ಬೆಂಗಳೂರು: ಜಿವಿಕೆ ಇಎಮ್ರ್ಐ ಸಂಸ್ಥೆ ಹಾಗೂ ಆಂಬುಲೆನ್ಸ್ ಸಿಬ್ಬಂದಿ ನಡುವಿನ ವಿವಾದ ತಾರಕಕ್ಕೇರಿದೆ. 108 ಆರೋಗ್ಯ ಸೇವೆ ಮೇಲೆ ಪರಿಣಾಮ ಬೀರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಮುಷ್ಕರ ನಿರತ ಸ್ಟಾಫ್ ನರ್ಸ್ ಮತ್ತು ಚಾಲಕರಿಗೆ ಫೆ.24ರೊಳಗೆ ಕೆಲಸಕ್ಕೆ ಮರಳಲು ಜಿವಿಕೆ ಸಂಸ್ಥೆ ಅಂತಿಮ ಗಡುವು ನೀಡಿದೆ. ಇದಕ್ಕೆ ಸೆಡ್ಡು ಹೊಡೆದಿರುವ ಚಾಲಕರು ಮತ್ತು ನರ್ಸ್ಗಳು ತಮ್ಮ ಹೋರಾಟದ ಹಾದಿಯನ್ನು ಬದಲಿಸಿದ್ದು, 108 ಆಂಬುಲೆನ್ಸ್ ಸೇವೆ ಯೋಜನೆಯನ್ನು ಜಿವಿಕೆಯಿಂದ ವಾಪಸು ಪಡೆಯುವಂತೆ ಸರ್ಕಾರವನ್ನು ಆಗ್ರಹಿಸಲು ನಿರ್ಧರಿಸಿದ್ದಾರೆ.
ಆಂಬುಲೆನ್ಸ್ ಚಾಲಕರಿಗೆ ಮತ್ತು ನರ್ಸ್ಗಳ ಹೋರಾಟಕ್ಕೆ ಸಂಯುಕ್ತ ಜನತಾದಳ, ಬಹುಜನ ಸಮಾಜ ಪಕ್ಷ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಸಿಐಟಿಯು, ಅಸಂಘಟಿತ ಕಾರ್ವಿುಕರ ಹೋರಾಟ ಸಮಿತಿ, ಕೈಗಾರಿಕೆ ಮತ್ತು ವಾಣಿಜ್ಯ ಸಂಘಗಳ ಒಕ್ಕೂಟ ಬೆಂಬಲ ಸೂಚಿಸಿವೆ. ವಿವಿಧ ಸಂಘಟನೆಗಳ ಜಂಟಿ ಹೋರಾಟ ಸಮಿತಿಯಿಂದ ಫೆ. 22 ರಿಂದ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಲಾಗಿದೆ.
ಆರೋಗ್ಯ ಕವಚ ಆಂಬುಲೆನ್ಸ್ ಸೇವೆ ಜಿವಿಕೆ ಸಂಸ್ಥೆಯ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ದೇಶದ 18 ರಾಜ್ಯಗಳಲ್ಲಿ ಯೋಜನೆ ಅನುಷ್ಠಾನ ಮಾಡುತ್ತಿದೆ. ಆರಂಭದಿಂದಲೂ ಸಿಬ್ಬಂದಿ ಅನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ರಾಜ್ಯದಲ್ಲಿ 3,500 ಕಾರ್ವಿುಕರನ್ನು ವಂಚಿಸಿದೆ ಎಂದು ಜಂಟಿ ಹೋರಾಟ ಸಮಿತಿ ಮುಖ್ಯಸ್ಥ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಡಾ. ಎಂ. ವೆಂಕಟಸ್ವಾಮಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
