ಬೆಂಗಳೂರು, ಫೆ.17-ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜಾಲಹಳ್ಳಿ ಪೊಲೀಸರು ಬಂಧಿಸಿ 1.90 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಜೆ.ಪಿ.ನಗರದ ವಿನಾಯಕನಗರ 4ನೆ ಕ್ರಾಸ್ ನಿವಾಸಿ ಅಬ್ರಹಾಂ ಶರೀಫ್(19) ಬಂಧಿತ ಬೈಕ್ ಕಳ್ಳ.ಜಾಲಹಳ್ಳಿ ವ್ಯಾಪ್ತಿಯ ಎಚ್.ಎಂ.ಟಿ ಮುಖ್ಯರಸ್ತೆಯಲ್ಲಿ ಫೆ.15ರಂದು ರಾತ್ರಿ 8.05ರಲ್ಲಿ ವ್ಹೀಲಿಂಗ್ ಮಾಡಿಕೊಂಡು ಬೈಕ್ ಚಲಾಯಿಸುತ್ತಿದ್ದವರನ್ನು ಹಿಡಿದು ವಿಚಾರಣೆ ಮಾಡುತ್ತಿದ್ದಾಗ ದ್ವಿಚಕ್ರ ವಾಹನದ ಬಗ್ಗೆ ಸರಿಯಾದ ಮಾಹಿತಿ ನೀಡದೆ ದಾಖಲೆಗಳೂ ಇಲ್ಲದಿರುವುದನ್ನು ಗಮನಿಸಿ ಪೊಲೀಸರು ಈ ಬೈಕನ್ನು ಕಳ್ಳತನ ಮಾಡಿರಬಹುದೆಂಬ ಶಂಕೆಯಿಂದ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ದ್ವಿಚಕ್ರ ವಾಹನಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಪೆಟ್ರೋಲ್ ಮುಗಿಯುವವರೆಗೂ ವ್ಹೀಲಿಂಗ್ ಮಾಡಿ ನಂತರ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಈತನ ಬಂಧನದಿಂದ ಕುಮಾರಸ್ವಾಮಿ ಲೇಔಟ್, ಬಸವನಗುಡಿ ವ್ಯಾಪ್ತಿಯಲ್ಲಿ ನಡೆದಿದ್ದ 5 ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಜಾಲಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ವೆಂಕಟೇಶ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.