ಕರ್ನಾಟಕ

ಅಪಘಾತದಲ್ಲಿ ಯೋಧ ಮಹೇಶ ನಿಧನ, ಕುಂದಗೋಳ ತಾಲ್ಲೂಕಿನ ಮತ್ತೊಬ್ಬ ಸೈನಿಕ ಸಾವು; ಕಲ್ಲೂರಿನಲ್ಲಿ ಮುಗಿಲು ಮುಟ್ಟಿದ ಆಕ್ರಂದನ

Pinterest LinkedIn Tumblr

11dwd6epfiಉಪ್ಪಿನ ಬೆಟಗೇರಿ: ಮಹೇಶಾ ನಮ್ಮನ್ನೆಲ್ಲಾ ಬಿಟ್ಟು ಹೋದೆಯಾ ನನ್ನ ಕಂದಾ… ನಿಮ್ಮಣ್ಣ ನಿನಗ ವಿಮಾನದಾಗ್‌ ಊಟಾ ತರಾಕತ್ತಾನ ಎದ್ದುಬಾರೋ ನನ್ನಪ್ಪ… ನಾ ಇನ್ಮುಂದ ಯಾರಿಗೆ ಮಹೇಶಾ ಅಂತಾ ಕರಿಬೇಕೋ

ನನ್ನ ಮುದ್ದು ಮಗನೇ….ಎಂದು ಮಗನನ್ನು ಕಳೆದುಕೊಂಡ ದುಃಖದಲ್ಲಿ ಪರಿ ಪರಿ­ಯಾಗಿ ರೋಧಿಸುತ್ತಿರುವ ತಾಲ್ಲೂಕಿನ ಕಲ್ಲೂರು ಗ್ರಾಮದ ಮೃತ ಯೋಧನ ತಾಯಿ ಹಾಗೂ ಅವರ ಕುಟುಂಬದವರ ಆಕ್ರಂದನ ಅಲ್ಲಿ ಸೇರಿದ್ದವರ ಕಣ್ಣುಗಳು ತೇವವಾಗುವಂತೆ ಮಾಡಿತು.

ಸಿಯಾಚಿನ್ ಯುದ್ಧಭೂಮಿಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಆರು ದಿನಗಳ ಬಳಿಕವೂ ಬದುಕುಳಿದು ಬಂದಿದ್ದ ಕುಂದಗೋಳ ತಾಲ್ಲೂಕಿನ ಬೆಟದೂರು ಗ್ರಾಮದ ವಿರಯೋಧ ಹನುಮಂತಪ್ಪ ಕೊಪ್ಪದ ದೆಹಲಿಯ ಆರ್‌ಆರ್ ಸೇನಾ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯಗಳಿಂದ ಕೊನೆಗೂ ವಿಧವಶರಾಗಿದ್ದಾರೆ. ಹನುಮಂತಪ್ಪ ಮರಣ ಹೊಂದಿದ ಬೆನ್ನಲ್ಲೇ ತಾಲ್ಲೂಕಿನ ಕಲ್ಲೂರು ಗ್ರಾಮದ ಮತ್ತೊಬ್ಬ ಯೋಧ ಮಹೇಶ ಮಲ್ಲಿಕಾರ್ಜುನ ಹೂಗಾರ (27) ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಹೊಲವನ್ನು ಸರ್ವೆ ಮಾಡಿಸುವ ವಿಚಾರವಾಗಿ ಮಹೇಶ ಬುಧವಾರ ಬೈಕ್‌ ತೆಗೆದುಕೊಂಡು ಧಾರವಾಡಕ್ಕೆ ಬಂದಿದ್ದರು. ತಮ್ಮ ಕೆಲಸ ಮುಗಿಸಿ­ಕೊಂಡು ವಾಪಸ್‌ ಕಲ್ಲೂರು ಗ್ರಾಮದ ಕಡೆಗೆ ಬರುತ್ತಿದ್ದ ವೇಳೆ ಇಲ್ಲಿನ ಭಾರತ್‌ ಹೈಸ್ಕೂಲ್‌ ಬಳಿ ಲಾರಿ ರೂಪದಲ್ಲಿ ಬಂದ ಜವರಾಯ ಮಹೇಶ ಅವರ ಬೈಕ್‌ ಡಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ನಗರದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮಹೇಶ ಗುರುವಾರ ಬೆಳಿಗ್ಗೆ ಮೃತಪಟ್ಟರು.

‘ಮಹೇಶ 2007ರಲ್ಲಿ ಆರ್.ಟಿ 150 ಫಿಲ್ಡ್ ರೆಜ್ಮೆಂಟ್ ಆಗಿ ಭಾರತೀಯ ಸೇನೆಯ ಸೇವೆಗೆ ನಿಯೋಜನೆಗೊಂಡ. ನಾಸಿಕ್, ಕಾಶ್ಮಿರ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದ ಮಹೇಶ, ಸದ್ಯ ಉತ್ತರಾಖಂಡದ ಹರಿದ್ವಾರ ಬಳಿಯ ಇರುವ ರಾಯ್‌ವಾಲಾನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಇನ್ನೇನು ಕೆಲವೇ ದಿನಗಳಲ್ಲಿ ಇವರ ಘಟಕ ದೂರದ ಲೇ ಪ್ರದೇಶಕ್ಕೆ ವರ್ಗಾವಣೆಯಾಗುವುದಿತ್ತು.

