ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ.
ಫೆಬ್ರುವರಿ 13ರಂದು ಚುನಾವಣೆ ನಡೆದಿದ್ದ ಈ ಕ್ಷೇತ್ರಗಳಲ್ಲಿ ಜೆಡಿಎಸ್ ತೀವ್ರ ಹಿನ್ನಡೆ ಕಂಡಿದೆ. ಬೀದರಿನಲ್ಲಿ ಠೇವಣಿ ಕಳೆದುಕೊಂಡ ಬಗ್ಗೆ ವರದಿಯಾಗಿದೆ.
ಹೆಬ್ಬಾಳ: ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಅವರು 19,149 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಈ ಮೂಲಕ ಕೇಸರಿ ಪಕ್ಷವು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಆದರೆ, ಹೆಬ್ಬಾಳವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರೆಹಮಾನ್ ಷರೀಫ್ ಅವರು ಭಾರಿ ಅಂತರದಿಂದ ಸೋಲು ಕಂಡಿದ್ದಾರೆ.
ಹೆಬ್ಬಾಳವು ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರ ನಿಧನದಿಂದ ತೆರವಾಗಿತ್ತು. ಒಟ್ಟು 2,43,703 ಮತದಾರರ ಪೈಕಿ ಚುನಾವಣೆಯಲ್ಲಿ 1,08,337 ಜನರು ತಮ್ಮ ಹಕ್ಕು ಚಲಾಯಿಸಿದ್ದರು.
ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ
ವೈ.ಎ.ನಾರಾಯಣಸ್ವಾಮಿ (ಬಿಜೆಪಿ): 60,367
ರೆಹಮಾನ್ ಷರೀಫ್(ಕಾಂಗ್ರೆಸ್): 41,218
ಇಸ್ಮಾಯಿಲ್ ಷರೀಫ್ (ಜೆಡಿಎಸ್): 3,666
ನೋಟಾ ಮತಗಳು: 596
ದೇವದುರ್ಗ: ಈ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಬಿಜೆಪಿ ಮೇಲುಗೈ ಸಾಧಸಿದೆ. ಬಿಜೆಪಿಯ ಕೆ.ಶಿವನಗೌಡ ನಾಯಕ್ ಅವರು 16,871 ಮತಗಳಿಂದ ಗೆಲುವು ಕಂಡಿದ್ದಾರೆ.
ರಾಯಚೂರಿನ ಇನ್‌ಸ್ಯಾಂಟ್ ಜಿಸಸ್ ಶೈಕ್ಷಣಿಕ ಸಂಸ್ಥೆಯ ಹೈಸ್ಕೂಲ್‌ನಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಪಡೆದಿದ್ದ ಶಿವನಗೌಡ ಅವರು ಕೊನೆಯ ಹಂತದ ವರೆಗೂ ಅಮೋಘ ಮುನ್ನಡೆ ಉಳಿಸಿಕೊಂಡು ಜಯಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎ.ರಾಜಶೇಖರ್ ನಾಯಕ್ ಅವರು ಎರಡನೇ ಸ್ಥಾನ ಹಾಗೂ ಜೆಡಿಎಸ್‌ನ ಕರೆಮ್ಮ ಅವರು ಮೂರನೇ ಸ್ಥಾನದಲ್ಲಿದ್ದಾರೆ.
ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಅವರ ನಿಧನದಿಂದ ದೇವದುರ್ಗ ಕ್ಷೇತ್ರವು ಖಾಲಿಯಾಗಿತ್ತು. ಕಾಂಗ್ರೆಸ್ ವೆಂಕಟೇಶ್ ಅವರ ಪುತ್ರ ರಾಜಶೇಖರ್ ಅವರನ್ನು ಕಣಕ್ಕಿಳಿಸಿದರೂ ಅನುಕಂಪ ಗಿಟ್ಟಿಲ್ಲ.
ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ
ಕೆ.ಶಿವನಗೌಡ ನಾಯಕ್ (ಬಿಜೆಪಿ): 72,647
ಎ.ರಾಜಶೇಖರ್ ನಾಯಕ್(ಕಾಂಗ್ರೆಸ್): 55,776
ಕರೆಮ್ಮ ನಾಯಕ್ (ಜೆಡಿಎಸ್): 9,156
ನೋಟಾ: 1708
ಅಂಚೆ ಮತ ತಿರಸ್ಕೃತ: 02
ಬೀದರ್: ಕೆಜೆಪಿಯ ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನದಲ್ಲಿ ಕಾಂಗ್ರೆಸ್ ಜಯಿಸಿದೆ.
ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಕಾಂಗ್ರೆಸ್‌ನ ರಹೀಂ ಖಾನ್, 22,721 ಮತಗಳ ಅಂತರದಿಂದ ಅಮೋಘ ಗೆಲುವು ಕಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಎರಡನೇ ಸ್ಥಾನದಲ್ಲಿದ್ದಾರೆ. ಜೆಡಿಎಸ್ ಮೂರನೇ ಸ್ಥಾನದಲ್ಲಿದೆ.
ಪ್ರಮುಖ ಅಭ್ಯರ್ಥಿಗಳು ಪಡೆದ ಮತ ವಿವರ
ರಹೀಂ ಖಾನ್ (ಕಾಂಗ್ರೆಸ್): 70,138
ಪ್ರಕಾಶ್ ಖಂಡ್ರೆ (ಬಿಜೆಪಿ): 47,417
ಮೊಹಮ್ಮದ್ ಅಯಾಜ್ ಖಾನ್(ಜೆಡಿಎಸ್): 4421