ಧಾರವಾಡ: ಹುತಾತ್ಮ ವೀರಯೋಧ ಲ್ಯಾನ್ಸ್‌ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12.30ಕ್ಕೆ ಹುಟ್ಟೂರು ಕುಂದಗೊಳ ತಾಲೂಕಿನ ಬೆಟದೂರಿನ ಕೆರೆ ದಂಡೆ ಮೇಲೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಗುರುವಾರ ಹೇಳಿದ್ದಾರೆ.
ಯೋಧನ ಪಾರ್ಥಿವ ಶರೀರವನ್ನು ನಿನ್ನೆ ರಾತ್ರಿ ಕಿಮ್ಸ್ ಶವಗಾರದಲ್ಲಿಡುವ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 7ಗಂಟೆಯಿಂದ 10 ಗಂಟೆಯವರೆಗೆ ನೆಹರು ಸ್ಟೇಡಿಯಂನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗುವುದು. ನಂತರ ಸ್ವಗ್ರಾಮ ಬೆಟದೂರಿಗೆ ತೆಗೆದುಕೊಂಡು ಹೋಗಿ,12.30ರ ಸುಮಾರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ವಿನಯ್ ಕುಲಕರ್ಣಿ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಸಚಿವರು ಇಂದು ಬೆಳಗ್ಗೆ 9ಗಂಟೆಯ ಸುಮಾರಿಗೆ ಹುಬ್ಬಳ್ಳಿಯಲ್ಲೇ ವೀರಯೋಧನ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ವಿನಯ್ ಕುಲಕರ್ಣಿ ಹೇಳಿದ್ದಾರೆ.
ಬೆಟದೂರಿನ ಯೋಧ ಹನುಮಂತಪ್ಪ ಕೊಪ್ಪದ್ ಅವರು ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಸಿಲುಕಿ, ಪವಾಡ ಸದೃಶ ರೀತಿಯಲ್ಲಿ ಬದುಕುಳಿದು, ಕಳೆದ ಮೂರು ದಿನಗಳಿಂದ ದೆಹಲಿ ಆರ್ ಆರ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ನಿನ್ನೆ ಬೆಳಗ್ಗೆ 11.45ರ ಸುಮಾರಿಗೆ ಕೊನೆಯುಸಿರೆಳೆದಿದ್ದರು.