ಬೆಂಗಳೂರು, ಜ. ೨೫- ಉಗ್ರರರೆಂದು ಶಂಕಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರನ್ನು ಬಂಧಿಸಿರುವ ಬಗ್ಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಸಮಾಧಾನ, ಅತೃಪ್ತಿ ವ್ಯಕ್ತಪಡಿಸಿರುವ ಧೋರಣೆಯನ್ನು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರವರು ಟೀಕಿಸಿದ್ದಾರೆ.
ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಮುಸ್ಲಿಂ ಯುವಕರನ್ನು ಬಂಧಿಸಿ, ಮುಸ್ಲಿಂ ಎಂದರೆ ಭಯೋತ್ಪಾದಕರು ಎಂಬ ಭಾವನೆಯನ್ನು ಮೂಡಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆ ಎಂಬ ಮಟ್ಟುರವರ ಹೇಳಿಕೆ ವಿರುದ್ಧ ಕಿಡಿಕಾರಿರುವ ರಾಜ್ಯ ಬಿಜೆಪಿ ವಕ್ತಾರ ಸುರೇಶ್‌ಕುಮಾರ್, ಭಯೋತ್ಪಾದನೆಗೆ ಕೋಮು ಬಣ್ಣ ಹಚ್ಚುವುದು ಸರಿಯಲ್ಲ. ಭಯೋತ್ಪಾದನೆಗೆ ಜಾತಿ, ಧರ್ಮ ಯಾವುದೂ ಇಲ್ಲ. ಇಂತಹ ಹೇಳಿಕೆಗಳು ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಕಡಿಮೆ ಮಾಡುತ್ತವೆ ಎಂದು ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಂಕಿತ ಉಗ್ರರನ್ನು ಬಂಧಿಸಿದ ಬಗ್ಗೆ ಗೃಹ ಸಚಿವರು, ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಮಾತನಾಡಿರುವುದು ಸರಿಯಲ್ಲ. ಯಾವುದೇ ಮಾಧ್ಯಮ ಸಲಹೆಗಾರರಿಗೆ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳುವ ಸ್ವತಂತ್ರ ಇಲ್ಲ. ಅವರ ಕಾರ್ಯವ್ಯಾಪ್ತಿ ಮೀರಿ ಹೇಳಿಕೆ ನೀಡುವ ಮೂಲಕ ಸರ್ಕಾರದ ನಿಲುವನ್ನೇ ಪ್ರಶ್ನಿಸಿದ್ದಾರೆ ಎಂದರು.
ಮಾಧ್ಯಮ ಸಲಹೆಗಾರರ ಈ ಹೇಳಿಕೆ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಬೇಕು. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರದ ನಿಲುವನ್ನೆ ಪ್ರಶ್ನಿಸಿ ಹೇಳಿಕೆ ನೀಡಿರುವ ಮಾಧ್ಯಮ ಸಲಹೆಗಾರರ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ಅವರ ಧೋರಣೆ ಮಾತ್ರ ಬಹಳ ಅಪಾಯಕಾರಿಯಾದದ್ದು ಎಂದು ಅವರು ಹೇಳಿದರು.
ಮಾಧ್ಯಮ ಸಲಹೆಗಾರರ ಈ ಹೇಳಿಕೆ ಸರ್ಕಾರದ ವೈರುದ್ಧ್ಯವನ್ನು ಪ್ರತಿಬಿಂಬಿಸಿದೆ. ಮಾಧ್ಯಮ ಸಲಹೆಗಾರರು ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಸರ್ಕಾರದ ನಿಲುವಿಗೆ ಬದ್ಧರಾಗಬೇಕು. ಸರ್ಕಾರದ ನಿಲುವಿನ ಬಗ್ಗೆ ಸಂಘರ್ಷಕ್ಕೆ ಇಳಿಯುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಮುಖ್ಯಸ್ಥ ಎಸ್. ಪ್ರಕಾಶ್ ಉಪಸ್ಥಿತರಿದ್ದರು.
ಕರ್ನಾಟಕ