ಬೆಂಗಳೂರು: ತನ್ನ ಪ್ರೇಯಸಿಗೆ ₹ 500 ಕೊಟ್ಟು ದೈಹಿಕ ಸಂಪರ್ಕಕ್ಕೆ ಕರೆದಿದ್ದರಿಂದ ಕುಪಿತಗೊಂಡ ವ್ಯಕ್ತಿಯೊಬ್ಬ, ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಉಪ್ಪಾರಪೇಟೆ ಸಮೀಪದ ತುಳಸಿಪಾರ್ಕ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಘಟನೆ ನಂತರ ಪ್ರೇಯಸಿಯನ್ನು ಕರೆದುಕೊಂಡು ಮೈಸೂರಿಗೆ ಹೊರಟಿದ್ದ ಆರೋಪಿ ಮದನ್ ಅಲಿಯಾಸ್ ಶಾಸ್ತ್ರಿ ಎಂಬಾತನನ್ನು ಉಪ್ಪಾರಪೇಟೆ ಪೊಲೀಸರು ನಗರ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಹೆಸರು ಗಿರೀಶ್ ಎಂದಷ್ಟೇ ಗೊತ್ತಾಗಿದೆ.
ಮದನ್ ಹಾಗೂ ಗಿರೀಶ್, ನಗರ ರೈಲು ನಿಲ್ದಾಣದ ಮೂಲಕ ಪ್ರಯಾಣಿಸುವವರಿಗೆ ರೈಲಿನಲ್ಲಿ ಸೀಟು ಹಿಡಿದುಕೊಡುವ ಕೆಲಸ ಮಾಡುತ್ತಿದ್ದರು. ಆರು ತಿಂಗಳ ಹಿಂದೆ ಪರಸ್ಪರರ ಪರಿಚಯವಾಗಿತ್ತು. ಈ ನಡುವೆ ಮದನ್, 35 ವರ್ಷದ ಮಹಿಳೆಯೊಬ್ಬರನ್ನು ಪ್ರೀತಿ ಮಾಡುತ್ತಿದ್ದ. ಆದರೆ, ಗಿರೀಶ್ ಆ ಮಹಿಳೆಗೆ ₹ 500 ಕೊಟ್ಟು ದೈಹಿಕ ಸಂಪರ್ಕಕ್ಕೆ ಕರೆದಿದ್ದ. ಇದರಿಂದ ಆರೋಪಿ ರೊಚ್ಚಿಗೆದ್ದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮದನ್ ಹಾಗೂ ಆ ಮಹಿಳೆ ಬೆಳಿಗ್ಗೆ 11.45ರ ಸುಮಾರಿಗೆ ತುಳಸಿಪಾರ್ಕ್ ಬಳಿ ಇದ್ದಾಗ ಅಲ್ಲಿಗೆ ಬಂದ ಗಿರೀಶ್, ತಾನು ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾನೆ. ಈ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, ಆರೋಪಿ ಚಾಕುವಿನಿಂದ ಗಿರೀಶ್ ಅವರ ಕುತ್ತಿಗೆ ಸೀಳಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮದನ್ ಸ್ನೇಹಿತ ನೀಡಿದ ಮಾಹಿತಿ ಮೇರೆಗೆ ಮದನ್‌ನನ್ನು ಬಂಧಿಸಲಾಗಿದೆ.