108 ಚಾಲಕರ ಸಂಘದ ಅಧ್ಯಕ್ಷ ಶ್ರಿ ಶೈಲ ಮಾತನಾಡಿ, ಜಿವಿಕೆ ಸಂಸ್ಥೆ ಒಪ್ಪಂದದ ಕಾರಾರುಗಳನ್ನು ಉಲ್ಲಂಘಿಸಿ ಡೀಸೆಲ್, ಟಯರ್ ಬದಲಾವಣೆ ವಾಹನ ನಿರ್ವಹಣೆ ಹೆಸರಿನಲ್ಲಿ ಸುಳ್ಳು ಲೆಕ್ಕ ತೋರಿಸಿ, ಸರ್ಕಾರವನ್ನು ವಂಚಿಸುತ್ತಿದೆ. ಕಾರ್ವಿುಕ ಇಲಾಖೆಯ ನಿರ್ದೇಶನದಂತೆ ಕನಿಷ್ಠ ವೇತವ ನೀಡುತ್ತಿಲ್ಲ. ಸಾಕಷ್ಟು ಬಾರಿ ಪ್ರತಿಭಟಿಸಿದರೂ ಎಚ್ಚೆತ್ತುಕೊಂಡಿಲ್ಲ. ಪೊಳ್ಳು ಬೆದರಿಕೆ ಮೂಲಕ ಅದು ತಮ್ಮನ್ನು ಸೆಳೆಯಲು ಯತ್ನಿಸುತ್ತಿದೆ. ಆದರೆ ಈ ಬಾರಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಸಿಐಟಿಯುನ ವರಲಕ್ಷ್ಮೀ, ಬಿಎಸ್ಪಿಯ ಮಾರಸಂದ್ರ ಮುನಿಯಪ್ಪ, ಸಂಯುಕ್ತ ಜನತಾದಳದ ಎಂ.ಪಿ. ನಾಡಗೌಡ ಮತ್ತಿತರಿದ್ದರು.
ನೌಕರರಿಗೆ 24ರ ಗಡುವು
ಬೆಂಗಳೂರು: ಸೇವೆಗೆ ಹಾಜರಾಗದೆ ಮುಷ್ಕರದಲ್ಲಿರುವ 1,400 ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು 108 ಆಂಬುಲೆನ್ಸ್ನ ಜಿವಿಕೆ ಸಂಸ್ಥೆ ಫೆ. 24ರವರೆಗೆ ಗಡುವು ನೀಡಿದೆ.
ಒಟ್ಟು 3,500 ಸಿಬ್ಬಂದಿ ಇರುವ ಸಂಸ್ಥೆಯಲ್ಲಿ 1,350 ಸಿಬ್ಬಂದಿ ಮುಷ್ಕರ ಬಿಟ್ಟು ಸೇವೆಗೆ ಮರಳಿದ್ದು, 750 ಸಿಬ್ಬಂದಿಯನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ. ಬಾಕಿ ಉಳಿದಿರುವ 1,400 ಸಿಬ್ಬಂದಿಗೆ ನಾಲ್ಕು ದಿನಗಳ ಗಡುವು ವಿಧಿಸಲಾಗಿದ್ದು, ಸೇವೆಗೆ ಮರಳದಿದ್ದಲ್ಲಿ, ಹೊಸಬರನ್ನು ನೇಮಿಸ ಲಾಗುವುದೆಂದು ಜಿವಿಕೆ-ಇಎಂಆರ್ಐ ರಾಜ್ಯ ಮುಖ್ಯಸ್ಥ ಅಭಿನವ ಜಯರಾಂ ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು. ಕಂಪನಿ 24 ಗಂಟೆಗಳ ತುರ್ತು ಸೇವೆ ನೀಡುತ್ತಿರುವುದರಿಂದ, 108 ಸಿಬ್ಬಂದಿ ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್ಆರ್ಟಿ ಸಿಬ್ಬಂದಿಯನ್ನು ತುರ್ತು ಸೇವೆಗೆ ಬಳಸಲಾಗಿತ್ತು. ಇದೀಗ 750 ಜನರನ್ನು ಹೊಸದಾಗಿ ನೇಮಿಸಿಕೊಳ್ಳಲಾಗುತ್ತಿದ್ದು, ಈ ಪೈಕಿ 500 ವಾಹನ ಚಾಲಕರಿಗೆ ತರಬೇತಿ ನೀಡಲಾಗಿದೆ. ಉಳಿದ 250 ಜನರಿಗೆ ಫೆ. 22ಕ್ಕೆ ತರಬೇತಿ ಮುಗಿಯುತ್ತದೆ. ಅಲ್ಲದೆ 500 ಜನ ಇಎಂಟಿಗಳಿಗೆ ಏ.15ರವರೆಗೆ ತರಬೇತಿ ನೀಡಿ ಸಂಸ್ಥೆಗೆ ಪಡೆಯಲಾಗುವುದೆಂದು ಎಂದ ತಿಳಿಸಿದರು.