ನವದೆಹಲಿ: ವೀರಯೋಧ ಲ್ಯಾನ್ಸ್‌ನಾಯಕ್ ಹನುಮಂತಪ್ಪ ಕೊಪ್ಪದ್ ಅವರು ಮೂರು ದಿನಗಳಿಂದ ದೆಹಲಿ ಆರ್ ಆರ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಹುತಾತ್ಮರಾದ ದಿನವೇ ಭಾರತ ಮತ್ತು ಪಾಕಿಸ್ಥಾನ ಸಿಯಾಚಿನ್ ವಿವಾದವನ್ನು ತುರ್ತಾಗಿ ಬಗೆಹರಿಸಬೇಕಾದ ಕಾಲ ಈಗ ಒದಗಿ ಬಂದಿದೆ ಎಂದು ಪಾಕ್ ಹೇಳಿದೆ.
ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿಯಾದ ಸಿಯಾಚಿನ್ನಲ್ಲಿ ಪ್ರಾಕೃತಿಕ ವಿಕೋಪಗಳಿಂದ ಇನ್ನಷ್ಟು ಜೀವಗಳು ಬಲಿಯಾಗುವುದನ್ನು ತಪ್ಪಿಸಲು ಭಾರತ – ಪಾಕಿಸ್ಥಾನ ತುರ್ತಾಗಿ ಸಿಯಾಚಿನ್ ವಿವಾದವನ್ನು ಬಗೆಹರಿಸಿಕೊಳ್ಳುವುದು ಅಗತ್ಯವೆಂದು ನಾವು ತಿಳಿಯುತ್ತೇವೆ ಎಂದು ಪಾಕ್ ಹೈಕಮಿಷನರ್ ಅಬ್ದುಲ್ ಬಾಸಿತ್ ಹೇಳಿದ್ದಾರೆ.
ಸಿಯಾಚಿನ್ನಲ್ಲಿ ಸಂಭವಿಸಿದ ಹಿಮಕುಸಿತದಿಂದಾಗಿ 10 ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಸಿಯಾಚಿನ್ನಿಂದ ಸೇನೆ ಹಿಂಪಡೆಯುವ ಸಂಬಂಧ ಮಾತುಕತೆ ಆರಂಭಿಸಲು ಪಾಕಿಸ್ತಾನ ಆಸಕ್ತಿ ತೋರಿದೆ.
ಪ್ರಸ್ತುತ ಸಿಯಾಚಿನ್ನಿಂದ ಸೇನೆ ಹಿಂಪಡೆಯುವ ಕುರಿತು ಉಭಯ ದೇಶಗಳು ಚರ್ಚೆ ನಡೆಸುವ ಸಮಯ ಬಂದಿದೆ. ಶಾಂತಿಯುತ ಮಾತುಕತೆಗಳ ಮೂಲಕ ಪರಸ್ಪರ ಒಪ್ಪಿಗೆಯ ಮೇರೆಗೆ ಸೇನೆ ಹಿಂಪಡೆಯುವ ಮೂಲಕ ಮತ್ತಷ್ಟು ಸೈನಿಕರು ಬಲಿಯಾಗದಂತೆ ತಡೆಯಬಹುದು ಎಂದು ಬಸಿತ್ ತಿಳಿಸಿದ್ದಾರೆ.
ಕಳೆದ ಮೂರು ದಶಕಗಳಿಂದಲೂ ವಿವಾದಾತ್ಮಕವಾಗಿರುವ ಮತ್ತು ಈ ಅತ್ಯುನ್ನತ ಸಮರ ಭೂಮಿಯನ್ನು ತನ್ನ ನಿಯಂತ್ರಣದಲ್ಲಿ ಉಳಿಸಿಕೊಳ್ಳುವುದಕ್ಕೆ ಬದ್ಧವಾಗಿರುವ ಭಾರತ 1983ರಿಂದ ಈ ತನಕ 33 ಅಧಿಕಾರಿಗಳ ಸಹಿತ 879 ಸೈನಿಕರನ್ನು ಕಳೆದುಕೊಂಡಿರುವುದನ್ನು ಗಮನಿಸಿದರೆ ಸಿಯಾಚಿನ್ ಹಿಮ ಪರ್ವತ ಯೋಧರ ಮಟ್ಟಿಗೆ ವಸ್ತುತಃ ರುದ್ರಭೂಮಿಯೇ ಆಗಿದೆ ಎನ್ನದೇ ನಿರ್ವಾಹವಿಲ್ಲ.