ಕರ್ನಾಟಕ

ಪಂಚಾಯ್ತಿ ಕದನ ಅಂತ್ಯ: ನಾಳೆ ಫ‌ಲಿತಾಂಶ

Pinterest LinkedIn Tumblr

elctionಬೆಂಗಳೂರು: ಎರಡು ಹಂತಗಳಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಶನಿವಾರ ತೆರೆ ಬಿದ್ದಿದೆ. ಎರಡನೇ ಹಂತದಲ್ಲಿ 15 ಜಿಲ್ಲಾ ಪಂಚಾಯಿತಿ ಹಾಗೂ 80 ತಾಲೂಕು ಪಂಚಾಯಿತಿಗೆ ಮತದಾನ ನಡೆದಿದೆ. ಫೆ.23ರ ಮಂಗಳವಾರ ಮತ ಎಣಿಕೆ ನಡೆಯಲಿದೆ. ಯಾವ ಜಿಪಂ, ತಾಪಂ ಯಾವ ಪಕ್ಷದ ಪಾಲಾಗಲಿದೆ ಎಂಬುದು ನಾಳೆಯೇ ತಿಳಿಯಲಿದೆ.

ಹಲವೆಡೆ ಕಾರ್ಯಕರ್ತರ ಹೊಡೆದಾಟ
ಬೆಂಗಳೂರು: ಶನಿವಾರದ ಮತದಾನದ ವೇಳೆ ರಾಜ್ಯದ ಕೆಲವೆಡೆ ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿವೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮೈಲನಹಳ್ಳಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಜೇವರ್ಗಿಯ ಮಲಾಬಾದ್‌ಗಳಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು, ಕಡೂರು ತಾಲೂಕಿನ ಪಂಚನಹಳ್ಳಿ ಹಾಗೂ ಮಂಗಳೂರು ಸಮೀಪದ ಅಡೂxರಿನಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಕೆಲವರು ಗಾಯಗೊಂಡಿದ್ದಾರೆ.

ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದೇ ವೇಳೆ, ಆಳಂದ ತಾಲೂಕಿನ ಜಿಡಗಾ ಜಿಪಂ ಕ್ಷೇತ್ರದ ನೆಹರು ನಗರ ತಾಂಡಾದಲ್ಲಿ ಬಿಜೆಪಿ ಮತ್ತು ಜೆಡಿಯು ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಡಿಯು ಬೆಂಬಲಿಗರ ಎರಡು ವಾಹನಗಳು ಜಖಂಗೊಂಡಿವೆ.

ಮತದಾನ ಬಹಿಷ್ಕಾರ
ಬೆಂಗಳೂರು: ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಉಡುಪಿ ಜಿಲ್ಲೆ ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ನಕ್ಸಲ್‌ ಪೀಡಿತ ಪ್ರದೇಶಗಳಾದ ಶ್ಯಾಮಿಹಕ್ಲು, ಗೋಳಿಕಾಡು, ಹೊರಳಹಕ್ಲು, ಹುಣಸೂರು ತಾಲೂಕಿನ ಹುಣಸೇಗಾಲ, ಚಾಮರಾಜನಗರ ಜಿಲ್ಲೆ ಉಮ್ಮತ್ತೂರು, ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಹೂವಿನಗುಂಡಿ ಗಿರಿಜನ ಕಾಲೋನಿ, ಮೂಡಿಗೆರೆ ತಾಲೂಕಿನ ಹಿರೇಸಿಗರ ಮತ್ತು ಆಲೆಕಾನ್‌ ಹೊರಟ್ಟಿ, ಜೇವರ್ಗಿ ತಾಲೂಕಿನ ವರವಿ, ತಿ.ನರಸೀಪುರ ತಾಲೂಕಿನ ಅಚಾರಯ್ಯನಹುಂಡಿ ಸೇರಿದಂತೆ ಕೆಲವೆಡೆ ಮತದಾರರು ಮತದಾನ ಬಹಿಷ್ಕರಿಸಿದ ಬಗ್ಗೆ ವರದಿಯಾಗಿದೆ.

