ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ನಕ್ಸಲ್ ಭಿತ್ತಿಪತ್ರ ಪತ್ತೆಯಾಗಿದ್ದು, ಇದರಲ್ಲಿ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವಂತೆ ಬರೆಯಲಾಗಿದೆ.
ಶೃಂಗೇರಿ ಸಮೀಪದ ಬುಕ್ಕಡಿಬೈಲು ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಭಿತ್ತಿಪತ್ರ ಪತ್ತೆಯಾಗಿದ್ದು, ಚುನಾವಣೆ ಬಹಿಷ್ಕರಿಸಿ ಎಂದು ಒತ್ತಾಯಿಸಲಾಗಿದೆ. ಗ್ರಾಮದ ವಾಟರ್ ಟ್ಯಾಂಕ್ ಹಾಗೂ ಅಂಗಡಿಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸಿ ಚುನಾವಣೆ ಬಹಿಷ್ಕರಿಸುವಂತೆ ಹೇಳಲಾಗಿದೆ. ಭಿತ್ತಿಪತ್ರಗಳಲ್ಲಿ ಸರ್ಕಾರದ ಅನೇಕ ನೀತಿಗಳಿಗೆ ವಿರೋಧ ವ್ಯಕ್ತಪಡಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈಗಾಗಲೇ ಶೃಂಗೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಎಎನ್ಎಫ್ ತಂಡವೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತಲಗಾರು ಉಮೇಶ್ ಎನ್ನುವವರಿಗೆ ಸೇರಿದ ಅಂಗಡಿ ಗೋಡೆಗಳ ಮೇಲೆ, ಸಮೀಪದ ವಾಟರ್ ಟ್ಯಾಂಕ್ ಮೇಲೆ ಭಿತ್ತಿ ಪತ್ರ ಅಂಟಿಸಲಾಗಿದೆ.
ಭಿತ್ತಿಪತ್ರಗಳ ಮೇಲೆ ಸಾಕಷ್ಟು ಬೇಡಿಕೆಗಳನ್ನು ಈಡೇರಿಸುವಂತೆ ಬರೆಯಲಾಗಿದ್ದು, ಒಂದಮ್ಮೆ ಈಡೇರದಿದ್ದಲ್ಲಿ ಮತದಾನ ಬಹಿಷ್ಕರಿಸಿ ಎಂದು ಒತ್ತಾಯಿಸಲಾಗಿದೆ.
ಬೇಡಿಕೆಗಳು ಹೀಗಿವೆ…
ಜನವಿರೋಧಿ ಹುಲಿ ಯೋಜನೆ ರದ್ದುಗೊಳಿಸಬೇಕು.
ಕಸ್ತೂರಿಗಂಗನ್ ವರದಿಗೆ ವಿರೋಧವಿದೆ, ಮಹತ್ವ ನೀಡಬಾರದು
ಸ್ವಇಚ್ಛೆಯಿಂದ ಸ್ಥಳಾಂತರ ಮಾಡಿಕೊಳ್ಳಲಿ, ಬಲವಂತದಿಂದ ಒಕ್ಕಲೆಬ್ಬಿಸಿದರೆ ಸಹಿಸಲ್ಲ.
ಪ್ರತಿಯೊಂದು ಗ್ರಾಮಕ್ಕೂ ಶಾಶ್ವತವಾದ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು.
ವಿದ್ಯುತ್ ಸಂಪರ್ಕ ಕಲ್ಪಿಸಬೇಕು.
ಒಳಚರಂಡಿ ಹಾಗೂ ಟರ್ಬ್ ದುರಸ್ತಿ, ರಸ್ತೆ ಡಾಂಬರೀಕರಣ ಆಗಬೇಕು.
ಸಾಗುವಳಿದಾರರಿಗೆ ಹಂಗಾಮಿ ಹಕ್ಕು ಪತ್ರ ಬೇಡ, ಕಾಯಂ ಹಕ್ಕು ಪತ್ರ ನೀಡಿ.
ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮಿಗೆ ಹತ್ತಿರದ ಸೇತುವೆ ನಿರ್ಮಾಣ ತುರ್ತು ಆಗಬೇಕು