ಬಹುಶಃ ನಿರ್ದೇಶಕ ಗುರುಪ್ರಸಾದ್ ಅವರು ಚಿತ್ರದ ಹೆಸರನ್ನು ಬದಲಾಯಿಸಿರಬೇಕು ಎಂಬ ನಿರ್ಧಾರಕ್ಕೆ ಜನ ಬಂದಿದ್ದರು. ಅದಕ್ಕೆ ಕಾರಣ, ಕಳೆದ ವಾರ ಅವರು ನೀಡಿದ ಜಾಹೀರಾತು. ಅದರಲ್ಲಿ “ನಾ ನಿನ್ನ ಮರೆಯಲಾರೆ’ ಎಂಬ ಹೆಸರು ಬಲು ದೊಡ್ಡದಾಗಿತ್ತು. ಇನ್ನು “ಎರಡನೆಯ ಸಲ’ ಎಂಬ ಹೆಸರು ಅತಿ ಚಿಕ್ಕದಾಗಿತ್ತು. ಅದೇ ಕಾರಣಕ್ಕೆ, ಗುರುಪ್ರಸಾದ್ ತಮ್ಮ “ಎರಡನೆಯ ಸಲ’ ಚಿತ್ರದ ಹೆಸರನ್ನು ಬದಲಿಸಿ, “ನಾ ನಿನ್ನ ಮರೆಯಲಾರೆ’ ಎಂಬ ಹೆಸರನ್ನು ಇಟ್ಟಿರಬಹುದು ಎಂಬ ಸುದ್ದಿಯಾಗಿತ್ತು. ಆದರೆ, ಇದೊಂದು ಗಿಮಿಕ್ ಎನ್ನುತ್ತಾರೆ ಗುರುಪ್ರಸಾದ್.
“ನಾನೆಲ್ಲೂ ಚಿತ್ರದ ಹೆಸರನ್ನು ಬದಲಾಯಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಇಷ್ಟಕ್ಕೂ ಚಿತ್ರದ ಹೆಸರು ಬದಲಾಯಿಸುವ ಉದ್ದೇಶವೂ ನನಗಿಲ್ಲ. ಚಿತ್ರತಂಡದ ಎಲ್ಲರಿಗೂ ಇಷ್ಟವಾಗಿರುವ ಹೆಸರು ಇದು. ನನ್ನ ಪ್ರತಿ ಚಿತ್ರಕ್ಕೂ ಹೊಸ ಹೊಸ ಕ್ಯಾಪ್ಶನ್ ಕೊಡುತ್ತಿದ್ದೆ. ಅದರ ಮುಂದುವರೆದ ಭಾಗ ಇದು. ಕ್ರಿಯೇಟಿವ್ ಪ್ರಚಾರದ ಸಲುವಾಗಿ ಈ ಬಾರಿ ಕೆಲವು ಹಿಟ್ ಚಿತ್ರಗಳ ಟೈಟಲ್ಗಳನ್ನು ಬಳಸಿಕೊಳ್ಳುತ್ತಿದ್ದೇನೆ ಅಷ್ಟೇ. “ಮಿಲನ’, “ದಾರಿ ತಪ್ಪಿದ ಮಗ’, “ಅನುಭವ’, “ನಾ ನಿನ್ನ ಮರೆಯಲಾರೆ’ ಚಿತ್ರದ ಫಾಂಟ್ಗಳನ್ನು ನನ್ನ ಚಿತ್ರದ ಪೋಸ್ಟರ್ನಲ್ಲಿ ಯಥಾವತ್ತಾಗಿ ಬಳಸಿಕೊಳ್ಳುತ್ತಿದ್ದೇನೆ. ಅವೆಲ್ಲಾ ನಾನು ಬಹಳವಾಗಿ ಮೆಚ್ಚಿಕೊಂಡ ಚಿತ್ರಗಳು. ಅದನ್ನೇ ಈ ಬಾರಿ ನನ್ನ ಚಿತ್ರದ ಪೋಸ್ಟರ್ನಲ್ಲಿ ಬಳಸಿಕೊಳ್ಳುತ್ತಿದ್ದೇನೆ.
ಒಂದೊಂದು ಚಿತ್ರದ ಹೆಸರು ಒಂದೊಂದು ಪೋಸ್ಟರ್ನಲ್ಲಿರುತ್ತದೆ. ಕೆಳಗೆ “ಎರಡನೆ ಸಲ’ ಎಂದಿರುತ್ತದೆ. ಇದರಿಂದ ಯಾರನ್ನೋ ನೋಯಿಸುವ ಉದ್ದೇಶ ನನಗೆ ಖಂಡಿತಾ ಇಲ್ಲ. ಆ ಸಿನಿಮಾಗಳಿಗೆ ನಾನು ಕೊಡುತ್ತಿರುವ ಗೌರವ. ಈಗಾಗಲೇ ಆ ಚಿತ್ರಗಳಿಗೆ ಸಂಬಂಧಪಟ್ಟವರಿಂದ ಅನುಮತಿ ಪಡೆದು, ಹೆಸರುಗಳನ್ನು ಪೋಸ್ಟರ್ನಲ್ಲಿ ಬಳಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಗುರು.