ಗೆಲುವಿಗಾಗಿ 5 ಕಿ.ಮೀ. ದೀಡ್‌ ನಮಸ್ಕಾರ
ಹರಪನಹಳ್ಳಿ: ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ನೀಲಗುಂದ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಬಿ. ಪರಶುರಾಮಪ್ಪ ಅವರ ಗೆಲುವಿಗಾಗಿ ಪ್ರಾರ್ಥಿಸಿ ಶನಿವಾರ ಮಾದಾಪುರ ಆಂಜನೇಯ ದೇವಸ್ಥಾನದಿಂದ ಹರಪನಹಳ್ಳಿ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದವರೆಗೆ 5 ಕಿ.ಮೀ. ದೂರ ಐವರು ಯುವಕರು ದೀಡ್‌ ನಮಸ್ಕಾರ ಹಾಕಿದರು. ಟ್ಯಾಂಕರ್‌ವೊಂದು ರಸ್ತೆಗೆ ನೀರನ್ನು ಹಾಕಿ, ಶುದ್ಧಿಗೊಳಿಸುತ್ತಾ ಸಾಗುತ್ತಿದ್ದಂತೆ, ಹಿಂದಿನಿಂದ ಈ ಯುವಕರು ನಮಸ್ಕಾರ ಹಾಕುತ್ತಾ ಸಾಗಿದರು. ಕೆಲವರು ಡ್ರಮ್‌ ಸೆಟ್‌ ವಾದ್ಯ ನುಡಿಸುತ್ತಾ ಇವರಿಗೆ ಸಾಥ್‌ ನೀಡಿದರು.

ಮತಗಟ್ಟೆ ಬಳಿ ವಾಮಾಚಾರ
ಕುಷ್ಟಗಿ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದ ಶಾಲೆಯ ಮತಗಟ್ಟೆಯಲ್ಲಿ ಮಾಳಿಗೆ ಮೇಲೆ ಹಸಿರು ಬಟ್ಟೆಯನ್ನು ಸುತ್ತಿಸಿ ಕಟ್ಟಿರುವ ಚಿಕ್ಕ ಬಾಟಲಿ ಕಂಡು ಬಂತು. ಮತಗಟ್ಟೆಯ ಬಳಿ ನವಣೆ ಕಾಳು, ಅರಿಶಿಣ, ಕುಂಕುಮ, ಲಿಂಬೆ ಹಣ್ಣು ಇಡಲಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯರು ವಾಮಾಚಾರದ ವಸ್ತುವನ್ನು ತೆಗೆದು ಸುಟ್ಟು ಹಾಕಿದರು.

ಕಾರು ಜಖಂ: ಪ್ರಜ್ವಲ್‌ ರೇವಣ ವಿರುದ್ಧ ದೂರು
ಹೊಳೆನರಸೀಪುರ: ಹಳೇಕೋಟೆ ಜಿ.ಪಂ. ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಕುಮಾರ್‌ ಅವರ ಕಾರನ್ನು ಜೆಡಿಎಸ್‌ ಯುವ ಮುಖಂಡ ಪ್ರಜ್ವಲ್‌ ರೇವಣ್ಣ ಮತ್ತು ಅವರ ಬೆಂಬಲಿಗರು ಜಖಂಗೊಳಿಸಿದ್ದಾರೆ ಎಂದು ಆರೋಪಿಸಿ ಕಾರಿನ ಮಾಲಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ ರಾತ್ರಿ 9ರ ವೇಳೆ ಸುನೀಲ್‌ ಅವರು ಗ್ರಾಮದ ಕುಮಾರ್‌ ಎಂಬುವರ ಮನೆಯಲ್ಲಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಪ್ರಜ್ವಲ್‌ ರೇವಣ್ಣ ಮತ್ತು ಅವರ ಬೆಂಬಲಿಗರು ಕಾರಿನ ಮೇಲೆ ಕಲ್ಲು ತೂರಿ, ಕಾರನ್ನು ಜಖಂಗೊಳಿಸಿದ್ದಾರೆ.

ನಂತರ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಕಾರಿನ ಮಾಲೀಕ ಕೆ.ಆರ್‌.ಮೋಹನ್‌ ದೂರಿದ್ದಾರೆ. ಈ ಘಟನೆ ಖಂಡಿಸಿ, ಹಳೇಕೋಟೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಳೇಕೋಟೆ ಜಿಪಂ ಜೆಡಿಎಸ್‌ ಅಭ್ಯರ್ಥಿ ಭವಾನಿ ರೇವಣ್ಣ, ಕಾಂಗ್ರೆಸ್‌ ಮುಖಂಡರಿಗೆ ಸೇರಿದ ಕಾರನ್ನು ಪ್ರಜ್ವಲ್‌ ರೇವಣ್ಣ ಜಖಂಗೊಳಿಸಿದ್ದಾರೆ ಎಂಬುದು ಸುಳ್ಳು. ಅವರು ಆ ವೇಳೆಯಲ್ಲಿ ಆ ಗ್ರಾಮದಲ್ಲೇ ಇರಲಿಲ್ಲ. ತಾವು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಖಚಿತ ಆಗಿರುವುದರಿಂದ ಸೋಲುವ ಹತಾಶೆಯಿಂದ ಕಾಂಗ್ರೆಸ್‌ ಮುಖಂಡರು ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದರು.

ಉದಯವಾಣಿ

Write A Comment