ಕರ್ನಾಟಕ

‘ಟೈಸನ್’ ಬಿಡುಗಡೆಗೆ ಎದುರು ನೋಡುತ್ತಿರುವ ವಿನೋದ್ ಪ್ರಭಾಕರ್

Pinterest LinkedIn Tumblr

Vinod Prabhakar in Tyson _2_

ಬೆಂಗಳೂರು: ಈಗಾಗಲೇ 14 ಸಿನೆಮಾಗಳಲ್ಲಿ ನಟಿಸಿ ಏರಿಳಿತಗಳನ್ನು ಕಂಡಿರುವ ನಟ ವಿನೋದ್ ಪ್ರಭಾಕರ್ ತಮ್ಮ ಮುಂದಿನ ಚಿತ್ರ ‘ಟೈಸನ್’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಖ್ಯಾತ ನಟ ಪ್ರಭಾಕರ್ ಅವರ ಮಗನಾಗಿರುವುದರಿಂದ ತಮ್ಮ ಮೇಲೆ ನಿರೀಕ್ಷೆಯ ಭಾರ ಎಂದಿಗೂ ಹೆಚ್ಚಾಗಿರುತ್ತದೆ ಎನ್ನುವ ವಿನೋದ್ “ಪ್ರೇಕ್ಷಕರು ನನ್ನಲ್ಲಿ ನನ್ನ ತಂದೆಯನ್ನು ಕಾಣಲು ಯಾವಾಗಲೂ ಹವಣಿಸುವುದರಿಂದ ನನ್ನ ಮೇಲೆ ಒತ್ತಡ ಎಂದಿಗೂ ಹೆಚ್ಚಿರುತ್ತದೆ. ಅವರ ೫೦೦ ಸಿನೆಮಾಗಳ ಯಶಸ್ಸನ್ನು ನಾನು ಒಂದು ಸಿನೆಮಾದಲ್ಲಿ ಗಳಿಸಬೇಕೆಂಬ ನಿರೀಕ್ಷೆ ನನ್ನ ಮೇಲಿರುತ್ತದೆ. ಅದು ಸಾಧ್ಯವಿಲ್ಲ. ನನ್ನಲ್ಲಿ ಅವರ ಗುಣಗಳಿರಬಹುದು, ಆದರೆ ಅವರ ರೀತಿಯಲ್ಲಿ ನಟನೆ ಮಾಡಲು ಕಷ್ಟ” ಎನ್ನುತ್ತಾರೆ.

ಆದರೆ ‘ಟೈಸನ್’ ಸಿನೆಮಾದ ಬಗ್ಗೆ ಬಹಳ ಭರವಸೆ ಇಟ್ಟುಕೊಂಡಿರುವ ನಟ ಅವರನ್ನು ಮುಂದಿನ ಹಂತಕ್ಕ ಕೊಂಡೊಯ್ಯಲಿದೆ ಎನ್ನುತ್ತಾರೆ. “‘ಟೈಸನ್’ ನನ್ನನ್ನು ಬಹಳಷ್ಟು ಬದಲಾಯಿಸಿತು. ನಾನು ವಿಭಿನ್ನವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸಿದೆ, ಅದಕ್ಕಾಗಿ ದುಡಿದು ೮-೧೦ ಕೆಜಿ ತೂಕ ಕಳೆದುಕೊಂಡೆ. ನನ್ನ ಕೇಶ ವಿನ್ಯಾಸವನ್ನು ಬದಲಿಸಿಕೊಂಡೆ. ನನ್ನ ವೃತ್ತಿಜೀವನವನ್ನು ಗಮನಿಸಿದ್ದ ನಿರ್ದೇಶಕ ಕೆ ರಾಮನಾರಾಯಣ್ ನನ್ನ ಒರಟು ಶೈಲಿಯನ್ನು ಬಿಡಲು ಸಲಹೆ ನೀಡಿದ್ದರು” ಎಂದು ವಿವರಿಸುತ್ತಾರೆ ವಿನೋದ್.

ಗಾಯತ್ರಿ ಅಯ್ಯರ್ ನಾಯಕ ನಟಿಯಾಗಿದ್ದು, ಮೂರು ಜನ ಸಿನೆಮಾಗೆ ಸಂಗೀತ ನೀಡಿದ್ದಾರಂತೆ. ರವಿ ಬಸ್ರೂರ್ ಹಿನ್ನಲೆ ಸಂಗೀತ ನೀಡಿದ್ದು, ಗಣೇಶ್ ನಾರಾಯಣ್ ಎರಡು ಹಾಡುಗಳಿಗೆ ಸಂಗೀತ ನೀಡಿದ್ದರೆ, ಜೆಸ್ಸಿ ಗಿಫ್ಟ್ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರಂತೆ. ಮೂರು ಜನ ಸ್ಟಂಟ್ ಮಾಸ್ಟರ್ ಗಳು ಪಳನಿ ರಾಜ್, ಮಾಸ್ ಮಾದ ಮತ್ತು ಥ್ರಿಲ್ಲರ್ ಮಂಜು ಫೈಟ್ಗಳನ್ನು ನಿರ್ದೇಶಿಸಿದ್ದಾರಂತೆ.

ಕಂಪ್ಯೂಟರ್ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಪ್ರಭಾಕರ್, ವಿನೋದ್ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಮಾಡಲಾಗಿದೆ. “ನಾನು ಸಿನೆಮಾ ನೋಡಿದಾಗ ನನ್ನ ಕಣ್ಣಲ್ಲಿ ನೀರು ಜಿನುಗಿತು. ನನ್ನ ತಂದೆ ಬದುಕಿದ್ದರೆ ನಾನಿಷ್ಟು ಕಷ್ಟ ಪಡಬೇಕಿರಲಿಲ್ಲ. ನನ್ನ ಆರಂಭವೇ ತ್ರಾಸವಾಗಿತ್ತು ಆದರೆ ನನ್ನ ತಾಳ್ಮೆ ನನ್ನನ್ನು ರಕ್ಷಿಸಿದೆ” ಎನ್ನುತ್ತಾರೆ ವಿನೋದ್.

Write A Comment