ಕರ್ನಾಟಕ

ಬೆಂಗಳೂರಿನಲ್ಲೊಂದು ಸಿನಿಮಾ ಟೆಂಟ್; ಮಲ್ಟಿಪ್ಲೆಕ್ಸ್ ಕಾಲದಲ್ಲಿ “ಟೆಂಟ್” ಸಂಪ್ರದಾಯ ಉಳಿಸಿಕೊಂಡಿರುವ “ಸುಜಾತ ಟಾಕಿಸ್”

Pinterest LinkedIn Tumblr

sujata-Talkies

ಬೆಂಗಳೂರು: ಮಲ್ಟಿಪ್ಲೆಕ್ಸ್ ಮತ್ತು ಮಾಲ್ ಸಂಸ್ಕೃತಿಯಲ್ಲಿ ಕಳೆದು ಹೋಗಿರುವ ಈಗಿನ ತಲೆಮಾರಿನ ಜನರಿಗೆ ಬಹುಶಃ ಟೆಂಟ್ ಸಿನಿಮಾ ಪರಿಕಲ್ಪನೆಯೇ ತಿಳಿದಿಲ್ಲ ಎನ್ನಬಹುದು. ಒಂದೇ ಚಿತ್ರಮಂದಿರಲ್ಲಿ ಹಲವು ಸ್ಕ್ರೀನ್ ಗಳ ಮೂಲಕ ವಿವಿಧ ಚಿತ್ರಗಳನ್ನು ಪ್ರದರ್ಶನ ಮಾಡುವ ಈಗಿನ ಕಾಲದಲ್ಲಿ ಹಳೆಯ ಅಂದರೆ 1960 ದಶಕದ ಮಾದರಿಯಲ್ಲಿಯೇ ಚಿತ್ರವನ್ನು ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರವೊಂದಿದೆ ಎಂದರೆ ನಂಬುತ್ತೀರಾ. ಅದೂ ಕೂಡ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ..!

ಹೌದು..ಮಲ್ಟಿಪ್ಲೆಕ್ಸ್ ಮತ್ತು ಮಾಲ್ ಸಂಸ್ಕೃತಿಯ ಆಗರವಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿಗೂ ಒಂದು ಚಿತ್ರಮಂದಿರ ತನ್ನ ಹಳೆಯ ಛಾಪನ್ನು ಹಾಗೆಯೇ ಉಳಿಸಿಕೊಂಡು ಚಿತ್ರಪ್ರದರ್ಶನ ಮಾಡುತ್ತಿದೆ. 1960 ದಶಕದಲ್ಲಿ ವ್ಯಾಪಕವಾಗಿದ್ದ ಟೆಂಟ್ ಸಿನಿಮಾ ಪರಿಕಲ್ಪನೆಯಲ್ಲಿಯೇ ಇಂದಿಗೂ ಇಲ್ಲಿ ಚಿತ್ರ ಪ್ರದರ್ಶನ ಮಾಡಲಾಗುತ್ತಿದ್ದು, ಇಲ್ಲಿ ಬೆಂಚ್ ಗಳ ಮೇಲೆ ಕುಳಿತುಕೊಂಡೇ ಚಿತ್ರ ವೀಕ್ಷಣೆ ಮಾಡಬೇಕು.

ಇಂತಹ ಹಳೆಯ ಕಾಲದ ಸಿನಿಮಾ ಟೆಂಟ್ ಇರುವುದು ಬೆಂಗಳೂರಿನ ವಿನಾಯಕ ನಗರದಲ್ಲಿರುವ ಹಳೆಯ ಗುಡ್ಡದಹಳ್ಳಿಯಲ್ಲಿ. ಈ ಚಿತ್ರ ಮಂದಿರದ ಹೆಸರು ಸುಜಾತಾ ಟಾಕೀಸ್. ಅರ್ಥಾತ್ ಸುಜಾತಾ ಟೆಂಟ್ ಎಂದು..ಈ ಚಿತ್ರಮಂದಿರವನ್ನು 1968ರಲ್ಲಿ ಸಯ್ಯದ್ ಕರೀಂ ಬಾಷಾ ಎಂಬುವವರು ನಿರ್ಮಿಸಿದರು. ಆ ಬಳಿಕ ಚಿತ್ರಮಂದಿರದ ಜವಾಬ್ದಾರಿಯನ್ನು ಅವರ ಮಗ ಸೈಯ್ಯದ್ ಅಲೀಮುಲ್ಲಾ ಅವರು ತೆಗೆದುಕೊಂಡರು. ಪ್ರಸ್ತುತ ಈ ಹಳೆಯ ಚಿತ್ರಮಂದಿರವನ್ನು ಅಲೀಮುಲ್ಲ ಸಹೋದರರಾದ ಸೈಯ್ಯದ್ ನದೀಮುಲ್ಲಾ ಹಾಗೂ ಸೈಯ್ಯದ್ ಸೈಫುಲ್ಲಾ ನಡೆಸುತ್ತಿದ್ದಾರೆ.