ತರಾತುರಿಗೆ ಚಿತ್ರ ಮಾಡಲ್ಲ: ಇನ್ನು “ಎರಡನೆಯ ಸಲ’ ಚಿತ್ರವು ಶುರುವಾಗಿ ಎರಡು ವರ್ಷಗಳಾಗಿವೆ. ಈಗ ಚಿತ್ರದ ಒಂದನೆಯ ಹಂತದ ಚಿತ್ರೀಕರಣ ಮುಗಿದು, ಎರಡನೆಯ ಹಂತದ ಚಿತ್ರೀಕರಣ ಶುರುವಾಗಿದೆ. ಇಷ್ಟಕ್ಕೂ ಗುರು ನಿರ್ದೇಶನದ ಚಿತ್ರಗಳು ಅಷ್ಟೊಂದು ತಡವಾಗುವುದೇಕೆ ಎಂದರೆ, ತನಗೆ ತರಾತುರಿಯಲ್ಲಿ ಸಿನಿಮಾ ಮಾಡುವುದಕ್ಕೆ ಉದ್ದೇಶವಿಲ್ಲ ಎನ್ನುತ್ತಾರೆ ಗುರುಪ್ರಸಾದ್. “ನನ್ನ ಜೀವನದ ಉದ್ದೇಶ ಒಂದರ ಹಿಂದೊಂದು ಸಿನಿಮಾ ಮಾಡುವುದರಲ್ಲ. ಅದರ ಬದಲು ಒಂದು ಅದ್ಭುತವಾದ ಪ್ರಯಾಣ ಮಾಡಬೇಕು ಅಂತ ನನ್ನಾಸೆ. 93 ಸಿನಿಮಾಗಳನ್ನು ಮಾಡಿದ ನಿರ್ದೇಶಕರೊಬ್ಬರು ವಿಷ ಕುಡಿದರು. ನಾನು ಈ 10 ವರ್ಷಗಳಲ್ಲಿ ಮಾಡಿರುವುದು ಕೇವಲ ನಾಲ್ಕು ಚಿತ್ರಗಳನ್ನಷ್ಟೇ.
ನನಗೆ ವರ್ಷಕ್ಕೆ ಮೂರೋ, ನಾಲ್ಕೋ ಸಿನಿಮಾ ಮಾಡೋಕೆ ಖಂಡಿತ ಇಷ್ಟ ಇಲ್ಲ. ಇನ್ನೂ ಕ್ಲಿಯರ್ರಾಗಿ ಹೇಳಬೇಕೆಂದರೆ, ನಂಬರ್ ಗೇಮ್ನಲ್ಲಿ ನಾನಿಲ್ಲ. ಕನ್ನಡ ಚಿತ್ರರಂಗದಲ್ಲಿ ಮೂರು ಸಾವಿರ ಸಿನಿಮಾಗಳಿದ್ದರೆ, ಅದರಲ್ಲಿ 400 ಸಿನಿಮಾಗಳು ಮಾತ್ರ ಚೆನ್ನಾಗಿವೆ. ಇನ್ನೆಲ್ಲಾ ಕಸ. ಕನ್ನಡ ಚಿತ್ರರಂಗ ಕಸದಬುಟ್ಟಿ ಅಲ್ಲ. ನನಗೆ ಕಸ ಎಸೆಯೋಕೆ ಇಷ್ಟವಿಲ್ಲ. ಒಂದೊಳ್ಳೆಯ ಸಿನಿಮಾ ಮಾಡಬೇಕೆಂಬುದು ನನ್ನಾಸೆ. ಅದೇ ಕಾರಣಕ್ಕೆ ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೀನಿ. “ಎರಡನೆಯ ಸಲ’ ಚಿತ್ರ ತಡವಾಗುತ್ತಿರುವ ಬಗ್ಗೆ ನಿರ್ಮಾಪಕರ ಹತ್ತಿರ ಹೇಳಿ, ಅವರಿಗೆ ಅರ್ಥ ಮಾಡಿಸಿಯೇ ಚಿತ್ರ ನಿಧಾನ ಮಾಡಿದ್ದು’ ಎನ್ನುತ್ತಾರೆ ಗುರುಪ್ರಸಾದ್.
-ಉದಯವಾಣಿ