ಬೆಂಗಳೂರು: ‘ಇನ್‌ವೆಸ್ಟ್ ಕರ್ನಾಟಕ’ ಮಹಿಳಾ ಉದ್ಯಮಿಗಳಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ವಿಚಾರಗೋಷ್ಠಿಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿತ್ತು. ವಸ್ತುಪ್ರದರ್ಶನದಲ್ಲೂ ಮಹಿಳಾ ಉದ್ಯಮಿಗಳ ಅನೇಕ ಮಳಿಗೆಗಳಿದ್ದವು. ನವೋದ್ಯಮಗಳನ್ನು ಆರಂಭಿಸಲು, ರಫ್ತು ವಹಿವಾಟಿನ ಬಗ್ಗೆ ತಿಳಿದುಕೊಳ್ಳಲು, ವಿದೇಶಿ ಕಂಪೆನಿಗಳ ಜತೆ ಸಂಪರ್ಕ ಸಾಧಿಸಲು ಈ ಸಮಾವೇಶ ಮಹಿಳಾ ಉದ್ಯಮಿಗಳಿಗೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ಮಹಿಳಾ ಉದ್ಯಮಿಗಳು.
‘ಈ ಬಾರಿಯ ಸಮಾವೇಶದಲ್ಲಿ ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸುವ ಬಗ್ಗೆಯೇ ವಿಶೇಷ ವಿಚಾರಗೋಷ್ಠಿ ಇತ್ತು. ಉದ್ಯಮ ಆರಂಭಿಸುವ ಬಗೆ, ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ಮಾರ್ಗೋಪಾಯಗಳು, ಉತ್ಪನ್ನಗಳನ್ನು ರಫ್ತು ಮಾಡುವುದು ಹೇಗೆ? ದೇಶಿ ಕಂಪೆನಿಗಳ ಜತೆ ಸಂಪರ್ಕ ಸಾಧಿಸುವುದು ಹೇಗೆ ಎಂಬ ಬಗ್ಗೆ ಈ ಗೋಷ್ಠಿಯಲ್ಲಿ ವಿಸ್ತೃತವಾದ ಮಾಹಿತಿ ನೀಡಲಾಗಿದೆ. ಮಹಿಳಾ ಉದ್ಯಮಿಗಳಿಗೆ ಇಂತಹ ಮಾಹಿತಿಯಿಂದ ಉಪಯುಕ್ತವಾಗಲಿದೆ’ ಎಂದು ಮಹಿಳಾ ಉದ್ಯಮಿಗಳ ಒಕ್ಕೂಟ (ಕೋವೆ)ದ ಅಧ್ಯಕ್ಷೆ ರೂಪಾರಾಣಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಮಹಿಳೆಯರಿಗೆ ಆದ್ಯತೆ: ‘ಈ ಬಾರಿ ವಸ್ತುಪ್ರದರ್ಶನದಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಮಹಿಳಾ ಉದ್ಯಮಗಳಿಗೆ ವಿಶೇಷ ಆದ್ಯತೆ ಸಿಕ್ಕಿದೆ. ಮಳಿಗೆಗಳನ್ನು ಸ್ಥಾಪಿಸಲು ಐದು ಮಹಿಳಾ ಸಂಘಟನೆಗಳಿಗೆ ರಿಯಾಯಿತಿ ದರದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವುದಕ್ಕೆ ಸರ್ಕಾರದ ವತಿಯಿಂದ ಪ್ರತ್ಯೇಕ ಘಟಕ ಸ್ಥಾಪಿಸಲು ತೀರ್ಮಾನಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಇಲಾಖೆಗೆ ಮಹಿಳೆಯೊಬ್ಬರು (ಕೆ. ರತ್ನಪ್ರಭಾ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವುದು ಕೂಡಾ ಇದಕ್ಕೆ ಕಾರಣ’ ಎನ್ನುತ್ತಾರೆ ರೂಪಾರಾಣಿ.
‘ವಿ ಕನೆಕ್ಟ್’ ಎಂಬ ಕಂಪೆನಿಯ ಮೂಲಕ ಮಹಿಳಾ ಉದ್ಯಮಿಗಳ ತರಬೇತಿಗೆ ಹಾಗೂ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವುದಕ್ಕೆ ನೆರವು ನೀಡುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದ ಕೆಲವು ಮಹಿಳಾ ಉದ್ಯಮಿಗಳು ರಾಜ್ಯದ ಮಹಿಳಾ ಉದ್ಯಮಿಗಳ ಜತೆ ವಿಚಾರ ವಿನಿಮಯ ನಡೆಸಲು ಹಾಗೂ ಪರಸ್ಪರ ಮಾರುಕಟ್ಟೆ ಕಂಡುಕೊಳ್ಳಲು ಆಸಕ್ತಿ ತೋರಿಸಿದ್ದಾರೆ ಎಂದರು.
