ಬೆಂಗಳೂರು: ಆರ್‌ಎಂಸಿ ಯಾರ್ಡ್ ಸಮೀಪದ ಎಸ್‌ಆರ್‌ಎಸ್ ಜಂಕ್ಷನ್‌ನಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಗಿಲ್ಬರ್ಟ್ ಕೋರಿಯಾ (76) ಎಂಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮೊಬೈಲ್ ಚಾರ್ಜರ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಕೇರಳ ಮೂಲದ ಗಿಲ್ಬರ್ಟ್, 30 ವರ್ಷಗಳಿಂದ ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಕಟ್ಟಡ ಗುತ್ತಿಗೆದಾರರಾದ ಅವರ ಹಿರಿಯ ಮಗ ಜಾನ್ಸನ್, ಮದುವೆ ಬಳಿಕ ಪ್ರತ್ಯೇಕವಾಗಿ ವಾಸ್ತವ್ಯವನ್ನು ರುಕ್ಮಿಣಿನಗರಕ್ಕೆ ಬದಲಾಯಿಸಿದ್ದರು.
ದ್ವಿತೀಯ ಪುತ್ರ ಗಿಲ್ಸನ್ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು, ಅವರು ಸಹಪತ್ನಿ ಜತೆ ಮಂಜುನಾಥನಗರದಲ್ಲಿ ನೆಲೆಸಿದ್ದಾರೆ. ಕಳೆದ ವರ್ಷ ಪತ್ನಿ ಅನಾರೋಗ್ಯದಿಂದ ಮೃತಪಟ್ಟ ಕಾರಣ ಗಿಲ್ಬರ್ಟ್ ಒಬ್ಬರೇ ಮನೆಯಲ್ಲಿದ್ದರು.
ಭಾನುವಾರ ರಾತ್ರಿ ಮನೆಗೆ ನುಗ್ಗಿರುವ ದುಷ್ಕರ್ಮಿಗಳು, ಮೊಬೈಲ್ ಚಾರ್ಜರ್‌ನಿಂದ ಕುತ್ತಿಗೆ ಬಿಗಿದು ಕೊಂದಿದ್ದಾರೆ. ಎಂದಿನಂತೆ ಮನೆಗೆಲಸದಾಕೆ ಗೌರಿ, ಸೋಮವಾರ ಮಧ್ಯಾಹ್ನ 12ಕ್ಕೆ ಕೆಲಸಕ್ಕೆ ಬಂದಾಗ ಹೊರಗಿನಿಂದ ಚಿಲಕ ಹಾಕಿತ್ತು. ಒಳ ಹೋಗಿ ನೋಡಿದಾಗ ಗಿಲ್ಬರ್ಟ್ ನೆಲದ ಮೇಲೆ ಬಿದ್ದಿರುವುದನ್ನು ಕಂಡು ಚೀರಿಕೊಂಡಿದ್ದಾರೆ. ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದಾರೆ.
‘ಉಸಿರುಗಟ್ಟಿಸಿ ಗಿಲ್ಬರ್ಟ್ ಅವರನ್ನು ಕೊಂದಿರುವ ದುಷ್ಕರ್ಮಿಗಳು, ನಂತರ ಶ್ವಾನದಳಕ್ಕೆ ಸುಳಿವು ಸಿಗಬಾರದೆಂದು ದೇಹದ ಮೇಲೆ ಖಾರದ ಪುಡಿ ಸುರಿದಿದ್ದಾರೆ. ಇಡೀ ರಸ್ತೆಯಲ್ಲಿ ಯಾವುದೇ ಸಿ.ಸಿ ಟಿ.ವಿ ಕ್ಯಾಮೆರಾ ಇಲ್ಲ. ಮನೆಯಿಂದ ಬೆಲೆಬಾಳುವ ವಸ್ತುಗಳು ಕಳವಾಗಿರುವ ಬಗ್ಗೆ ಮಾಹಿತಿ ಇಲ್ಲ. ಗಿಲ್ಬರ್ಟ್ ಅವರ ಮಕ್ಕಳನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.