ಸ್ಯಾನ್‌ಫ್ರಾನ್ಸಿಸ್ಕೋ: “ವಸಾಹತುಶಾಹಿಯನ್ನು ವಿರೋಧಿಸಿದ್ದರ ಫಲವಾಗಿ ಭಾರತೀಯರು ಹಲವು ದಶಕಗಳ ಕಾಲ ಅರ್ಥಿಕ ಸಂಕಷ್ಟವನ್ನು ಎದುರಿಸಬೇಕಾಯಿತು; ಈಗದನ್ನು ತಡೆಯುವುದು ಏಕೆ ?’ ಎಂದು ಫೇಸ್ ಬುಕ್ ಆಡಳಿತ ಮಂಡಳಿಯ ಸದಸ್ಯರಾಗಿರುವ ಆಂಡ್ರೀಸೀನ್ ಅವರು ನಿನ್ನೆಯಷ್ಟೇ ಟ್ವಿಟರ್‌ನಲ್ಲಿ ವ್ಯಕ್ತಪಡಿಸಿರುವ “ಭಾರತ ವಿರೋಧಿ ಅಭಿಪ್ರಾಯಕ್ಕೆ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ತೀವ್ರ ಆಕ್ಷೇಪ, ಅಸಮಾಧಾನ, ಖಂಡನೆ ವ್ಯಕ್ತಪಡಿಸಿದ್ದಾರೆ. ಆತನ ಹೇಳಿಕೆಯಿಂದ ನನಗೆ ತೀವ್ರ ನೋವಾಗಿದೆ ಎಂದವರು ಹೇಳಿದ್ದಾರೆ.
ಆಂಡ್ರೀಸೀನ್ ಅವರ ಈ “ಭಾರತ ವಿರೋಧಿ’ ಹೇಳಿಕೆಯು ನನ್ನನ್ನಾಗಲೀ, ಫೇಸ್ ಬುಕ್ಕನ್ನಾಗಲೀ ಪ್ರತಿನಿಧಿಸುವುದಿಲ್ಲ ಎಂದು ಝುಕರ್‌ಬರ್ಗ್ ಖಡಾಖಂಡಿತವಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಇಂಟರ್‌ನೆಟ್ ಡಾಟಾ ಕಂಟೆಂಟ್‌ಗೆ ವ್ಯತ್ಯಯದ ದರಗಳ ನೀತಿಯನ್ನು ಅನುಸರಿಸಕೂಡದೆಂದು ನೆಟ್ ನ್ಯೂಟ್ರಾಲಿಟಿಯ ಪರವಾಗಿ ಟ್ರಾಯಿ ತೀರ್ಪು ನೀಡಿರುವದರಿಂದ ಕೆರಳಿದ್ದ ಆಂಡ್ರೀಸೀನ್ ಅವರು “ಭಾರತವನ್ನು ಅವಹೇಳನ ಮಾಡುವ ರೀತಿಯ ಅಭಿಪ್ರಾಯವನ್ನು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದ್ದರು. ಇದನ್ನು ಖಂಡಿಸಿ ಝುಕರ್ ಬರ್ಗ್ ಸ್ಪಷ್ಟನೆ ನೀಡಿದ್ದಾರೆ.
ವಸಾಹತುಶಾಹಿ ಹೇಳಿಕೆಗೆ ಟ್ವಿಟರ್‌ನಲ್ಲಿ ವ್ಯಾಪಕ ವಿರೋಧ, ಟೀಕೆ ವ್ಯಕ್ತವಾಗುತ್ತಲೇ ಆಂಡ್ರೀಸನ್ ಅವರು ತಮ್ಮ ಹೇಳಿಕೆಯನ್ನು ಟ್ವಿಟರ್‌ನಿಂದ ಕಿತ್ತು ಹಾಕಿದ್ದರು.
ಆಂಡ್ರೀಸೀನ್ ಹೇಳಿಕೆಯನ್ನು ವಿರೋಧಿಸಿ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಝುಕರ್‌ಬರ್ಗ್, “ವೈಯಕ್ತಿಕವಾಗಿ ಭಾರತವು ನನಗೆ ಮತ್ತು ಫೇಸ್‌ಬುಕ್ ಗೆ ಅತೀ ಮುಖ್ಯವಾಗಿದೆ. ನಮ್ಮ ಅಭಿಯಾನದ ಆರಂಭದ ದೆಸೆಯಲ್ಲಿ ನಾನು ಭಾರತ ಪ್ರವಾಸ ಕೈಗೊಂಡಿದ್ದೆ. ಅಲ್ಲಿನ ಜನರು ತೋರಿರುವ ಮಾನವೀಯ ಮತ್ತಿತರ ಉದಾತ್ತ ಮೌಲ್ಯಗಳಿಂದ ನಾನು ಪ್ರೇರಿತನಾಗಿದ್ದೇನೆ. ಎಲ್ಲ ಜನರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅಧಿಕಾರ ದೊರೆತಾಗ ಇಡಿಯ ವಿಶ್ವವೇ ಮುನ್ನಡೆಯಲು ಸಾಧ್ಯ ಎಂಬ ನನ್ನ ತಿಳಿವಳಿಕೆ ಭಾರತ ಪ್ರವಾಸದಿಂದ ಗಟ್ಟಿಯಾಗಿದೆ’ ಎಂದು ಹೇಳಿದ್ದಾರೆ.
-ಉದಯವಾಣಿ