1968ರಿಂದ 2005ರವರೆಗೂ ತಗಡು ಮತ್ತು ಶೀಟ್ ಗಳ ನಡುವೆಯೇ ಕಾರ್ಯನಿರ್ವಹಿಸುತ್ತಿದ್ದ ಸುಜಾತಾ ಟಾಕಿಸ್ ಗೆ ಅಂದು ಬಿಬಿಎಂಪಿ ರೂಪಿಸಿದ್ದ ನೂತನ ನಿಯಮಾವಳಿಗಳು ಚಿತ್ರಮಂದಿರಕ್ಕೆ ಕಾಂಕ್ರೀಟ್ ಸ್ಪರ್ಶ ನೀಡುವಂತಾಯಿತು. ಅಗ್ನಿ ದುರಂತ ಮತ್ತು ಇತರೆ ಮುಂಜಾಗ್ರತೆಗಾಗಿ ಚಿತ್ರಮಂದಿರಕ್ಕೆ ಕಾಂಕ್ರೀಟ್ ಗೋಡೆ ನಿರ್ಮಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಅಂದು ಚಿತ್ರಮಂದಿರಕ್ಕೆ ಕಾಂಕ್ರೀಟ್ ಟಚ್ ನೀಡಲಾಗಿತ್ತು.

1960ರಿಂದಲೇ ಸುಜಾತ ಟೂರಿಂಗ್ ಟಾಕಿಸ್ ಹೆಸರಲ್ಲಿ ಚಿತ್ರ ಮಂದಿರವನ್ನು ನಡೆಸುತ್ತಿದ್ದ ಅಲೀಮುಲ್ಲಾ ಕುಟುಂಬ, ದೇಶದ ವಿವಿಧ ಪ್ರದೇಶಗಳಿಗೆ ತೆರಳಿ ಅಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳನ್ನು ಪ್ರದರ್ಶಿಸಿ ಬಂದಿದ್ದಾರೆ. ಇನ್ನು ವಿನಾಯಕನಗರದಲ್ಲಿರುವ ಸುಜಾತಾ ಟಾಕಿಸ್ ಖಾಯಂ ಆಗಿದ್ದು, ಪ್ರತಿನಿತ್ಯ 3 ಪ್ರದರ್ಶನಗಳನ್ನು ಏರ್ಪಡಿಸಲಾಗಿರುತ್ತದೆ. ಮಧ್ಯಾಹ್ನ 2.30, ಸಂಜೆ 6 ಮತ್ತು ರಾತ್ರಿ 9 ಗಂಟೆಗೆ ಒಂದರಂತೆ ಒಟ್ಟು ಮೂರು ಪ್ರದರ್ಶನಗಳನ್ನು ಏರ್ಪಡಿಸಲಾಗಿರುತ್ತದೆ. ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಗಳ ಸ್ಪರ್ಧೆಯ ನಡುವೆಯೇ ಅತ್ಯಂತ ಕಡಿಮೆ ದರಕ್ಕೆ ಇಲ್ಲಿ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಒಂದು ಪ್ರದರ್ಶನಕ್ಕೆ ಓರ್ವ ವ್ಯಕ್ತಿಗೆ ಕೇವಲ 15ರಿಂದ 20 ರುಪಾಯಿ ತೆಗೆದುಕೊಳ್ಳಲಾಗುತ್ತದೆ.

