ಹೊಸಬರಿಗೆ ಈಗ ಪರ್ವಕಾಲ. ಆ ಕಾರಣಕ್ಕೆ ಹೊಸಬರೆಲ್ಲ ತಮ್ಮ ಹೊಸತನದ ಚಿತ್ರಗಳನ್ನು ರಿಲೀಸ್ ಮಾಡೋಕೆ ರೆಡಿಯಾಗಿದ್ದಾರೆ. ಕಳೆದ ಎರಡು ವಾರದ ಹಿಂದಷ್ಟೇ, ಏಳು ಚಿತ್ರಗಳು ತೆರೆಗೆ ಅಪ್ಪಳಿಸಿದ್ದವು. ಆದರೆ, ಯಾವೊಂದು ಚಿತ್ರಗಳೂ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಿಲ್ಲ. ಈಗ ಪುನಃ ಸಾಲು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಹಿಂದಿನ ವಾರ ಬಿಡುಗಡೆಗೊಂಡ ಕೆಲ ಚಿತ್ರಗಳು ಚಿತ್ರಮಂದಿರವನ್ನು ಕಚ್ಚಿಕೊಳ್ಳುವಲ್ಲಿ ವಿಫಲವಾಗಿವೆ. ಆ ಪರಿಣಾಮ, ಈಗ ಮತ್ತೆ ಚಿತ್ರ ಬಿಡುಗಡೆಯ ಸುರಿಮಳೆಯಾಗುತ್ತಿದೆ. (ಫೆ.19)ಕ್ಕೆ ಬರೋಬ್ಬರಿ ಏಳು ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಪ್ರೇಕ್ಷಕರ ಎದುರು ಬರಲು ರೆಡಿಯಾಗಿರುವ ಈ ಆರು ಚಿತ್ರಗಳ ಪೈಕಿ, ಕೆಲವು ಚಿತ್ರಗಳಿಗೆ ಕೆ.ಜಿ.ರಸ್ತೆಯಲ್ಲಿ ಪ್ರಮುಖ ಚಿತ್ರಮಂದಿರಗಳು ಸಿಕ್ಕರೆ, ಇನ್ನು ಕೆಲವು ಚಿತ್ರಗಳಿಗೆ ಸಣ್ಣ ಚಿತ್ರಮಂದಿರಗಳು ಸಿಕ್ಕಿವೆ. ಕೆಲವು ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್ ಆಗುತ್ತಿವೆ.
“ಆ್ಯಕ್ಟರ್’, “ಭಲೇ ಜೋಡಿ’, “ಮಧುರ ಸ್ವಪ್ನ’, “ನನ್ ಲವ್ ಟ್ರ್ಯಾಕ್’, “ರಾಜ್‌ಬಹದ್ದೂರ್’ “ಮರೆಯಲಾರೆ’ ಹಾಗೂ “ಯು/ಎ ದಿ ಎಂಡ್’ ಚಿತ್ರಗಳು ಈ ವಾರ ತೆರೆಕಾಣುತ್ತಿದ್ದು, ಈ ಎಲ್ಲಾ ಚಿತ್ರಗಳು ತಮ್ಮ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಕೊಂಡಿವೆ. ಇವುಗಳೊಂದಿಗೆ ತಮಿಳು ಹಾಗು ತೆಲುಗಿನ ನಾಲ್ಕು ಚಿತ್ರಗಳು ಸಹ ಫೆ.19 ರಂದು ಬಿಡುಗಡೆಯಾಗುತ್ತಿವೆ. ಅಲ್ಲಿಗೆ ಈ ವಾರ ಹತ್ತು ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಇಷ್ಟು ಚಿತ್ರಗಳಲ್ಲಿ ನಿಲ್ಲೋರ್ಯಾರು ಎಂಬುದನ್ನು ಕಾದು ನೋಡಬೇಕು.
