ಕರ್ನಾಟಕ

ಬಜೆಟ್ ತಯಾರಿಗೂ ಮುನ್ನ ರೈತರೊಂದಿಗೆ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ

Pinterest LinkedIn Tumblr

sidduಬೆಂಗಳೂರು, ಫೆ.27-ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಜೆಟ್ ತಯಾರಿಗೂ ಮುನ್ನ ರೈತನ ಸಮಸ್ಯೆಗಳ ಕುರಿತಂತೆ ರೈತ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ಇಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ಚರ್ಚೆಯಲ್ಲಿ ರಾಜ್ಯದ ವಿವಿಧ ರೈತ ಸಂಘಟನೆಗಳು ಪಾಲ್ಗೊಂಡು ಸಮಸ್ಯೆಗಳ ಸರಮಾಲೆಯನ್ನು ಮುಂದಿಟ್ಟವು. ಕೇವಲ ಭರವಸೆಗಳು, ಭಾಷಣಗಳಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ. ಅನ್ನ ನೀಡುವ ರೈತರ ಬದುಕನ್ನು ಹಸನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಿ. ರೈತರಿಗೆ ಆಗುತ್ತಿರುವ ಅನ್ಯಾಯ ಗುರುತಿಸಿದರೆ ತನ್ನಿಂದ ತಾನೇ ಸಮಸ್ಯೆ ಬಗೆಹರಿಯುತ್ತವೆ ಎಂಬ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ರೈತರ ಆತ್ಮಹತ್ಯೆ ಬಗ್ಗೆ ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ಐಎಸ್‌ಇಸಿ ಮೂಲಭೂತ ಸಂಶೋಧನೆ ನಡೆಸಬೇಕು. ಆ ಮೂಲಕ ಕಾರಣ ತಿಳಿದು ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಭೂಮಿ ಸಂರಕ್ಷಣೆ ಕಾನೂನನ್ನು ರದ್ದುಪಡಿಸಬೇಕು. ಈ ಕಾನೂನಿನಂತೆ ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ತಿಳಿಸಲಾಯಿತು. ರಾಜ್ಯದ 64 ತಾಲೂಕುಗಳನ್ನು ಸರ್ಕಾರ ಬರಗಾಲ ಪ್ರದೇಶವೆಂದು ಗುರುತಿಸಿದ್ದರೂ, ಈ ಪ್ರದೇಶಗಳಿಗೆ ಪರಿಹಾರದ ಹಣ ದೊರೆತಿಲ್ಲ. ಇಂದಿಗೂ ಸಹ ಬ್ರಿಟಿಷರ ಕಾಲದ ಬೆಳೆ ನಷ್ಟ ಪರಿಹಾರ ನೀಡಿ ಅವೈಜ್ಞಾನಿಕ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ರಾಷ್ಟ್ರೀಯ ಕೃಷಿ ಯೋಜನೆಯನ್ನು ರೈತರ ಜಮೀನಿಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಬರಗಾಲದಿಂದ ತತ್ತರಿಸುವ ರೈತರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯ ಮತ್ತು ದನಕರುಗಳಿಗೆ ಉಚಿತ ಮೇವು ಒದಗಿಸಿ ವ್ಯವಸಾಯಕ್ಕೆ ಅಗತ್ಯವಿರುವ ಹಣವನ್ನು ಬಡ್ಡಿ ರಹಿತವಾಗಿ ಸಹಕಾರ ಸಂಘಗಳ ಮೂಲಕ ಒದಗಿಸಿ ಲೇವಾದೇವಿಗಾರರಿಂದ ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿ. ಸೊಸೈಟಿಗಳಲ್ಲಿ ಹೆಚ್ಚು ಕಿರುಕುಳವಾಗದಂತೆ ರೈತರಿಗೆ ಪಾಸ್ ಬುಕ್ ಹಂಚಿಕೆ ಮಾಡಿ ಆ ಮೂಲಕ ಸಾಲ ನೀಡುವ ವ್ಯವಸ್ಥೆ ಜಾರಿಯಾಗಬೇಕು. ರೈತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದ ಹಣಕ್ಕೆ ಎಪಿಎಂಸಿಯಿಂದಲೇ ಚೆಕ್ ಮೂಲಕ ಹಣ ನೀಡುವ ವ್ಯವಸ್ಥೆ ಜಾರಿಯಾಗಬೇಕು. ರೈತರಿಗೆ ಪ್ರತ್ಯೇಕ ಬಜೆಟ್ ವ್ಯವಸ್ಥೆಯಾಗಬೇಕು.