ಕಾಂಕ್ರೀಟ್ ಚಿತ್ರಮಂದಿರ ವ್ಯವಸ್ಥೆ ಬಂದ ಬಳಿಕ ಟೆಂಟ್ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಆದರೂ ಪ್ರತಿನಿತ್ಯ ಇಲ್ಲಿ ಸುಮಾರು 200 ಮಂದಿ ಪ್ರೇಕ್ಷಕರು ಆಗಮಿಸಿ ಚಿತ್ರ ವೀಕ್ಷಿಸುತ್ತಾರೆ ಎಂದು ಸುಜಾತ ಟೆಂಟ್ ಮಾಲೀಕರಾದ ಸೈಫುಲ್ಲಾ ಅವರು ಹೇಳಿದ್ದಾರೆ.

ದಶಕಗಳಿಂದಲೂ ಸಯ್ಯದ್ ಕರೀಂ ಬಾಷಾ ಕುಟುಂಬದ ಜೊತೆಗಿರುವ ಕಾರ್ಮಿಕರು
ಇನ್ನು ಸುಜಾತ ಟೆಂಟ್ ಮತ್ತೊಂದು ಪ್ರಮುಖ ಅಂಶವೆಂದರೆ ಕಾರ್ಮಿಕರು ದಶಕಗಳಿಂದಲೂ ಇಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ತಲೆಮಾರುಗಳು ಉರುಳಿದರೂ ಕಾರ್ಮಿಕರು ಮಾತ್ರ ಕೆಲಸ ಬಿಡದೆ ಸುಜಾತಾ ಟಾಕಿಸ್ ನಲ್ಲಿಯೇ ಕೆಲಸ ಮಾಡಿಕೊಂಡಿದ್ದಾರೆ. ಸೈಫುಲ್ಲಾ ಅವರು ಹೇಳುವಂತೆ ಚಿತ್ರಮಂದಿರದ ಕಾವಲುಗಾರ ಮಹದೇವ ಅವರು ಕಳೆದ 25 ವರ್ಷದಿಂದ ಇಲ್ಲಿಯೇ ಇದ್ದಾರೆ. ಕೇವಲ ಚಿತ್ರಮಂದಿರವನ್ನು ಕಾಯುವ ಕೆಲಸ ಮಾತ್ರವಲ್ಲದೇ ಪ್ರಚಾರದ ಕಾರ್ಯವನ್ನು ಕೂಡ ಇದೇ ಮಹದೇವ ಅವರು ಮಾಡುತ್ತಾರಂತೆ. ಇನ್ನು ಗಂಗಾ ಎಂಬ ಪ್ರೊಜೆಕ್ಟರ್ ಆಪರೇಟರ್ ಕಳೆದ 37 ವರ್ಷಗಳಿಂದಲೂ ಇಲ್ಲೇ ದುಡಿಯುತ್ತಿದ್ದಾರೆ. ಇನ್ನು ಸುಜಾತಾ ಟಾಕಿಸ್ ನ ಮ್ಯಾನೇಜರ್ ಆಗಿರುವ ಜಮೀಲ್ ಷರೀಫಲ್ ಕೂಡ 37 ವರ್ಷದಿಂದ ಇಲ್ಲೇ ಕೆಲಸ ಮಾಡುತ್ತಿದ್ದು, ಪಿ. ಸೈದು ಎಂಬ ಟಿಕೆಟ್ ಬುಕಿಂಗ್ ಮಾಡುವ ಕಾರ್ಮಿಕ 40 ವರ್ಷದಿಂದ ಇಲ್ಲಿ ದುಡಿಯುತ್ತಿದ್ದಾರೆ. ಅಜಂ ಪಾಷಾ ಎನ್ನುವ ಕಾವಲುಗಾರ ಕಳೆದ 21 ವರ್ಷಗಳಿಂದ ಸುಜಾತಾ ಟಾಕಿಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಗತ್ಯ ಬಿದ್ದರೆ ಪ್ರೇಕ್ಷಕರಿಗೆ ಟಿಕೆಟ್ ಹರಿದು ಕೊಡುವ ಕೆಲಸ ಕೂಡ ಮಾಡುತ್ತಾರಂತೆ.

ಒಟ್ಟಾರೆ ಕಾಂಕ್ರೀಟ್ ಚಿತ್ರಮಂದಿರವೇ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ 60ರ ದಶಕದ ಟೆಂಟ್ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಸುಜಾತಾ ಟಾಕೀಸ್ ಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.

(KP)

Write A Comment