ಕರ್ನಾಟಕ

ಕಳ್ಳತನಕ್ಕೆ ವಿಮಾನದಲ್ಲಿ ಬರುವ ಚೋರರು!

Pinterest LinkedIn Tumblr

thiefsಬೆಂಗಳೂರು: ಇವರು ಅಂತಿಂಥ ಖದೀಮರಲ್ಲ. ಬೆಂಗಳೂರು, ಮುಂಬೈ, ದೆಹಲಿಯಂಥ ದೊಡ್ಡ ದೊಡ್ಡ ನಗರಗಳಲ್ಲೇ ಇವರ ಕೈಚಳಕ. ವಿಮಾನದಲ್ಲೇ ಓಡಾಟ. ಒಮ್ಮೆ ಬಂದರೆ ಕೆ.ಜಿ.ಗಟ್ಟಲೆ ಬೆಳ್ಳಿ-ಬಂಗಾರ ದೋಚಿಕೊಂಡೇ ದೆಹಲಿಗೆ ಹಿಂದಿರುಗುವ ಖತರ್ನಾಕ್ ತಂಡ. ಆದರೆ, ಅದೃಷ್ಟ ಕೈಕೊಟ್ಟು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಉತ್ತರ ಪ್ರದೇಶದ ಅರ್ಜುನ್ (24), ನಕುಲ್​ಸರ್ಕಾರ್ (23), ಅರವಿಂದ (30) ಮತ್ತು ದೆಹಲಿಯ ಸುನೀಲ್​ಕುಮಾರ್ ಮಿಶ್ರಾ (30) ಬಂಧಿತರು. ಕಳ್ಳರ ತಂಡದ ನಾಯಕ ಖುರ್ಷಿದ್ ಖಾನ್ (30) ಹಿಡಿಯಲು ಹೋದ ಪೊಲೀಸರನ್ನು ಕೊಲ್ಲಲು ಯತ್ನಿಸಿ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಜ.15ರ ರಾತ್ರಿ ವಿಜಯನಗರ ಸಮೀಪದ ಪಟ್ಟೇಗಾರಪಾಳ್ಯ ಮುಖ್ಯರಸ್ತೆಯಲ್ಲಿ ಬಂಧಿಸಲಾಯಿತು. ಬಂಧಿತರ ಜತೆ ಕಾರಿನಲ್ಲೇ ಇದ್ದ ಆರೋಪಿ ಖುರ್ಷಿದ್ ಖಾನ್ ಹಿಡಿಯಲು ಹೋದ ಪೊಲೀಸರು ಹಾಗೂ ಸಾರ್ವಜನಿಕರ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಬೆಂಗಳೂರು, ದೆಹಲಿ, ಉತ್ತರ ಪ್ರದೇಶ, ಮುಂಬೈ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಕಳವು ಕೃತ್ಯವೆಸಗಿದ್ದಾರೆ. ತಪ್ಪಿಸಿಕೊಂಡಿರುವ ಖುರ್ಷಿದ್ ಮುಂಬೈನ ಹವಾಲ ದಂಧೆಯ ಕಿಂಗ್​ಪಿನ್ ಅಹಮದ್ ಶಕೀಲ್ ಅಲಿಯಾಸ್ ಅಖಿಲ್ ಮಾಮನ ಶಿಷ್ಯ. 2013ರಲ್ಲಿ ಭೂಗತ ಪಾತಕಿ ನಯಾಜ್ ಗ್ಯಾಂಗ್ ಅಖಿಲ್ ಮಾಮನನ್ನು