ದಯಾಳ್ ಪದ್ಮನಾಭ್ ನಿರ್ದೇಶನದ “ಆ್ಯಕ್ಟರ್’ ಒಂದು ಭಿನ್ನ ಸಿನಿಮಾ ಎಂದು ಈಗಾಗಲೇ ಬಿಂಬಿತವಾಗಿದೆ. ಈಗಾಗಲೇ 8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿರುವ ಈ ಚಿತ್ರವನ್ನು “ಚಿತ್ರಲೋಕ ಮೂವೀಸ್’ ಬ್ಯಾನರ್‌ನಲ್ಲಿ ಕೆ.ಎಂ.ವೀರೇಶ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ನವೀನ್‌ಕೃಷ್ಣ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಆ್ಯಕ್ಟರ್’ನ ವಿಶೇಷವೆಂದರೆ, ಒಂದು ಜಾಗ, ಎರಡು ಪಾತ್ರ ಹಾಗೂ ನೂರು ನಿಮಿಷ! ನಿರ್ದೇಶಕ ದಯಾಳ್ ಅಂಥದ್ದೊಂದು ಕಥೆ ಹೆಣೆದಿದ್ದಾರೆ. ನವೀನ್ ಕೃಷ್ಣ ನಟನೆಯ ಜತೆಯಲ್ಲಿ ಚಿತ್ರಕಥೆ ಹಾಗು ಸಂಭಾಷಣೆ ಬರೆದಿದ್ದಾರೆ.
“ಆ್ಯಕ್ಟರ್’ ಎಂಬ ಹೆಸರೇ ಹೇಳುವಂತೆ, ಈ ಚಿತ್ರ ಒಬ್ಬ ನಟನ ಸುತ್ತ ಸುತ್ತುತ್ತದೆ. ಸಾಕಷ್ಟು ಉತ್ತುಂಗ ನೋಡಿರುವ ಒಬ್ಬ ನಟ ಸತತ ಸೋಲು ಕಂಡಾಗ ಅವನ ಮಾನಸಿಕ ಯಾತನೆ, ಕಿರಿಕಿರಿ ಹೇಗೆಲ್ಲಾ ಇರುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ. ಈ ಚಿತ್ರಕ್ಕೆ ಸುರೇಶ್ ಭೈರಸಂದ್ರ ಅವರು ಕ್ಯಾಮೆರಾ ಹಿಡಿದಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. “ಆ್ಯಕ್ಟರ್’ ಕೈಲಾಶ್ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿದ್ದು, ಉಳಿದಂತೆ ಮಲ್ಟಿಪ್ಲೆಕ್ಸ್‌ನಲ್ಲೂ ತೆರೆಕಾಣಲಿದೆ.
ಇನ್ನು, ಸಾಧು ಕೋಕಿಲ ನಿರ್ದೇಶನದ “ಭಲೇಜೋಡಿ’ ಚಿತ್ರ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಸುಮಂತ್ ಶೈಲೇಂದ್ರಬಾಬು ನಾಯಕರಾದರೆ, ಸಾನ್ವಿ ನಾಯಕಿ. ಚಿತ್ರದಲ್ಲಿ ಸುಮಲತಾ, ರವಿಶಂಕರ್ ನಟಿಸಿದ್ದಾರೆ.
ಹಾಡೊಂದರಲ್ಲಿ ಹರಿಪ್ರಿಯಾ ಹಾಗು ಹರ್ಷಿಕಾ ಪೂಣಚ್ಚ ಹೆಜ್ಜೆ ಹಾಕಿ¨ªಾರೆ.ಇದು ತೆಲುಗಿನ “ಅಲಾ ಮೊದಲಾಯಿಂದಿ’ ಚಿತ್ರದ ರಿಮೇಕ್. ಶೈಲೇಂದ್ರಬಾಬು ಚಿತ್ರದ ನಿರ್ಮಾಪಕರು. ಜೈಆನಂದ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.
