ಬೆಂಗಳೂರು: ರಾಜ್ಯದಲ್ಲಿ ಸಿ.ಎಂ. ಇಬ್ರಾಹಿಂ ಅವರ “ರೋಲೆಕ್ಸ್ ವಾಚ್’ ಹಗರಣ ಹೊರತುಪಡಿಸಿದರೆ ‘ಉಡುಗೊರೆ’ಯಿಂದ ಅಧಿಕಾರ ಕಳೆದುಕೊಂಡ ಉದಾಹರಣೆಯಿಲ್ಲ. ಅದರಲ್ಲೂ ಖುದ್ದು ಮುಖ್ಯಮಂತ್ರಿಯೇ ಬೆಲೆಬಾಳುವ ವಜ್ರಸಹಿತ ವಾಚ್ “ಉಡುಗೊರೆ’ ಪಡೆದ ಆರೋಪಕ್ಕೆ ಸಿಲುಕಿರುವುದಂತೂ ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು.
ಉಡುಗೊರೆ ಪಡೆದಿದ್ದಕ್ಕೆ ಅಧಿಕಾರ ಕಳೆದುಕೊಂಡ ಪ್ರಕರಣಗಳು ದೇಶದಲ್ಲೂ ವಿರಳ. ತಮಿಳುನಾಡಿನಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಅಧಿಕಾರ ಕಳೆದುಕೊಂಡ ಜಯಲಲಿತಾ ಬಳಿ ಬೆಲೆಬಾಳುವ ರೇಷ್ಮೆ ಸೀರೆಗಳು, ಆಭರಣಗಳು ಸಿಕ್ಕಿದ್ದವಾದರೂ ಅವು ಉಡುಗೊರೆಯಾಗಿರಲಿಲ್ಲ. ಅದೊಂದೇ ಕಾರಣಕ್ಕಾಗಿ ಅಧಿಕಾರ ಕಳೆದುಕೊಂಡಿರಲಿಲ್ಲ.
ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರಿಗೆ “ಬಾಟ್ಲಿಂಗ್’ ಹಗರಣ, ಎಸ್. ಬಂಗಾರಪ್ಪ ಅವರಿಗೆ “ಕ್ಲಾಸಿಕ್ ಕಂಪ್ಯೂಟರ್ ಹಗರಣ’, ವೀರಪ್ಪ ಮೊಲಿ ಅವರಿಗೆ ಟೇಪ್ ಹಗರಣ ಹಾಗೂ ಯಡಿಯೂರಪ್ಪ ಅವರಿಗೆ ಅಕ್ರಮ ಗಣಿಗಾರಿಕೆ- ಡಿ’ನೋಟಿಫಿಕೇಷನ್ ಪ್ರಕರಣ ಮುಳುವಾಗಿದ್ದವು. ಇನ್ನು, ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯ, ಸದನದಲ್ಲಿ ನೀಲಿ ಸಿನೆಮಾ ವೀಕ್ಷಣೆ ಆರೋಪದಲ್ಲಿ ಸಚಿವರಿಗೆ ಕುತ್ತು ತಂದ ಪ್ರಕರಣಗಳು ರಾಜ್ಯದಲ್ಲಿ ಸಾಕಷ್ಟಿವೆ.
ಆದರೆ, “ಉಡುಗೊರೆ’ಯ ಪ್ರಕರಣ ಸಿಎಂ ಇಬ್ರಾಹಿಂ ಅವರೊಬ್ಬರದು ಮಾತ್ರ. ಸಿ.ಎಂ.ಇಬ್ರಾಹಿಂ ಅವರು ಗುಂಡೂರಾವ್ ಸಂಪುಟದಲ್ಲಿ ಸಚಿವರಾಗಿದ್ದಾಗ ದುಬೈಗೆ ಹೋಗಿದ್ದಾಗ ರೋಲೆಕ್ಸ್ ವಾಚ್ ತಂದಿದ್ದರು. ಆ ವಾಚ್ ದುಬೈಯ ಶೇಕ್ ಉಡುಗೊರೆಯಾಗಿ ಕೊಟ್ಟಿದ್ದರು ಎಂಬುದು ದೊಡ್ಡ ಚರ್ಚೆಯಾಗಿತ್ತು. ಆಗ ವಿಧಾನಪರಿಷತ್ ವಿಪಕ್ಷ ನಾಯಕರಾಗಿದ್ದ ಎ.ಕೆ.ಸುಬ್ಬಯ್ಯ ಅವರು ವಿಷಯ ಪ್ರಸ್ತಾವಿಸಿ ಮೂರು ದಿನ ಚರ್ಚೆ ನಡೆದು ಕೊನೆಗೆ ಇಬ್ರಾಹಿಂ ಸಚಿವ ಸ್ಥಾನ ಕಳೆದುಕೊಳ್ಳುವಂತಾಗಿತ್ತು.
