ಕರ್ನಾಟಕ

ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಅದ್ದೂರಿ ತೆರೆ; ಕನ್ನಡದ 5 ಚಲನಚಿತ್ರಗಳಿಗೆ ಪ್ರಶಸ್ತಿ

Pinterest LinkedIn Tumblr

sidduweb

ಮೈಸೂರು: ಇದೇ ಮೊದಲ ಬಾರಿಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕಕಾಲಕ್ಕೆ ಆಯೋಜಿಸಲಾಗಿದ್ದ 8ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ವಿವಿಧ ವಿಭಾಗದಲ್ಲಿ ‘ತಿಥಿ’ ಸೇರಿದಂತೆ ಕನ್ನಡದ ಐದು ಚಲನಚಿತ್ರಗಳು ಪ್ರಶಸ್ತಿ ಮುಡಿಗೇರಿಸಿಕೊಂಡವು.

ಏಷಿಯನ್‌ ಸಿನಿಮಾ ವಿಭಾಗದಲ್ಲಿ ಕನ್ನಡದ ‘ತಿಥಿ’ ಹಾಗೂ ಕಿರ್ಜಿಸ್ತಾನದ ‘ಅಂಡರ್‌ ಹೆವನ್‌’ ಚಲನಚಿತ್ರಗಳು ಪ್ರಶಸ್ತಿ ಹಂಚಿಕೊಂಡವು. 12 ಚಲನಚಿತ್ರಗಳೊಂದಿಗೆ ಸ್ಪರ್ಧೆಯೊಡ್ಡಿದ ‘ತಿಥಿ’ ಸಿನಿಮಾ ಪ್ರಶಸ್ತಿಯ ಗಳಿಸಿತು. ಭಾರತೀಯ ಚಲನಚಿತ್ರ ವಿಭಾಗದಲ್ಲಿ ಮರಾಠಿಯ ‘ದಿ ಸೈಲೆನ್ಸ್‌’ ಅತ್ಯುತ್ತಮ ಚಲನಚಿತ್ರ ಎನಿಸಿದರೆ, ಮಲಯಾಳಂನ ‘ದಿ ಐ’ ಹಾಗೂ ಹಿಂದಿಯ ‘ದಿ ಐಲ್ಯಾಂಡ್‌ ಸಿಟಿ’ ತೀರ್ಪುಗಾರರ ವಿಶೇಷ ಪ್ರಶಸ್ತಿ ಗಳಿಸಿದವು.

ಕನ್ನಡ ಚಲನಚಿತ್ರ ವಿಭಾಗದಲ್ಲಿ ‘ವಿದಾಯ’, ‘ನಾನು ಅವನಲ್ಲ ಅವಳು’ ಮತ್ತು ‘ಪುಟ ತಿರುಗಿಸಿ ನೋಡಿ’ ಚಲನಚಿತ್ರಗಳು ಕ್ರಮವಾಗಿ ಮೂರು ಪ್ರಶಸ್ತಿಗಳನ್ನು ಪಡೆದವು. ಸಿನಿಮೋತ್ಸವದ ‘ನೆಟ್‌ ಪ್ಯಾಕ್‌ ಅವಾರ್ಡ್‌’ ವಿಭಾಗದಲ್ಲಿ ಕನ್ನಡದ ‘ಸಾಲದ ಮಗು’ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡಿತು.

ಈ ಚಲನಚಿತ್ರಗಳ ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀರಾಮ್‌ ರೆಡ್ಡಿ–ಪ್ರತಾಪರೆಡ್ಡಿ (ತಿಥಿ), ಗಜೇಂದ್ರ ಅಹಿರೆ–ಅರ್ಪಣ್‌ ಭೂಕನ್‌ವಾಲಾ (ದಿ ಸೈಲೆನ್ಸ್‌), ಸಿದ್ದಾರ್ಥಶಿವು (‘ದಿ ಐ’ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ), ಸುನೀಲ್‌ ರಾಘವೇಂದ್ರ (ಪುಟ ತಿರುಗಿಸಿ ನೋಡಿ), ಬಿ.ಎಸ್. ಲಿಂಗದೇವರು–ರವಿ ಆರ್‌. ಗರಣಿ (ನಾನು ಅವನಲ್ಲ ಅವಳು), ಪಿ. ಶೇಷಾದ್ರಿ– ಬಸಂತ್‌ಕುಮಾರ್‌ ಪಾಟೀಲ (ವಿದಾಯ), ಉಮಾಶಂಕರಸ್ವಾಮಿ– ಡಿ.ಕೆ. ಮೂರ್ತಿ (ಸಾಲದ ಮಗು) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಸಚಿವ ಆರ್‌. ರೋಷನ್‌ ಬೇಗ್‌, ವಸತಿ ಸಚಿವ ಎಂ.ಎಚ್‌. ಅಂಬರೀಷ್‌, ಸಹಕಾರ ಸಚಿವ ಎಚ್‌.ಎಸ್‌. ಮಹಾದೇವಪ್ರಸಾದ್‌ ಪ್ರಶಸ್ತಿ ಪ್ರದಾನ ಮಾಡಿದರು. ಕಿರ್ಜಿಸ್ತಾನದ ‘ಅಂಡರ್‌ ಹೆವನ್‌’ ಚಲನಚಿತ್ರದ ನಿರ್ದೇಶಕರು ಸಮಾರಂಭದಲ್ಲಿ ಭಾಗವಹಿಸಲಿಲ್ಲ. ‘ಶುಕ್ರವಾರ ಬೆಳಿಗ್ಗೆಯೇ ಅವರು ಪ್ರಶಸ್ತಿ ಪಡೆದು ತೆರಳಿದರು’ ಎಂದು ಆಯೋಜಕರು ತಿಳಿಸಿದರು.

ಸಮಾರಂಭದಲ್ಲಿ ಕನ್ನಡ ಚಿತ್ರೋದ್ಯಮದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಿತ್ರನಟ ಸಂಚಾರಿ ವಿಜಯ್‌ ಅವರನ್ನು ಸನ್ಮಾನಿಸಲಾಯಿತು.

Write A Comment