ಬೆಂಗಳೂರು, ಫೆ.18-ಎರಡನೇ ಹಂತದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗೆಸ್ಥ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯದ 15 ಜಿಲ್ಲೆಗಳ 531 ಜಿಪಂ ಸ್ಥಾನಗಳು ಹಾಗೂ ತಾಪಂನ 1939 ಸ್ಥಾನಗಳಿಗೆ ಒಟ್ಟು 17698 ಮತಗಟ್ಟೆಗಳನ್ನು ಸ್ಥಾಪಿಸಲಗಿದೆ. 3626 ಅತಿ ಸೂಕ್ಷ್ಮ, 4097 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬೀದರ್, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಫೆ.20ರಂದು ಮತದಾನ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ 100243 ಮತಗಟ್ಟೆ. ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಾಗಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. 14274895 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. 7052923 ಸ್ತ್ರೀಯರು, 7221522 ಪುರುಷ ಮತದಾರರಿದ್ದಾರೆ. ಇತರರು 400 ಮಂದಿ ಮತದಾರರಿದ್ದಾರೆ. ಗಡಿ ಭಾಗದ ಜಿಲ್ಲೆಗಳು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಿಗೆ ಸಿಆರ್ಪಿಎಫ್ ಪೊಲೀಸ್ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ನಾಳೆ ಬೆಳಗ್ಗೆಯಿಂದಲೇ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಇಂದು ಚುನಾವಣಾ ಬಹಿರಂಗ ಪ್ರಚಾರ ಮುಗಿದಿದ್ದು, ಇನ್ನೇನಿದ್ದರೂ ಮನೆ ಮನೆ ಪ್ರಚಾರ ಮಾತ್ರ ನಡೆಯುತ್ತದೆ. ಇದುವರೆಗೆ ನಡೆದ ಚುನಾವಣಾ ಪ್ರಚಾರಕ್ಕಿಂತ ಈ ಎರಡು ದಿನಗಳಲ್ಲಿ ನಡೆಯುವ ಪ್ರಚಾರವೇ ವಿಶೇಷವಾಗಿತ್ತದೆ.
ಎಲ್ಲಾ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಎಲ್ಲಾ ಹಳ್ಳಿ, ಹೋಬಳಿ, ತಾಲ್ಲೂಕುಗಳಲ್ಲಿ ಪಕ್ಷಗಳ ಮುಖಂಡರು, ಬೆಂಬಲಿಗರು, ತಂಡಗಳನ್ನು ರಚಿಸಿಕೊಂಡು ಹಣ, ಮದ್ಯ, ಉಡುಗೊರೆ ಹಂಚಿಕೆ ಮೂಲಕ ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನ ತೀವ್ರಗೊಳಿಸಿದ್ದಾರೆ. ಪ್ರತಿ ಹಳ್ಳಿ, ಹಳ್ಳಿಗಳ ಪಂಚಾಯ್ತಿ ಕಟ್ಟೆಗಳಲ್ಲಿ, ದೇವಾಲಯಗಳಲ್ಲಿ, ಡೈರಿಗಳಲ್ಲಿ, ಮಹಿಳಾ ಸಂಘಗಳಲ್ಲಿ , ಸ್ತ್ರೀ ಶಕ್ತಿ ಸಂಘಗಳಿಗೆ ವಿವಿಧ ಪಕ್ಷಗಳ ಮುಖಂಡರು ಹಣ ಹಂಚಿಕೆಯಲ್ಲಿ ತೊಡಗಿದ್ದು ಕಂಡುಬಂತು.
ಹಲವು ಪಕ್ಷದವರು, ಯುವಕ ಸಂಘದವರು, ಸ್ತ್ರೀ ಶಕ್ತಿ ಸಂಘಗಳ ಮುಖಂಡರನ್ನು ಪ್ರವಾಸಕ್ಕೆ ಕಳುಹಿಸಿದ್ದು, ಚುನಾವಣೆಯ ದಿನ ಹಿಂದಿರುಗಿ ಬಂದು ತಮ್ಮ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ. ಚುನಾವಣಾ ಆಯೋಗ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅಭ್ಯರ್ಥಿಗಳು ಮತದಾರರನ್ನು ಆಕರ್ಷಿಸಲು ನಾನಾ ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಚುನಾವಣಾ ಆಯೋಗ ಜಿಪಂ ಕ್ಷೇತ್ರಕ್ಕೆ 1ಲಕ್ಷರೂ ವೆಚ್ಚ ಮಿತಿಗೊಳಿಸಿದರೈ 25-50 ಲಕ್ಷ ರೂ ಬೇಕಾಗಲಿದೆ. ತಾಪಂಗೆ 50 ಸಾವಿರ ರೂ ನಿಗದಿಯಾಗಿದ್ದು, 10 ಲಕ್ಷಕ್ಕೂ ಹೆಚ್ಚು ಹಣ ವೆಚ್ಚವಾಗುತ್ತದೆ. ಈ ಸಾಮರ್ಥ್ಯವಿರುವವರೇ ಚುನಾವಣಾ ಆಖಾಡಕ್ಕೆ ಇಳಿಯಬೇಕು. ಒಟ್ಟಾರೆ ಈ ಚುನಾವಣೆಯಲ್ಲಿ ಹಣ ನೀರಿನಂತೆ ಖರ್ಚಾಗುತ್ತಿದೆ.