ಈ ಎರಡು ಚಿತ್ರಗಳಲ್ಲಿ ಗೊತ್ತಿರುವ ನಟರಿದ್ದರೆ, ಇನ್ನು ಇವುಗಳ ಜತೆ ಬಿಡುಗಡೆಯಾಗುತ್ತಿರುವ ಐದು ಚಿತ್ರಗಳಲ್ಲಿ ಹೊಸ ಹೀರೋಗಳು ಕಾಣಿಸಿಕೊಂಡಿದ್ದಾರೆ. “ಮಧುರ ಸ್ವಪ್ನ’ ಈ ಚಿತ್ರ ಮೂವಿಲ್ಯಾಂಡ್‌ನಲ್ಲಿ ತೆರೆ ಕಾಣುತ್ತಿದೆ. ಈ ಚಿತ್ರಕ್ಕೆ ರವಿರತ್ನ ನಿರ್ದೇಶಕರು. ಸಂಜೀವ್‌ಕುಮಾರ್ ನಿರ್ಮಾಪಕರು. ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ನಾಯಕರಾದರೆ, ಕೀರ್ತನಾ ಪೊದುವಾಳ್ ನಾಯಕಿ. ಅರ್ಜುನ್ ಕಾಪಿಕಾಡ್ ತುಳು ಚಿತ್ರರಂಗದಲ್ಲಿ ಗೊತ್ತಿರುವ ನಟ. ಕನ್ನಡದಲ್ಲಿ ಅವರಿಗೆ ಇದು ಮೊದಲ ಸಿನಿಮಾ. “ಚಿತ್ರದಲ್ಲಿ ಲವ್ ಜೊತೆಗೆ ಸೆಂಟಿಮೆಂಟ್ ಇದೆ. ಸುಂದರ ಲೊಕೇಶನ್ ಮತ್ತು ಸಂಗೀತ ಚಿತ್ರದ ಹೈಲೈಟ್. ಅಂದಹಾಗೆ, ಚಿತ್ರವನ್ನು ತೂಗುದೀಪ ಸಂಸ್ಥೆ ವಿತರಣೆ ಮಾಡುತ್ತಿದೆ ಎಂಬುದು ವಿಶೇಷ.
ಇನ್ನು, ಈವರೆಗೆ ಕಿರುತೆರೆಯಲ್ಲಿ ಮಿಂಚಿದ್ದ ರಕ್ಷಿತ್ ಅಲಿಯಾಸ್ ರಕ್ಕು ಅಭಿನಯದ “ನನ್ ಲವ್ ಟ್ರ್ಯಾಕ್’ ತ್ರಿಭುವನ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ರಕ್ಷಿತ್ ತಂದೆ ಕೃಷ್ಣಮೂರ್ತಿ ಅವರೇ ಈ ಚಿತ್ರದ ನಿರ್ಮಾಪಕರು. ನವೀನ್‌ಶರ್ಮ ಕೂಡ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ನಿವೇದಿತಾ ಅಲಿಯಾಸ್ ನಿಧಿ ಕುಶಾಲಪ್ಪ ಚಿತ್ರದ ನಾಯಕಿ.
ಕಾದಲ್ ದೇಶಂ’, “ಕಾದಲರ್ ದಿನಂ’ ಮತ್ತು “ಕಾದಲ್ ವೈರಸ್’ ಖ್ಯಾತಿಯ ನಿರ್ದೇಶಕ ಕದಿರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. “ಇದೊಂದು ಗೆಳೆತನ ಮತ್ತು ಪ್ರೀತಿ ಕುರಿತಾದ ಸ್ಟೋರಿ. ಯೂತ್ಸ್ಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿವೆ. ಒಂದು ಪ್ಯೂರ್ ಲವ್ ಅನ್ನೋಕ್ಕಿಂತ ಇಲ್ಲಿ ಪ್ರೀತಿ ಅನ್ನೋದು ಒಂದು ಭಾಗವಷ್ಟೇ. ಉಳಿದದ್ದೆಲ್ಲಾ ಗೆಳೆತನಕ್ಕೇ ಮೀಸಲಿಡಲಾಗಿದೆ. ಈಗಿನ ವಾಸ್ತವ ಅಂಶಗಳು ಚಿತ್ರದಲ್ಲಿ ಬಂದುಹೋಗುತ್ತವಂತೆ. ಚಿತ್ರದಲ್ಲಿ ವರ್ಲ್ಡ್ ಸ್ಟ್ರಾಂಗೆಸ್ಟ್ ಮ್ಯಾನ್ ಮನೋಜ್ ಕುಮಾರ್ ನಟಿಸಿರುವುದು ಮತ್ತೂಂದು ವಿಶೇಷ.
