ಗಗಳನ್ನು ಏಕೆ ಪ್ರಯತ್ನಿಸಬಾರದು? ಕೋಲಾರ, ಚಿಕ್ಕಬಳ್ಳಾಪುರದ ಜನರು ತಮಗೆ ಬೆಂಗಳೂರಿನಿಂದ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿರುವ ಬೆಂಗಳೂರಿನ ಚರಂಡಿ ನೀರನ್ನಾದರೂ ಶುದ್ಧೀಕರಿಸಿ ಕೊಡಿ ಎಂದು ಬಹಳ ವರ್ಷಗಳಿಂದ ಕೇಳುತ್ತಿದ್ದಾರೆ. ಅದನ್ನು ಸರ್ಕಾರ ಏಕೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ? ಇದರ ಜೊತೆಗೆ ಸರ್ಕಾರ ಮಾಡದೇ ಇರುವ ಇನ್ನೆರಡು ಕೆಲಸಗಳೆಂದರೆ ಮಳೆ ನೀರಿನ ಕೊಯ್ಲು ಮತ್ತು ಕೆರೆಗಳ ಮರುಪೂರಣ. ಇವೆರಡೂ ಯೋಜನೆಗಳಿಗೆ ಸಾಕಷ್ಟು ವರ್ಷಗಳಿಂದ ಬಜೆಟ್‌ನಲ್ಲಿ ಅನುದಾನ ನಿಗದಿಯಾಗುತ್ತ ಬಂದಿದೆ. ಆದರೆ, ವಾಸ್ತವದಲ್ಲಿ ಏನೂ ಕೆಲಸವಾಗಿಲ್ಲ. ಮಳೆನೀರಿನ ಕೊಯ್ಲು, ಕೆರೆಗಳ ಹೂಳೆತ್ತುವಿಕೆ ಹಾಗೂ ಮರುಪೂರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ರಾಜ್ಯಾದ್ಯಾಂತ ಸಮರೋಪಾದಿಯಲ್ಲಿ ಜಾರಿಗೆ ತಂದರೆ ಬಹುಪಾಲು ನೀರಿನ ಸಮಸ್ಯೆ ಬಗೆಹರಿಯುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ, ಇಷ್ಟು ವರ್ಷಗಳ ಕಾಲ ಮಾಡಿದಂತೆ ಈ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆಂದು ಬಾಯಿಮಾತಿನಲ್ಲಿ ಹೇಳುತ್ತ ಕುಳಿತರೆ ಮಾತ್ರ ಏನೂ ಪ್ರಯೋಜನವಿಲ್ಲ.

ಮರುಭೂಮಿಯ ನಾಡು ಎಂದು ಕರೆಸಿಕೊಳ್ಳುವ ರಾಜಸ್ಥಾನದಂತಹ ಒಣ ರಾಜ್ಯದಲ್ಲಿ ಇರುವುದಕ್ಕಿಂತ ಹೆಚ್ಚು ನೀರಿನ ಸಮಸ್ಯೆ ನಮ್ಮ ರಾಜ್ಯದಲ್ಲಿದೆ ಅಂದರೆ ಅದಕ್ಕೆ ಮಳೆ ಅಥವಾ ನಿಸರ್ಗವನ್ನು ದೂರಬೇಕೋ ಅಥವಾ ನೀರಿನ ನಿರ್ವಹಣೆಯಲ್ಲಿ ಎಡವಿರುವ ನಮ್ಮ ಆಡಳಿತವನ್ನು ದೂರಬೇಕೋ? ನೀರಿನ ಬಳಕೆಯಲ್ಲಿ ರಾಜಸ್ಥಾನ ನಮಗೆ ಮಾದರಿಯಾಗಬೇಕಿದೆ.

ರೈತರು ಹಾಗೂ ಜನಸಾಮಾನ್ಯರು ನೀರಿಗಾಗಿ ನಡೆಸುವ ಪ್ರತಿಭಟನೆಗಳನ್ನು ಸರ್ಕಾರ ತನ್ನ ಆಡಳಿತದ ಬಲವನ್ನು ಬಳಸಿ ತಾತ್ಕಾಲಿಕವಾಗಿ ನಿಯಂತ್ರಿಸಬಹುದು. ಆದರೆ, ನೀರಿಲ್ಲದೆ ಬವಣೆ ಪಡುವವರು ನಮ್ಮದೇ ರಾಜ್ಯದ ಜನರು ಎಂಬುದು ವಾಚ್‌ನಂತಹ ವಿಚಾರಕ್ಕೆ ವಿಧಾನಮಂಡಲದ ಕಲಾಪಗಳನ್ನು ಬಲಿ ತೆಗೆದುಕೊಳ್ಳುವ ಜನಪ್ರತಿನಿಧಿಗಳಿಗೆ ಅರಿವಾಗಬೇಕು. ಈ ಬಾರಿಯ ಬಜೆಟ್‌ನಲ್ಲಾದರೂ ಬರೀ ದೊಡ್ಡ ದೊಡ್ಡ ನೀರಾವರಿ ಯೋಜನೆಗಳ ಜಪ ಮಾಡದೆ, ಸ್ಥಳೀಯವಾಗಿ ಅಲ್ಲಲ್ಲಿನ ನೀರಿನ ಸಮಸ್ಯೆಗಳನ್ನು ಬಗೆಹರಿಸುವ ಮಳೆಕೊಯ್ಲು, ಕೆರೆ ಮರುಪೂರಣ ಹಾಗೂ ಇತರ ಮಾರ್ಗಗಳತ್ತ ಸರ್ಕಾರ ಗಂಭೀರವಾಗಿ ಗಮನ ಹರಿಸುವುದು ಒಳ್ಳೆಯದು.
-ಉದಯವಾಣಿ

Write A Comment