ಗುಂಡಿಟ್ಟು ಹತ್ಯೆ ಮಾಡಿತ್ತು. ಇದಾದ ಬಳಿಕ ಖುರ್ಷಿದ್ ತನ್ನದೇ ಗುಂಪು ಕಟ್ಟಿಕೊಂಡು ಅಪರಾಧ ಕೃತ್ಯ ಮುಂದುವರಿಸಿದ್ದ. ಬಂಧಿತ ಸುನೀಲ್​ಕುಮಾರ್ ಕಳವು ತಂಡಕ್ಕೆ ಯುವಕರನ್ನು ಸೇರಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಹಾಗೂ ರೈಲುಗಳಲ್ಲಿ ನಗರಕ್ಕೆ ಆಗಮಿಸುವ ಆರೋಪಿಗಳು ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದರು. ರಾತ್ರಿ ಹೊತ್ತಲ್ಲಿ ನುಗ್ಗಿ ಆಭರಣ ದೋಚುತ್ತಿದ್ದರು. 2006-07ರಲ್ಲಿ ಅಖಿಲ್ ಮಾಮನ ಸೂಚನೆಯಂತೆ ನಗರಕ್ಕೆ ಬಂದಿದ್ದ ಖುರ್ಷಿದ್ ತಂಡ ಒಂದೇ ದಿನ ನಾಲ್ಕೈದು ಮನೆಗಳಲ್ಲಿ ಕಳ್ಳತನ ಮಾಡಿ ಹೋಗಿತ್ತು. 2008ರಲ್ಲಿ ಸುನೀಲ್​ಕುಮಾರ್ ಮಿಶ್ರಾ ಸಿಕ್ಕಿಬಿದ್ದಿದ್ದ. ಆದರೆ, ಖುರ್ಷಿದ್ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸುನೀಲ್ ಜಾಮೀನಿನ ಮೇಲೆ ಬಿಡುಗಡೆಯಾಗಿ ತನ್ನ ಕೃತ್ಯ ಮುಂದುವರಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಸಿಪಿ ಕೊರಳಪಟ್ಟಿ ಹಿಡಿದರೂ ಕಾರು ನಿಲ್ಲಿಸಲಿಲ್ಲ!

ಮನೆಗಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಲಾಬೂರಾಮ್ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಜ.15ರಂದು ಪಟ್ಟೇಗಾರಪಾಳ್ಯದಲ್ಲಿ ಗಸ್ತು ತಿರುಗುತ್ತಿದ್ದ ವಿಜಯನಗರ ಉಪ ವಿಭಾಗ ಎಸಿಪಿ ಉಮೇಶ್ ಅವರ ಕಣ್ಣಿಗೆ ಕಾರಿನಲ್ಲಿ ಕುಳಿತಿದ್ದ ಖುರ್ಷಿದ್​ಖಾನ್ ಕಂಡಿದ್ದ. ಹಳೆ ಆರೋಪಿಯಾದ ಕಾರಣ ಆತನ ಚಹರೆ ನೆನಪಿತ್ತು. ತಕ್ಷಣ ಎಚ್ಚೆತ್ತುಕೊಂಡ ಅವರು ಮೂವರು ಇನ್ಸ್​ಪೆಕ್ಟರ್ ಸೇರಿ 25ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಸುತ್ತುವರಿದು ಬಂಧಿಸಲು ಹೋದಾಗ ಪರಾರಿಗೆ ಯತ್ನಿಸಿದ್ದ. ಈ ವೇಳೆ ಎಸಿಪಿ ಉಮೇಶ್ ಅವರು ಕಾರಿನಲ್ಲಿದ್ದ ಖುರ್ಷಿದ್ ಕೊರಳಪಟ್ಟಿ ಹಿಡಿದುಕೊಂಡಿದ್ದರು. ಆರೋಪಿ ವಾಹನ ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದ. ಆತನನ್ನು ಹೊರಗೆಳೆಯಲಾಗದೆ ಒಂದಷ್ಟು ದೂರ ಹೋದ ಬಳಿಕ ಕೊರಳಪಟ್ಟಿ ಬಿಟ್ಟು ವೈರ್​ಲೆಸ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿ, ಜೀಪ್​ನಲ್ಲಿ ಬೆನ್ನತ್ತಿದ್ದರು. ಪಟ್ಟೇಗಾರಪಾಳ್ಯ ಮುಖ್ಯರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿದ ಪೊಲೀಸರ ಮೇಲೆಯೇ ಹತ್ತಿಸಿ ಹತ್ಯೆಗೆ ಯತ್ನಿಸಿದ್ದ. ಬಳಿಕ ವಾಹನದಿಂದ ಹೊರಜಿಗಿದು ಓಡಿದ್ದ. ಬೆನ್ನತ್ತಿ ಬಂದ ಪೊಲೀಸರು ಹಾಗೂ ಸಾರ್ವಜನಿಕರ ಮೇಲೆ ಸ್ಪ್ಯಾನರ್​ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದ. ಕಾರಲ್ಲಿ ಕುಳಿತಿದ್ದ ಮೂವರನ್ನು ವಶಕ್ಕೆ ಪಡೆಯಲಾಯಿತು. ನಂತರ ಖುರ್ಷಿದ್​ನನ್ನು ಹುಡುಕಿಕೊಂಡು ದೆಹಲಿಗೆ ಹೋದಾಗ ಮತ್ತೊಬ್ಬ ಆರೋಪಿ ಸುನೀಲ್​ಕುಮಾರ್ ಮಿಶ್ರಾ ಸಿಕ್ಕಿಬಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Write A Comment