33 ವರ್ಷಗಳ ಅನಂತರ ರಾಜ್ಯದಲ್ಲಿ ಮತ್ತೆ ವಾಚ್ ಉಡುಗೊರೆ ಪ್ರಕರಣ ಸದ್ದು ಮಾಡುತ್ತಿದೆ. 50 ಸಾವಿರ ರೂ.ಗಿಂತ ದೊಡ್ಡ ಮೊತ್ತದ ಉಡುಗೊರೆ ಸ್ವೀಕಾರ ಮಾಡಿದರೆ ಆಸ್ತಿ ವಿವರದಲ್ಲಿ ಘೋಷಣೆಯಾಗಬೇಕು ಎಂಬ ನಿಯಮವಿದೆ. ಸಿದ್ದರಾಮಯ್ಯ ಆಸ್ತಿ ವಿವರ ಕೊಡುವಾಗ ವಾಚ್ ಉಡುಗೊರೆ ಬಗ್ಗೆ ಮಾಹಿತಿ ನೀಡಿರಲಿಲ್ಲ, ಮುಖ್ಯಮಂತ್ರಿಯವರಿಗೆ ಇಷ್ಟು ಬೆಲೆ ಬಾಳುವ ಉಡುಗೊರೆ ಕೊಟ್ಟವರ್ಯಾರು? ಯಾವ ಕಾರಣಕ್ಕೆ ಕೊಟ್ಟರು ಎಂಬುದು ಬಹು ಚರ್ಚಿತ ವಿಷಯವಾಗಿದೆ. ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವುದರಿಂದ ಮುಂದೇನಾಗಬಹುದು ಎಂಬುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್‌ಗೆ ಕಸಿವಿಸಿ: ಇತ್ತೀಚೆಗಷ್ಟೇ ಕಾಂಗ್ರೆಸ್ ಆಡಳಿತ ಇರುವ ನೆರೆಯ ಕೇರಳದಲ್ಲಿ ಸೌರಶಕ್ತಿ ಯೋಜನೆ ಸಂಬಂಧ ಖಾಸಗಿ ಕಂಪೆನಿಗೆ ಲಾಭ ಮಾಡಿಕೊಡಲು 1.9 ಕೋಟಿ ರೂ. ಪಡೆದ ಆರೋಪ ಅಲ್ಲಿನ ಮುಖ್ಯಮಂತ್ರಿ ಊಮ್ಮನ್ ಚಾಂಡಿ ವಿರುದ್ಧ ಕೇಳಿ ಬಂದಿತ್ತು. ಆ ಪ್ರಕರಣ ಕೇರಳವಷ್ಟೇ ಅಲ್ಲದೆ ದೇಶಾದ್ಯಂತ ಸುದ್ದಿಯಾಗಿತ್ತು. ಈಗ ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 70 ಲಕ್ಷ ರೂ. ಮೌಲ್ಯದ ಹ್ಯೂಬ್ಲೆಟ್ ವಾಚ್ ಉಡುಗೊರೆಯಾಗಿ ಪಡೆದಿರುವ ಆರೋಪ ಕೇಳಿಬಂದಿದೆ. ಪ್ರಧಾನಿ ನರೇಂದ್ರಮೋದಿ ಹತ್ತು ಲಕ್ಷ ರೂ. ಮೌಲ್ಯದ ಸೂಟ್ ಧರಿಸುವ ಬಗ್ಗೆ ಆರೋಪ ಮಾಡಿದ್ದ ಕಾಂಗ್ರೆಸ್‌ಗೆ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಕಸಿವಿಸಿಯುಂಟುಮಾಡಿದೆ.
ಪಾರಾಗಲು ದಾರಿ ಹುಡುಕಾಟ : ಉಡುಗೊರೆ ಸರಕಾರಕ್ಕೆ ದಾನ ?
ತನಗೆ ಬಂದ ಎಲ್ಲ ಉಡುಗೊರೆಗಳನ್ನು ಸಿಎಂ ಅವಧಿ ಪೂರ್ಣಗೊಳಿಸಿದ ಅನಂತರ ಸರಕಾರದ ವಶಕ್ಕೆ ಬಿಟ್ಟುಬಿಡುವ ಚಿಂತನೆ ಸಿಎಂ ಮತ್ತು ಅವರ ಆಪ್ತ ವಲಯದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ವಾಚ್ ಸಹಿತ ಹಲವು ಉಡುಗೊರೆಗಳು ಸಿಎಂ ಅವರಿಗೆ ಬಂದಿವೆ ಎನ್ನಲಾಗಿದೆ. ಈ ಪೈಕಿ ಇನ್ನಷ್ಟು ವಾಚ್‌ಗಳು, ಪೆನ್ನುಗಳು, ಕೂಲಿಂಗ್ ಕನ್ನಡಕಗಳು ಇತ್ಯಾದಿ ಸೇರಿವೆ. ಈ ಉಡುಗೊರೆಗಳು ಬಂದಿರುವುದು ಮುಖ್ಯಮಂತ್ರಿ ಹುದ್ದೆಗೇ ಹೊರತು ಸಿದ್ದರಾಮಯ್ಯಗೆ ಅಲ್ಲ. ಹೀಗಾಗಿ ಸಿಎಂ ಹುದ್ದೆಯಲ್ಲಿ ರುವವರೆಗೂ ಈ ಉಡುಗೊರೆಗಳನ್ನು ಬಳಸಿ ಅನಂತರ ಅವನ್ನು ಸಚಿವ ಸಂಪುಟ ಕೋಣೆಯಲ್ಲಿ ಮುಂದಿನ ಮುಖ್ಯಮಂತ್ರಿ ಬಳಕೆಗಾಗಿ ಬಿಟ್ಟು ಬರುವ ಚಿಂತನೆಯೂ ಇದೆ ಎನ್ನಲಾಗಿದೆ.
-ಉದಯವಾಣಿ