ಕರ್ನಾಟಕ

ಸಿಎಂ ವಾಚ್‌ ಪ್ರಕರಣ: ಇ.ಡಿ.ಗೆ ಪ್ರಹ್ಲಾದ್‌ ಜೋಶಿ ದೂರು

Pinterest LinkedIn Tumblr

joshiಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ವಾಚ್‌ ಉಡುಗೊರೆ ಪಡೆದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ ಜೋಶಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ.  ಈ ಮೂಲಕ ಸಾಕಷ್ಟು ವಿವಾದ ಮೂಡಿಸಿರುವ ದುಬಾರಿ ವಾಚ್‌ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಜತೆಗೆ ಬಿಜೆಪಿ ಸಹ ಕೈ ಜೋಡಿಸಿದಂತಾಗಿದೆ.

ದೆಹಲಿಯ ಜಾರಿ ನಿರ್ದೇಶನಾಲಯ ನಿರ್ದೇಶಕ ಕರ್ನಾಲ್‌ ಸಿಂಗ್‌ ಅವರಿಗೆ ಶನಿವಾರ ಪತ್ರ ಬರೆದಿರುವ ಜೋಶಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಗೊರೆಯಾಗಿ ಪಡೆದಿದ್ದರು ಎಂದು ಹೇಳಲಾಗಿರುವ ವಾಚ್‌ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನಗಳಿದ್ದು ತನಿಖೆ ನಡೆಸಿ ಕಾನೂನು ಉಲ್ಲಂಘನೆಯಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಆ ವಾಚ್‌ನ ಮೂಲ ಮಾಲೀಕರ್ಯಾರು? ಮುಖ್ಯಮಂತ್ರಿಗೆ ವಾಚ್‌ ಉಡುಗೊರೆಯಾಗಿ ಕೊಟ್ಟವರು ನಿಯಮಾನುಸಾರ ತೆರಿಗೆ, ಸುಂಕ ಪಾವತಿಸಿದ್ದಾರೆಯೇ?  ಹಾಗೆ ಪಾವತಿಸಿದ್ದರೆ ಆದಾಯ ತೆರಿಗೆ ಇಲಾಖೆಗೆ  ಆ ಸಂಬಂಧ ಮಾಹಿತಿ ಒದಗಿಸಿದ್ದಾರೆಯೇ? ವಾಚ್‌ ಖರೀದಿ ಮತ್ತು ಸಾಗಣೆಯಲ್ಲಿ ಕಾಯ್ದೆ ಉಲ್ಲಂಘನೆಯಾಗಿದೆಯೇ? ಎಂಬ ಅಂಶಗಳ ಬಗ್ಗೆ ಪ್ರಮುಖವಾಗಿ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ಪ್ರಕಾರ ವಾಚ್‌ ಖರೀದಿಸಿ ತೆರಿಗೆ ಮತ್ತು ಸುಂಕ ಪಾವತಿಸಿದ್ದರೆ ಯಾವುದೇ ಸಮಸ್ಯೆಯಿಲ್ಲ. ಆದರೆ, ದುಬಾರಿ ವಾಚ್‌ ಕುರಿತು ಮುಖ್ಯಮಂತ್ರಿಯವರ ಹೇಳಿಕೆಗಳು ಗೊಂದಲದಿಂದ ಕುಡಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆಸ್ತಿ ವಿವರ ಘೋಷಣೆಯಲ್ಲೂ ಮಾಹಿತಿ ಕೊಟ್ಟಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 70 ಲಕ್ಷ ಮೌಲ್ಯದ ಹ್ಯೂಬ್ಲೊಟ್‌ ವಾಚ್‌ ಧರಿಸಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪ್ರಾರಂಭದಲ್ಲಿ ಅದು ಸಾವಿರಾರು ಮೌಲ್ಯದ ವಾಚು ಎಂದು ಹೇಳಿದ್ದ ಮುಖ್ಯಮಂತ್ರಿಯವರು ಆ ನಂತರ ಉಡುಗೊರೆಯಾಗಿ ಬಂದಿದ್ದು ಎಂದು ಸಮರ್ಥಿಸಿಕೊಂಡರು. ಈ ಮೂಲಕ ವಾಚ್‌ನ ಮೂಲ ಮಾಹಿತಿ ಮರೆಮಾಚುವ ಪ್ರಯತ್ನ ನಡೆದಿರುವ ಬಗ್ಗೆ ಅನುಮಾನವಿದೆ.

ವಾಚ್‌ ಕುರಿತಂತೆ ನಾನಾ ವ್ಯಾಖ್ಯಾನಗಳು ಬರುತ್ತಿರುವುದರಿಂದ ರಾಜ್ಯದ ಸಾರ್ವಜನಿಕರ ಹಿತದೃಷ್ಟಿಯಿಂದಲೂ ವಾಚ್‌ನ ಮೂಲ ಕುರಿತು ಸತ್ಯಾಂಶ ಗೊತ್ತಾಗಬೇಕಿದೆ. ಆದಷ್ಟು ಬೇಗ ಪ್ರಕರಣದ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
-ಉದಯವಾಣಿ

Write A Comment