ಕರಾಚಿ: ಅಗ್ರಮಾನ್ಯ ಮಾಜಿ ಕ್ರಿಕೆಟಿಗ ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ತಂಡ ಮೆಂಟರ್ ಸ್ಥಾನಕ್ಕೆ ನೇಮಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉತ್ಸುಕವಾಗಿದೆ.
ಮುಂಬರುವ ಏಷ್ಯಾ ಕಪ್ ಹಾಗೂ ಐಸಿಸಿ ಟಿ–20 ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಿಚರ್ಡ್ಸ್ ಅವರ ನೇಮಕಕ್ಕೆ ಮಾತುಕತೆ ನಡೆಯುತ್ತಿದೆ ಎಂದು ಪಿಸಿಬಿಯ ಉನ್ನತ ಮೂಲಗಳು ಹೇಳಿವೆ.
‘ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಮೆಂಟರ್ ಆಗಿ ನಿರ್ವಹಿಸುತ್ತಿರುವ ರಿಚರ್ಡ್ಸ್ ಅವರ ಕಾರ್ಯಶೈಲಿಯಿಂದ ಪಿಸಿಬಿ ತುಂಬಾ ಪ್ರಭಾವಿತಗೊಂಡಿದೆ. ಏಷ್ಯಾ ಕಪ್ ಹಾಗೂ ಟ್ವೆಂಟಿ–20 ವಿಶ್ವಕಪ್ ಟೂರ್ನಿಗೆ ರಾಷ್ಟ್ರೀಯ ತಂಡದ ಮೆಂಟರ್ ಆಗಿ ನೇಮಿಸಿಕೊಳ್ಳಲು ಬಯಸುತ್ತಿದೆ’ ಎಂದು ಮೂಲಗಳು ಹೇಳಿವೆ.
ಆದರೆ, ರಿಚರ್ಡ್ಸ್ ಅವರ ನೇಮಕಕ್ಕೆ ಕೆಲವು ತೊಡಕುಗಳು ಎದುರಾಗಿವೆ. ಅವರು ವಿಶ್ವಕಪ್ ಟೂರ್ನಿಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.