‘ಕಳೆದ ಬಾರಿಯ ಹೂಡಿಕೆದಾರರ ಸಮಾವೇಶದಲ್ಲಿ ಮಹಿಳೆಯರಿಗೆ ಇಷ್ಟು ಮಹತ್ವ ಸಿಕ್ಕಿರಲಿಲ್ಲ’ ಎಂದರು.
‘ಉದ್ಯಮ ಆರಂಭಿಸುವ ಮಹಿಳೆಯರಿಗೆ ಅಗತ್ಯ ಮಾರ್ಗದರ್ಶನ ನೀಡುವುದಾಗಿ ವಿಪ್ರೊ ಮುಖ್ಯಸ್ಥ ಅಜೀಮ್ ಪ್ರೇಮ್‌ಜೀ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರಂತಹ ಪ್ರಮುಖ ಉದ್ಯಮಿಗಳು ಪ್ರಕಟಿಸಿದ್ದಾರೆ. ಇಂತಹ ಉಪಕ್ರಮಗಳು ಸಹಜವಾಗಿ ಮಹಿಳೆಯರಲ್ಲಿ ಹೆಚ್ಚು ಉತ್ಸಾಹ ಮೂಡಿಸಲಿವೆ’ ಎನ್ನುತ್ತಾರೆ ಮಹಿಳಾ ಉದ್ಯಮಿ ಉಷಾರಾಣಿ ಶಂಕರ್. ಅವರು ‘ಯುಆರ್‌ಎಸ್ ಕನ್ಸ ಲ್ಟಂಟ್ಸ್’ ಉದ್ಯೋಗಾವಕಾಶ ಒದಗಿಸುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
‘ಸರ್ಕಾರ ಕೇವಲ ಭರವಸೆಗಳನ್ನು ನೀಡಿದರೆ ಸಾಲದು. ಮಹಿಳೆಯರು ನಡೆಸುತ್ತಿರುವ ಅನೇಕ ಸಂಸ್ಥೆಗಳು ರೋಗಗ್ರಸ್ತವಾಗಿವೆ. ಅವುಗಳ ಪುನಶ್ಚೇತನದ ಬಗ್ಗೆಯೂ ಪರಿಹಾರೋಪಾಯಗಳನ್ನು ಸೂಚಿಸಬೇಕು’ ಎನ್ನುತ್ತಾರೆ ಬಳ್ಳಾರಿಯಲ್ಲಿ ಉಕ್ಕು ಮತ್ತು ಮಿಶ್ರಲೋಹದ ಉದ್ಯಮವನ್ನು ನಡೆಸುತ್ತಿರುವ ಭಾರತಿ.
‘ಅನೇಕ ಬ್ಯಾಂಕ್‌ಗಳು ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಮುಂದೆ ಬಂದಿವೆ. ಉದ್ಯಮಕ್ಕೆ ಹಣಕಾಸು ವ್ಯವಸ್ಥೆ ಮಾಡುವ ಬಗ್ಗೆ ಸಮಾವೇಶದಲ್ಲಿ ಹೆಚ್ಚು ತಿಳಿವಳಿಕೆ ಸಿಕ್ಕಿದೆ’ ಎಂದು ಉದ್ಯಮಿ ಸುಮಾ ತಿಳಿಸಿದರು.
‘ವಿಶ್ವದ ವಿವಿಧ ದೇಶಗಳ ಉದ್ಯಮಿಗಳ ಜತೆ ಬೆರೆಯುವ ಅವಕಾಶ ಈ ಸಮಾವೇಶದಿಂದಾಗಿ ಲಭ್ಯವಾಗಿದೆ. ಇದು ಮಹಿಳಾ ಉದ್ಯಮಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ’ ಎಂದು ನಗರದಲ್ಲಿ ಆಸ್ಪತ್ರೆಯೊಂದನ್ನು ನಡೆಸುತ್ತಿರುವ ಗಾಯತ್ರಿ ಸುರೇಶ್ ಅವರು ಅಭಿಪ್ರಾಯಪಟ್ಟರು.