ಥ್ರಿಲ್ಲರ್ ಮಂಜು ಅವರ ಅಣ್ಣನ ಮಗ ಥ್ರಿಲ್ಲರ್ ಪುನೀತ್ ನಟಿಸಿರುವ “ರಾಜ್‌ಬಹದ್ದೂರ್’ ಕೂಡ ಈ ವಾರ ತೆರೆಕಾಣುತ್ತಿದೆ. ಕೆ.ಜಿ. ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ತೆರೆಕಾಣುತ್ತಿರುವ ಈ ಚಿತ್ರವನ್ನು ಅಲ್ವಿನ್ ನಿರ್ದೇಶಿಸಿದ್ದಾರೆ. ದಿಲ್ ಸತ್ಯ ನಿರ್ಮಾಪಕರು. ಚಿತ್ರದಲ್ಲಿ ಸಾಯಿಕುಮಾರ್, ಥ್ರಿಲ್ಲರ್‌ಮಂಜು, ಅನಿತಾಭಟ್, ಹರೀಶ್‌ರಾಯ್, ಕಿಲ್ಲರ್‌ವೆಂಕಟೇಶ್, ಮನ್‌ದೀಪ್‌ರಾಯ್ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಗುರುದತ್ ಕ್ಯಾಮೆರಾ ಹಿಡಿದಿದ್ದಾರೆ.
ಶರತ್ ಖಾದ್ರಿ ನಿರ್ದೇಶಿಸಿರುವ “ಮರೆಯಲಾರೆ’ ಈ ವಾರದ ಇನ್ನೊಂದು ಚಿತ್ರ. ತಾಂಡವ್, ಪ್ರಿಯಾ ಬೆಳ್ಳಿಯಪ್ಪ, ಮಿತ್ರ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು, ಅರ್ಜುನ್ ಜನ್ಯಾ ಅವರ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರಗಳ ಜತೆಯಲ್ಲಿ “ಯು/ಎ ದಿ ಎಂಡ್’ ಎಂಬ ಮತ್ತೂಂದು ಹೊಸಬರ ಚಿತ್ರ ಕುಡ “ಭೂಮಿಕಾ’ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ. ನಾಗ್ ಚಿತ್ರದ ನಿರ್ದೇಶಕರು. ಪಾರ್ವತಿ ಬಿ.ಕರಣಿಕ್ ನಿರ್ಮಾಪಕರು. ಮನೋಹರ ಜೋಷಿ ಕ್ಯಾಮೆರಾ ಹಿಡಿದರೆ, ಮನುಶ್ರೀ ಸಂಗೀತ ನೀಡಿದ್ದಾರೆ.
ಒಟ್ಟಾರೆ, ಕನ್ನಡದಲ್ಲಿ ಚಿತ್ರ ಬಿಡುಗಡೆಯ ಯಾನ ಶುರುವಾಗಿದೆ. ಯಾರಿಗೆ ಎಷ್ಟು ಅದೃಷ್ಟ ಕಾದಿದೆಯೋ ಕಾಲವೇ ನಿರ್ಧರಿಸಬೇಕು.
-ಉದಯವಾಣಿ