
ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ, ಆರು ದಿನಗಳ ನಂತರವೂ ಬದುಕಿ ಬಂದು ವೀರಮರಣವನ್ನಪ್ಪಿದವರು ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್. ಅಂಥ ಸಂದರ್ಭದಲ್ಲೂ ಧೈರ್ಯಗೆಡದ ಹನುಮಂತಪ್ಪ ಪತ್ನಿ ಮಹಾದೇವಿ ಬಗ್ಗೆಯೂ ಎಲ್ಲೆಡೆ ಮೆಚ್ಚುಗೆ ಕೇಳಿಬಂದಿತ್ತು. ‘ನನ್ನ ಪತಿ ಹುಷಾರಾದ ಬಳಿಕ ಪುನಃ ಅವರನ್ನು ಸೈನ್ಯಕ್ಕೆ ಕಳುಹಿಸುತ್ತೇನೆ. ನನ್ನ ಮಗಳನ್ನು ಒಬ್ಬ ಯೋಧನಿಗೆ ಕೊಟ್ಟು ಮದುವೆ ಮಾಡುತ್ತೇನೆ’ ಎಂದು ಹೇಳಿದ್ದು ಅವರಲ್ಲಿರುವ ದೇಶಭಕ್ತಿಯನ್ನು ಎತ್ತಿ ಹಿಡಿದಿತ್ತು. ಭಾರತೀಯರು ಅವರ ಬಗ್ಗೆ ಹೆಮ್ಮೆಪಡಲು ಈ ಹೇಳಿಕೆಗಳೇ ಸಾಕು. ಅಷ್ಟಕ್ಕೂ ಮಹಾದೇವಿ ಅವರಿಗೆ ಹನುಮಂತಪ್ಪ ಅವರನ್ನು ವಿವಾಹವಾಗಲು ಕಾರಣವೇನು ಗೊತ್ತಾ? ‘ಮುತ್ತಿನ ಹಾರ’ ಸಿನಿಮಾ! ಸ್ವತಃ ಮಹಾದೇವಿ ಅವರೇ ಹಾಗಂತ ಹೇಳಿಕೊಂಡಿದ್ದಾರೆ.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಮತ್ತು ಲೆಜೆಂಡರಿ ಮ್ಯಾನ್ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ ‘ಸೂಪರ್ ಸ್ಟಾರ್ಸ್’ ಕ್ರಿಕೆಟ್ ಲೀಗ್ ಪಂದ್ಯಾವಳಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಗುತ್ತಿತ್ತು. ಅದೇ ವೇದಿಕೆಯಲ್ಲಿ ಹನುಮಂತಪ್ಪ ಕೊಪ್ಪದ್ ಅವರ ಕುಟುಂಬದವರಿಗೆ ಗೌರವಧನ ನೀಡಲಾಯಿತು. ಆಗ ಮಾತನಾಡಿದ ಮಹಾದೇವಿ, ‘ನಾನು ಚಿಕ್ಕವಳಿರುವಾಗ ‘ಮುತ್ತಿನ ಹಾರ’ ಸಿನಿಮಾ ನೋಡಿದ್ದೆ. ಆ ಚಿತ್ರ ನೋಡಿದಾಗಿನಿಂದ ಸೈನಿಕರ ಮೇಲಿನ ಗೌರವ ಹೆಚ್ಚಾಗಿತ್ತು. ಹಾಗಾಗಿ, ಒಬ್ಬ ಯೋಧನನ್ನೇ ಮದುವೆಯಾಗಬೇಕು ಎಂದು ನಿರ್ಧರಿಸಿದ್ದೆ’ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಹಾಜರಿದ್ದ ನಟ ‘ದುನಿಯಾ’ ವಿಜಯ್ ಕೂಡ ಹನುಮಂತಪ್ಪ ಕುಟುಂಬಕ್ಕೆ ವೈಯಕ್ತಿಕವಾಗಿ ಪರಿಹಾರ ನೀಡುವ ಮೂಲಕ ನೆರವಾದರು. ಇನ್ನು, ನಿರ್ದೇಶಕರ ಸಂಘ ಮತ್ತು ಲೆಜೆಂಡರಿ ಮ್ಯಾನ್ ಸಂಸ್ಥೆ ಆಯೋಜಿಸಿರುವ ಈ ಕ್ರಿಕೆಟ್ ಲೀಗ್ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಭ್ರೂಣಹತ್ಯೆಯನ್ನು ವಿರೋಧಿಸಿ ‘ಹೆಣ್ಣು ಮಗು ನಮ್ಮ ನಗು’ ಎಂಬ ಕಾರ್ಯಕ್ರಮದಡಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಈ ಕ್ರಿಕೆಟ್ ಲೀಗ್ನ ಮುಖ್ಯ ಉದ್ದೇಶ. ಸ್ಯಾಂಡಲ್ವುಡ್ನ 120 ಕಲಾವಿದರು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್, ಲೆಜೆಂಡರಿ ಮ್ಯಾನ್ ಸಂಸ್ಥೆಯ ಗಜಾನನ, ನಿರ್ದೇಶಕರಾದ ಯೋಗರಾಜ ಭಟ್, ಸೂರಿ, ನಿರ್ವಪಕರಾದ ಸೂರಪ್ಪ ಬಾಬು ಮತ್ತಿತರರು ಹಾಜರಿದ್ದರು.