ಕರ್ನಾಟಕ

ಮಗನ ಆಸೆ ಪೂರೈಸಲು ‘ಸೋಜಿಗ’

Pinterest LinkedIn Tumblr

vikranth

ಬಣ್ಣದ ಲೋಕದಲ್ಲಿ ಮಿನುಗಬೇಕು ಎಂಬ ಮಕ್ಕಳ ಆಸೆಯನ್ನು ಪೂರೈಸಲು ಪಾಲಕರು ಸಿನಿಮಾ ನಿರ್ಮಾಪಕರಾಗುವ ಟ್ರೆಂಡ್‌ ಕನ್ನಡ ಚಿತ್ರೋದ್ಯಮದಲ್ಲಿ ಹೆಚ್ಚುತ್ತಿದೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನಾರಾಯಣ ಹೆಗಡೆ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಮಗ ವಿಕ್ರಾಂತ್ ಹೆಗಡೆ ನಾಯಕನಾಗಿ ನಟಿಸಲಿರುವ ‘ಸೋಜಿಗ’ ಚಿತ್ರದ ನಿರ್ಮಾಪಕ ಅವರೇ. ಸಿನಿಮಾದ ಬಹುತೇಕ ಭಾಗ ಚಿತ್ರೀಕರಿಸಿರುವ ‘ಸೋಜಿಗ’ ಚಿತ್ರತಂಡ, ಈಗ ಕ್ಲೈಮ್ಯಾಕ್ಸ್‌ ಶೂಟಿಂಗ್‌ಗೆ ಸಿದ್ಧತೆ ನಡೆಸುತ್ತಿದೆ. ಅದಕ್ಕೂ ಮುನ್ನ ಸಿನಿಮಾದ ವಿವರ ನೀಡಲು ಚಿತ್ರತಂಡವು ಸುದ್ದಿಮಿತ್ರರನ್ನು ಆಹ್ವಾನಿಸಿತ್ತು.

ದಿನೇಶ್ ಕಂಪ್ಲಿ ಚಿತ್ರದ ಚುಕ್ಕಾಣಿ ಹಿಡಿದಿದ್ದಾರೆ. ಕಥೆ, ಚಿತ್ರಕಥೆ ಅವರದೇ. ವಿಭಿನ್ನ ಬಗೆಯ ಶೀರ್ಷಿಕೆ ಆಯ್ದುಕೊಂಡಿದ್ದನ್ನು ಅವರು ಸಮರ್ಥಿಸಿಕೊಳ್ಳುವುದು ಹೀಗೆ: ‘ಪ್ರತಿಯೊಬ್ಬರ ಬದುಕಿನಲ್ಲೂ ಸೋಜಿಗ ಕಾಣುತ್ತಲೇ ಇರುತ್ತದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಅದರ ಛಾಯೆ ಬದಲಾಗುತ್ತದೆ ಅಷ್ಟೇ. ನಮ್ಮ ಚಿತ್ರದಲ್ಲಿ ನಾಲ್ಕು ಸೋಜಿಗಗಳು ಯುವಜೋಡಿಯ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಅವು ಏನು ಎಂಬುದನ್ನು ಈಗಲೇ ಬಹಿರಂಗ ಮಾಡಲಾರೆ!’

ಸಿನಿಮಾ ವಹಿವಾಟಿನ ಬಗ್ಗೆ ತಮಗೆ ಹೆಚ್ಚೇನೂ ಗೊತ್ತಿಲ್ಲ ಎಂದ ನಿರ್ಮಾಪಕ ನಾರಾಯಣ, ಮಗನ ಆಸೆ ಪೂರೈಸಲು ನಿರ್ಮಾಪಕರ ಪಾತ್ರ ವಹಿಸಿದ್ದಾಗಿ ಹೇಳಿಕೊಂಡರು.

ಹೀರೊ ಆಗಬೇಕು ಎಂಬ ಕನಸನ್ನು ಬಾಲ್ಯದಿಂದಲೇ ಕಾಣುತ್ತಿದ್ದ ವಿಕ್ರಾಂತ್, ಈಗ ಅದು ನನಸಾಗುವ ಸಂತಸದಲ್ಲಿ ಮುಳುಗಿದ್ದಾರೆ. ‘ನಾನು ಜಾಕಿ ಚಾನ್ ಅಭಿಮಾನಿ. ಆ್ಯಕ್ಷನ್ ಅಂದರೆ ಬಲು ಇಷ್ಟ. ಸಮರಕಲೆ ತರಬೇತುದಾರನ ಪಾತ್ರ ನನ್ನದು. ಅದಕ್ಕಾಗಿಯೇ ಕಿಕ್‌ಬಾಕ್ಸಿಂಗ್, ಬೈಕ್ ಸ್ಟಂಟ್ ಕಲಿತಿದ್ದೇನೆ’ ಎಂದು ವಿವರಣೆ ಕೊಟ್ಟರು.

ಮೈಸೂರು ಮೂಲದ ಅಖಿಲಾ ಪ್ರಕಾಶ್, ‘ಸೋಜಿಗ’ದ ನಾಯಕಿ. ‘ಇದು ಆ್ಯಕ್ಷನ್–ಸಸ್ಪೆನ್ಸ್ ಸಿನಿಮಾ ಆಗಿದ್ದರೂ ಭಾವನೆಗಳಿಗೆ ಸಾಕಷ್ಟು ಅವಕಾಶವಿದೆ’ ಎಂದರು. ಟಿ.ವಿ. ಕಲಾವಿದೆ ಹರಿಣಿ ನಾಯಕನ ತಾಯಿ ಪಾತ್ರ ನಿರ್ವಹಿಸಿದ್ದಾರೆ. ಸುನಾಥ್ ಗೌತಮ್ ಕ್ಯಾಮೆರಾ ಹಿಡಿದಿದ್ದರೆ, ಶ್ರೀನಿಧಿ ಸಂಭಾಷಣೆ ಬರೆದಿದ್ದಾರೆ.ಮೇ ಅಂತ್ಯದ ಹೊತ್ತಿಗೆ ತೆರೆ ಕಾಣಿಸುವುದು ನಿರ್ದೇಶಕರ ಉದ್ದೇಶ.

Write A Comment