ಮಹೇಶ ದೆಹಲಿಯಲ್ಲಿ ನಡೆದ ಸೇನೆಯ ಕ್ರೀಡಾಕೂಟಗಳಲ್ಲಿ ಭಾವಹಿಸಿ 45 ದಿನಗಳ ರಜೆಯ ಮೇಲೆ ಕಲ್ಲೂರಿಗೆ ಬಂದು 22 ದಿನ ಕಳೆದಿದ್ದವು. ಆದರೆ, ವಿಧಿ ಮಹೇಶನ ಜೀವನದಲ್ಲಿ ಬೇರೆ ಆಟವನ್ನೇ ಆಡಿದೆ’ ಎಂದು ಸೇನೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ಮಹೇಶನ ಅಣ್ಣ ರಮೇಶ ತಮ್ಮ ನೋವು ತೋಡಿಕೊಂಡರು.

‘ನನ್ನ ಮಗಾ ಬ್ಯಾರಿ ಅಲ್ಲ, ಹನುಮಂತಪ್ಪ ಬ್ಯಾರಿ ಅಲ್ಲ‘
‘ಹತ್ತಾರು ದಿನಗಳಿಂದ ಖುಷಿಯಾಗಿ ಒಡಾಡಿಕೊಂಡಿದ್ದ. ಆದರೆ, ಆ ಖುಷಿ ಬಾಳ ದಿನಾ ಉಳಿಲಿಲ್ಲ. ನನ್ನ ಮಗಾ ಬೇರೆ ಅಲ್ಲ ಬೆಟದೂರಿನ ಹನುಮಂತಪ್ಪ ಬೇರೆ ಅಲ್ಲ ಆದರೆ ಅವರಿಬ್ಬರೂ ನಮ್ಮನ್ನ ಅಗಲಿ ಹೋಗ್ಯಾರ. ಈ ಗುರುವಾರ ಒಂದು ಕರಾಳ ದಿನಾ. ನನ್ನ ಪ್ರೀತಿಯ ಮಗ ಮಹೇಶನಿಗೆ ಮದ್ವಿ ಮಾಡ್ಬೇಕು ಅಂತ ಕನ್ಯಾ ನೋಡ್ತಾಯಿದ್ದೆ. ಕಣ್ತುಂಬ ಅವನ ಮದ್ವಿ ನೋಡ್ಬೇಕು ಅಂಥಾ ಕನಸು ಕಟ್ಕೊಂಡಿದ್ದೆ ಆದ್ರ ಅವನ ಅಂತಿಮ ಯಾತ್ರೆ ನೋಡೊ ಹಂಗಾಯ್ತು ವಿಧಿ ಎಷ್ಟು ಕ್ರೂರ’ ಎಂದು ಯೋಧನ ತಂದೆ ಮಲ್ಲಿಕಾರ್ಜುನ ಹೂಗಾರ ಹೇಳಿದರು.

‘ಉತ್ತಮ ಗೆಳೆಯನನ್ನು ಕಳೆದುಕೊಂಡಿದ್ದೇವೆ’
‘ಮಹೇಶ ಮತ್ತು ನಾನು ಒಂದೇ ಯುನಿಟ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆಯಲ್ಲಿದ್ದೇವೆ. ಇಬ್ಬರೂ ಸೇರಿ ರಜೆಗೆ ಬಂದಿದ್ದೆವು. ಅವನು ಸರಳತೆ ಹಾಗೂ ಆತ್ಮೀಯತೆ ಸ್ನೇಹಿತನಾಗಿದ್ದ. ಹಾಕಿ, ಫುಟ್ಬಾಲ್, ಹ್ಯಾಂಡ್‌ಬಾಲ್ ಮತ್ತು ವಾಲಿಬಾಲ್‌ಗಳಲ್ಲಿ ಉತ್ತಮ ಆಟವಾಡಿ ಗೋಲ್ಡ್ ಮೆಡಲ್ ಸಹ ಪಡೆದಿದ್ದ. ನಮ್ಮ ಯುನಿಟ್ ಒಬ್ಬ ಉತ್ತಮ ಯೋಧನನ್ನು, ಗೆಳೆಯನನ್ನು ಕಳೆದುಕೊಂಡ ದುಃಖದಲ್ಲಿದೆ ಎಮದು ಮಹೇಶನ ಸಹೋದ್ಯೋಗಿ ರಮೇಶ ಎಂದು ಹೇಳಿದರು.

Write A Comment