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಒಂದು ಲಕ್ಷ ರೂ. ಪರಿಹಾರ ಕೊಡುವ ಮಾರ್ಗಸೂಚಿ ಬದಲಾವಣೆ ಮಾಡಿ ರೈತನ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡರೂ ಪರಿಹಾರ ನೀಡಬೇಕು. ಅಧಿಕಾರಿಗಳು ಬಹಳಷ್ಟು ಅರ್ಹ ಪ್ರಕರಣಗಳನ್ನು ತಿರಸ್ಕರಿಸುತ್ತಿರುವುದರಿಂದ ಅನ್ಯಾಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಅರಣ್ಯ ಭೂಮಿ ಮತ್ತು ಸರ್ಕಾರಿ ಕಂದಾಯ ಭೂಮಿ ಒತ್ತುವರಿ ಮಾಡಿರುವ ರೈತರನ್ನು ಒಕ್ಕಲೆಬ್ಬಿಸದೆ ಒಂದು ಕುಟುಂಬಕ್ಕೆ 10 ಎಕರೆ ಭೂ ಮಂಜೂರಾತಿ ಮಾಡಿಕೊಡಬೇಕು ಎಂದು ಹೇಳಿದ ಅವರು, ತುಂಗಭದ್ರಾ ಎಡದಂಡೆ ನಾಲೆಯ ಎಡಭಾಗದ 3 ಲಕ್ಷ ರೈತರ ಜಮೀನಿಗೆ ನೀರು ಹರಿಸಲು ತುಂಗಭದ್ರಾ ಹೆಚ್ಚುವರಿ ನೀರನ್ನು ಕಾಲುವೆ ಮುಖಾಂತರ ತಲುಪಿಸಬೇಕು. ಬೆಳಗಾವಿ ಜಿಲ್ಲೆ ವೀರಭದ್ರೇಶ್ವರ ಏತನೀರಾವರಿ ಯೋಜನೆಯ ಸವದತ್ತಿ ತಾಲೂಕು ಹಳ್ಳಿಗಳಿಗೆ, ರಾಮದುರ್ಗ 10 ಹಳ್ಳಿಗಳಿಗೆ ನೀರಾವರಿ ಕಾಮಗಾರಿ ಆರಂಭಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಚೈನಾ ರೇಷ್ಮೆ ಮೇಲೆ ರದ್ದು ಪಡಿಸಿರುವ ಆಮದು ಶುಲ್ಕ ಮರಳಿ ಹಾಕಬೇಕು ಹಾಗೂ ರೇಷ್ಮೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಮಾಡಬೇಕು. ಜನಸಂವರ್ಧನಾ ಯೋಜನಾ ಸಂಘದಿಂದ ಕೆರೆ ಹೂಳೆತ್ತುವ ನಿರ್ವಹಣೆ ಮಾಡಬೇಕು. ಕೆರೆ ಪುನಶ್ಚೇತನಗೊಳಿಸಲು ವಿಶ್ವಬ್ಯಾಂಕ್ ನೆರವನ್ನು ಮುಂದುವರೆಸಬೇಕೆಂದು ಮನವಿ ಮಾಡಿದರು. ಆಯಾ ಪ್ರದೇಶಗಳಿಗೆ ಅನುಗುಣವಾಗಿ ರೈತರ ಉಪಕಸುಬುಗಳಾದ ಹೈನುಗಾರಿಕೆ, ಕುರಿ, ಕೋಳಿ, ಹಂದಿ, ಮೀನು, ಹೂವು, ತರಕಾರಿ, ಗೃಹ ಕೈಗಾರಿಕೆಗಳಿಗೆ 50ರಷ್ಟು ಸಬ್ಸಿಡಿ ಕೊಡಬೇಕು. ಕಡು ಬಡವರಿಗೆ ಭಾಗ್ಯಜ್ಯೋತಿ ಯೋಜನೆಯಡಿ 18 ಯೂನಿಟ್ ಬದಲಿಗೆ 40 ಯೂನಿಟ್ ವಿದ್ಯುತ್ ನೀಡಬೇಕು, 5 ರೂ.ನಲ್ಲಿ ಪಹಣಿ, ಮ್ಯುಟೇಷನ್‌ಗ್ರಾ.ಪಂ.ಗಳಲ್ಲಿ ವಿತರಣೆ ಮಾಡುವ ಸೌಲಭ್ಯ ಕಲ್ಪಿಸಿ ಎಂದು ಕೋರಿದರು.

ರೈತರಿಂದ ಗ್ರಾಹಕರು ಕೃಷಿ ಉತ್ಪನ್ನಗಳನ್ನು ನೇರವಾಗಿ ಕೊಳ್ಳಲು ರೈತ ಸಂತೆಗಳನ್ನು ಅಭಿವೃದ್ಧಿ ಪಡಿಸಬೇಕು. ಮನಸ್ಸಿಗೆ ಬಂದಂತೆ ವಿದ್ಯುತ್ ಕಡಿತಗೊಳಿಸಿದಲ್ಲಿ ಕೃಷಿ, ತೋಟಗಾರಿಕೆ ಮತ್ತು ಗ್ರಾಮೀಣ ಕೈಗಾರಿಕೆಗಳಿಗೆ ಆಗುವ ನಷ್ಟದ ಸಂಪೂರ್ಣ ಹೊಣೆಯನ್ನು ವಿದ್ಯುತ್ ಇಲಾಖೆ ಹೊರಬೇಕು.

Write A Comment